ADVERTISEMENT

ವಿದ್ಯಾರ್ಥಿಗಳಿಗೆ ಕಾನೂನು ತಿಳಿವಳಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 5:40 IST
Last Updated 1 ಡಿಸೆಂಬರ್ 2017, 5:40 IST

ಯಾದಗಿರಿ: ‘ಸಂವಿಧಾನ ಮಕ್ಕಳಿಗಾಗಿಯೇ ವಿಶೇಷ ಮೂಲಭೂತ ಹಕ್ಕುಗಳನ್ನು ಮೀಸಲಿಟ್ಟಿದೆ. ಅವುಗಳ ಪ್ರಯೋಜನ ಆಗಬೇಕು ಅಂದರೆ ಮಕ್ಕಳು ಕಾನೂನಿನ ತಿಳಿವಳಿಕೆ ಪಡೆಯಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ನಾಯಕ್‌ ಮಕ್ಕಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಬಾಲಭವನದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಬಾಲನ್ಯಾಯ ಕಾಯ್ದೆ–2015 ಹಾಗೂ ಮಕ್ಕಳ ಹಕ್ಕುಗಳು’ ಕುರಿತು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಹೆಣ್ಣುಮಕ್ಕಳಿಗೆ ಸಂವಿಧಾನ ವಿಶೇಷವಾಗಿ ಕೆಲವೊಂದು ಹಕ್ಕುಗಳನ್ನು ನೀಡಿದೆ. ಅಂತಹ ಹಕ್ಕುಗಳ ಬಗ್ಗೆ ವಿದ್ಯಾರ್ಥಿನಿಯರು ವಿದ್ಯಾರ್ಥಿ ದೆಸೆಯಲ್ಲಿಯೇ ಅರಿವು ಪಡೆಯುವುದರಿಂದ ಸಮಯ ಸಂದರ್ಭದಲ್ಲಿ ಅಂತಹ ಹಕ್ಕುಗಳನ್ನು ಚಲಾಯಿಸಬಹುದು. ಸಾಮಾಜಿಕ ನ್ಯಾಯ ಪಡೆಯಬಹುದು’ ಎಂದು ಸಲಹೆ ನೀಡಿದರು.

ADVERTISEMENT

‘ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಎಲ್ಲರೂ ತಿಳಿವಳಿಕೆ ಪಡೆಯಬೇಕು. ನ್ಯಾಯಾಂಗ ಇಲಾಖೆ, ಸರ್ಕಾರ ಬಡವರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟುವ ನಿಟ್ಟಿನಲ್ಲಿ ಬಡವರಿಗೆ ಉಚಿತವಾಗಿ ಕಾನೂನು ಸೇವೆಯನ್ನು ಪ್ರಾಧಿಕಾರ ನೀಡುವಂತೆ ವ್ಯವಸ್ಥೆ ಮಾಡಿದೆ.

ಆದರೆ, ಕಾನೂನು ಸೇವಾ ಪ್ರಾಧಿಕಾರ ಸದುಪಯೋಗವನ್ನು ಹೆಚ್ಚಿನ ಜನರು ಪಡೆದುಕೊಳ್ಳುತ್ತಿಲ್ಲ. ಕಾರಣ, ಅದರ ಬಗ್ಗೆ ಅರಿವು ಇಲ್ಲದಿರುವುದು. ವಿದ್ಯಾರ್ಥಿಗಳು ಇಂತಹ ವಿಶಿಷ್ಟ ಪ್ರಾಧಿಕಾರದ ಬಗ್ಗೆ ಅರಿವು ಪಡೆದು ಕುಟುಂಬದ ಸದಸ್ಯರಿಗೂ ತಿಳಿವಳಿಕೆ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಚಂದ್ರಶೇಖರ ಅಲ್ಲಿಪೂರ ಮಾತನಾಡಿ,‘ಸಂವಿಧಾನ ಬಡ ವರ್ಗಗಳ ನೆರವಿಗೆ ಅನೇಕ ಕಾನೂನುಗಳನ್ನು ಜಾರಿಗೊಳಿಸಿದೆ. ಅವುಗಳ ಉಪಯೋಗ ಪಡೆದು ಕೊಳ್ಳಬೇಕಾದವರು ಕಾನೂನುಗಳ ನೆರವು ಪಡೆದುಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಅನಕ್ಷರತೆ, ಇಚ್ಛಾಶಕ್ತಿ ಕೊರತೆಯಿಂದಾಗಿ ಜನರು ದೂರ ಉಳಿಯುತ್ತಿದ್ದಾರೆ. ಹಾಗಾಗಿ, ಸಮಾಜದಲ್ಲಿನ ಬಡ ಜನರಿಗೂ ಕಾನೂನು ನೆರವು ನೀಡುವಂತಹ ಸೇವಾ ಪ್ರಾಧಿಕಾರ ಇರುವ ಕುರಿತು ತಿಳಿವಳಿಕೆ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ, ಡಿವೈಎಸ್‌ಪಿ ಪಾಂಡುರಂಗ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಭೀಮರಾಯ ಕಿಲ್ಲನಕೇರಾ, ಬಾಲನ್ಯಾಯ ಮಂಡಳಿ ಸದಸ್ಯರಾದ ನಿರ್ಮಲಾ ಹೂಗಾರ, ಚಂದ್ರಕಾಂತ ಕಟ್ಟಿಮನಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಣಮಂತರಾಯ ಸಿ. ಕರಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಮಾಳಪ್ಪ ಎಸ್.ವಂಟೂರ, ಬಿ.ಜಿ.ಪಾಟೀಲ, ಚಂದ್ರಶೇಖರ ಲಿಂಗದಹಳ್ಳಿ, ಗೀತಾ, ಜಿಲ್ಲಾ ಅಂಗವಿಕಲ ಕಲ್ಯಾಣ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ ಪಾಟೀಲ ಇತರರು ಇದ್ದರು.

ವಿದ್ಯಾರ್ಥಿಗಳು ಹಾಜರ್; ಶಿಕ್ಷಕರು ಚಕ್ಕರ್
‘ಬಾಲನ್ಯಾಯ ಕಾಯ್ದೆ–2015’ ಮತ್ತು ‘ ಮಕ್ಕಳ ಹಕ್ಕುಗಳು’ ಕುರಿತು ವಿದ್ಯಾರ್ಥಿಗಳ ಜತೆಗೆ ಪ್ರೌಢಶಾಲೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗುರುವಾರ ವಿದ್ಯಾರ್ಥಿಗಳು ಹಾಜರಾಗಿದ್ದರು.ಆದರೆ, ಶಿಕ್ಷಕರು ಚಕ್ಕರ್ ಹೊಡೆದಿದ್ದರು.

ಜಿಲ್ಲೆಯಲ್ಲಿ ಎಲ್ಲೆಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ? ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಹೇಗೆ? ಅವುಗಳಿಗೆ ಸಂಬಂಧಿಸಿದಂತೆ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಪಡೆಯುವುದು ಹೇಗೆ? ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ? ಈ ದಿಸೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳೇನು? ಹೀಗೆ ಮಾಹಿತಿ ಕಣಜವನ್ನೇ ನೀಡುತ್ತಿದ್ದ ಕಾರ್ಯಾಗಾರಕ್ಕೆ ಬೆರಳೆಣಿಕೆಯಷ್ಟು ಶಿಕ್ಷಕರು ಹಾಜರಾಗಿರಲಿಲ್ಲ.

* * 

ವಿದ್ಯಾರ್ಥಿಗಳನ್ನು ಕಳುಹಿಸುವಂತೆ ಸೂಚಿಸ ಲಾಗಿದೆ. ಶಿಕ್ಷಕರನ್ನು ಕಾರ್ಯಾಗಾರಕ್ಕೆ ಕಳುಹಿಸುವಂತೆ ಗುರಿ ನೀಡಿರಲಿಲ್ಲ.
ರುದ್ರೇಗೌಡ ಪಾಟೀಲ ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.