ADVERTISEMENT

ವೀರಯೋಧನ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 6:20 IST
Last Updated 17 ಆಗಸ್ಟ್ 2012, 6:20 IST

ಶಹಾಪುರ:  ತಾಲ್ಲೂಕಿನ ಸಗರ ಗ್ರಾಮದ ವೀರಯೋಧ ಸುಭಾಸಚಂದ್ರ ಮಡಿವಾಳ ಹಾಗೂ ಸುರಪುರ ತಾಲ್ಲೂಕಿನ ಕವಡಿಮಟ್ಟಿ ಗ್ರಾಮದ ಶರಣಬಸವ ಕೆಂಗೂರಿಯವರು ದೇಶದ ಗಡಿ ಕಾಯುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ.

ಅಂತಹ ಕುಟುಂಬದ ಸದಸ್ಯರನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವ ಸೂಚಿಸಬೇಕಾಗಿತ್ತು. ತಾಲ್ಲೂಕು ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ. ತಕ್ಷಣ ತಾಲ್ಲೂಕು ಆಡಳಿತ ಕ್ಷಮೆ ಕೇಳಬೇಕೆಂದು  ತಳಮಟ್ಟದ ಸಮುದಾಯಗಳ ಚಿಂತನಾ ವೇದಿಕೆ(ತಮಸ) ಜಿಲ್ಲಾ ಸಂಚಾಲಕ ವಸಂತ ಸುರಪುರಕರ್ ಆಗ್ರಹಿಸಿದ್ದಾರೆ.

ವೀರ ಮರಣವನ್ನು ಅಪ್ಪಿದ ಸುಭಾಸಚಂದ್ರ ಮಡಿವಾಳ ಹಿಂದುಳಿದ ಅಗಸರ ಜಾತಿಗೆ ಸೇರಿದವರಾಗಿದ್ದರೆ ಶರಣಬಸವ ಕೆಂಗುರಿ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರನ್ನು ಗೌರವಿಸಿದರೆ ಆಯಾ ಸಮುದಾಯಗಳ ಗೌರವ ಹೆಚ್ಚಿಸಿದಂತೆ ಆಗುತ್ತಿತ್ತು.

ಹಿಂದುಳಿದ ಸಮುದಾಯಕ್ಕೆ ಸೇರಿದವರೆನ್ನುವ ಕಾರಣದಿಂದ ಕುಟುಂಬದ ಸದಸ್ಯರನ್ನು ಗೌರವಿಸದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಕಡು ಬಡತನದಲ್ಲಿರುವ ಸುಭಾಸಚಂದ್ರ ಹಾಗೂ ಶರಣಬಸವ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು.

ಸರ್ಕಾರಿ ಜಮೀನು ಮಂಜೂರು ಮಾಡಬೇಕು. ಅಲ್ಲದೆ ತಾಲ್ಲೂಕು ಕೇಂದ್ರದ ಪ್ರಮುಖ ಸ್ಥಳವೊಂದರಲ್ಲಿ ವೀರಯೋಧರ ಪುತ್ಥಳಿಯನ್ನು ಬರುವ ಸೆಪ್ಟಂಬರ 17ರ ಒಳಗೆ ತಾಲ್ಲೂಕು ಆಡಳಿತ ನೆರವೇರಿಸಬೇಕೆಂದು ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.