ADVERTISEMENT

ಶಿಕ್ಷಣ ರಂಗದ ಖಾಸಗೀಕರಣ: ಹುಳ್ಳಿ ಉಮೇಶ ಕಳವಳ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 9:20 IST
Last Updated 13 ಸೆಪ್ಟೆಂಬರ್ 2011, 9:20 IST

ಸುರಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಿಕ್ಷಣ ರಂಗವನ್ನು ಬಲಪಡಿಸಬೇಕೆಂಬ ಇಚ್ಛಾಶಕ್ತಿಯ ಕೊರತೆಯಿದೆ. ತಾವು ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳಲು ಅನುಕೂಲವಾಗುವ ಖಾತೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿವೆ. ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರದಲ್ಲಿ ತೊಡಗಿವೆ ಎಂದು ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷ ಕಾಮ್ರೆಡ್ ಹುಳ್ಳಿ ಉಮೇಶ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಗಾಂಧಿವೃತ್ತದಲ್ಲಿ ಸೋಮವಾರ ಭಾರತ ವಿದ್ಯಾರ್ಥಿ ಫೆಡರೇಶನ್‌ದ (ಎಸ್.ಎಫ್.ಐ.) 5ನೇ ತಾಲ್ಲೂಕು ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಶಿಕ್ಷಣದ ವ್ಯಾಪಾರೀಕರಣ ಮತ್ತು ಜಾತ್ಯತೀತದ ವಿರುದ್ಧ ನೀತಿಗಳನ್ನು ರಾಜ್ಯದ ಬಿಜೆಪಿ ಸರ್ಕಾರ ಜಾರಿಗೊಳಿಸುತ್ತಿದೆ. ಶುಲ್ಕ ಏರಿಕೆ, ಡೊನೇಶನ್ ಹಾವಳಿಗೆ ರತ್ನಗಂಬಳಿ ಹಾಸುತ್ತಿರುವ ಸರ್ಕಾರ ಶ್ರೀಮಂತರು ಮಾತ್ರ ಶಿಕ್ಷಣವನ್ನು ಪಡೆಯುವಂತೆ ಮಾಡುತ್ತಿದೆ ಎಂದು ದೂರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ತೆರಿಗೆಯ ಹಣವನ್ನು ಲೂಟಿ ಹೊಡೆಯುತ್ತಿವೆ. ಎರಡೂ ಸರ್ಕಾರಗಳ ಕೆಲ ಸಚಿವರು ಜೈಲು ಪಾಲಾಗಿದ್ದಾರೆ. ಇನ್ನೂ ಬಹಳಷ್ಟು ಜನ ಈ ದಾರಿಯಲ್ಲಿದ್ದಾರೆ. ಇಷ್ಟಾದರೂ ಇಂತಹ ಜನರಿಗೆ ಬುದ್ಧಿ ಬಂದಿಲ್ಲ. ಜನರು ಇವರ ವಿರುದ್ಧ ಬಂಡೇಳುವ ಕಾಲ ದೂರವಿಲ್ಲ ಎಂದು ಅಭಿಪ್ರಾಯಪಟ್ಟರು.

ಎಸ್.ಎಫ್.ಐ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಹೋರಾಟ ಮಾಡುತ್ತಾ ಬಂದಿದೆ. ವಿದ್ಯಾರ್ಥಿ ಶಕ್ತಿ ಮಹತ್ತರವಾದದ್ದು. ಸಂಘಟನೆ ಮತ್ತು ಹೋರಾಟದಿಂದ ಮಾತ್ರ  ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ವಿದ್ಯಾರ್ಥಿಗಳು ಸಂಘಟಿತರಾಗಿ ಎಸ್.ಎಫ್.ಐ.ಗೆ ಬಲ ತುಂಬಿ. ಹೋರಾಟ ಮಾಡಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಯತ್ನಿಸಿ ಎಂದು ಕರೆ ನೀಡಿದರು.

ಸಿ.ಐ.ಟಿ.ಯು. ಜಿಲ್ಲಾ ಅಧ್ಯಕ್ಷೆ ಸುರೇಖಾ ಕುಲಕರ್ಣಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪಗೌಡ ಮಾಲಿಪಾಟೀಲ, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಚಿನ್ನಾಕಾರ್, ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಅಧ್ಯಕ್ಷ ಪ್ರಕಾಶ ಆಲ್ಹಾಳ ಮಾತನಾಡಿದರು.

ಸೀತಾರಾಮ ರಾಠೋಡ ಸ್ವಾಗತಿಸಿದರು. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಮಯ್ಯ ಬೋಯಿ ನಿರೂಪಿಸಿದರು. ರವಿಚಂದ್ರ ಬಿಜಾಸಪುರ ವಂದಿಸಿದರು.

ಕಾರ್ಯಕ್ರಮಕ್ಕೆ ಮೊದಲು ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳ ರ‌್ಯಾಲಿ ನಡೆಸಲಾಯಿತು.

ಮಲ್ಲು ದೇಸಾಯಿ, ಶಿವು ವಡಿಗೇರಿ, ಸಿದ್ದು ನಡಕೂರ, ಜಟ್ಟೆಪ್ಪ ಭಂಟನೂರ, ಅಶೋಕ ಹದನೂರ, ತಿಪ್ಪಣ್ಣ ಸಾಹುಕಾರ್, ಪರಮಣ್ಣ ಬಿಜಾಸಪುರ, ಹಣಮಂತ ಹೂವಿನಳ್ಳಿ, ಜಗದೀಶ ಬಡಿಗೇರ, ಭೀಮಪ್ಪ ಹೂವಿನಳ್ಳಿ, ಸಿದ್ಧಾರ್ಥ ಆಲ್ಹಾಳ, ವೆಂಕೋಬ ಕಟ್ಟಿಮನಿ, ನಿಂಗಣ್ಣ ತಿಮ್ಮಾಪುರ, ರೇವಣಸಿದ್ದ ಅರಿಕೇರಾ, ತಿಮ್ಮಯ್ಯ ಟಿಳೆ, ರಫೀಕ್ ಸುರಪುರ, ಮರಿಲಿಂಗಪ್ಪ ಬಿಜಾಸಪುರ, ಹುಸನಪ್ಪ ಬಾಚಿಮಟ್ಟಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.