ಶಹಾಪುರ: ಕೃಷ್ಣಾಅಚ್ಚುಕಟ್ಟು ಪ್ರದೇಶದ ತಾಲ್ಲೂಕಿನ ಹೆಚ್ಚಿನ ರೈತರು ಬೇಸಿಗೆ ಹಂಗಾಮಿನ ಬೆಳೆಯಾಗಿ ಶೇಂಗಾ ಬೆಳೆಯತ್ತ ವಾಲಿದ್ದಾರೆ. ಉತ್ತಮ ಧಾರಣಿ ಹಾಗೂ ಬಂಪರ್ ಇಳುವರಿ ಬರುವ ನಿರೀಕ್ಷೆಯಲ್ಲಿದ್ದಾರೆ.
ಶೇಂಗಾ ಬೆಳೆಯು 125 ದಿನಗಳ ಬೆಳೆಯಾಗಿದೆ. ದುಬಾರಿ ಬೆಲೆಯಾದ ಪ್ರತಿ ಕ್ವಿಂಟಾಲ್‌ಗೆ 10,000 ರೂಪಾಯಿಯಂತೆ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಈಗಾಗಲೇ 15-20 ದಿನಗಳ ಬೆಳೆಗಳಿವೆ. ತಾಲ್ಲೂಕಿನ ಅಧಿಕ ರೈತರು ಬೇಸಿಗೆ ಹಂಗಾಮಿನಲ್ಲಿ ನಾರಾಯಣಪೂರ ಜಲಾಶಯದ ನೀರಿನ ಸಮಸ್ಯೆ ಉದ್ಬವಿಸುವುದು ಎಂಬ ಭೀತಿಯಲ್ಲಿ ಸಜ್ಜೆ ಹಾಗೂ ಅಷ್ಟೊಂದು ಉತ್ತಮ ಇಳುವರಿ ಬಾರದ ಹತ್ತಿ ಹೊಲವನ್ನು ಹಸನಗೊಳಿಸಿ ತುಸು ಬೇಗ ಬಿತ್ತನೆ ಮಾಡಿದ್ದೇವೆ.
ಭತ್ತ ನಾಟಿಯಿಂದ ಸಾಕಷ್ಟು ಹೈರಾಣಗೊಂಡಿದ್ದೇವೆ. ಬೆಲೆ ಕುಸಿತ ಹಾಗೂ ಗಗನಮುಖಿಯಾದ ರಸಗೊಬ್ಬರದ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದೇವೆ. ಬೇಸಿಗೆ ಕಾಲದಲ್ಲಿ ನೀರಿನ ತೊಂದರೆ ಅನುಭವಿಸುವುದಕಿಂತ ಅವಧಿಗಿಂತ ಮುಂಚೆ ಬೆಳೆ ಕೈಗೆ ಬರುತ್ತದೆ ಎಂಬ ಆಶಯ ರೈತ ದೇವಿಂದ್ರಪ್ಪನದು.
ಪ್ರತಿ 10-12 ದಿನಗಳಿಗೊಮ್ಮೆ ನೀರು ಹರಿಸಿದರೆ ಸಾಕು.
ಒಂದಿಷ್ಟು ರಸಗೊಬ್ಬರ ಹಾಗೂ ಕ್ರಿಮಿನಾಶಕ ಔಷದಿ ಸಿಂಪರಣೆ ಮಾಡುತ್ತಾ ಸಾಗಬಹುದು. ಪ್ರತಿ ಎಕರೆಗೆ 15ರಿಂದ 18 ಸಾವಿರ ರೂಪಾಯಿ ಖರ್ಚು ಬರುತ್ತದೆ. ಉತ್ತಮ ಇಳುವರಿ ಬಂದರೆ ಬೆವರಿನ ಬೆಲೆಗೆ ಲುಕ್ಷಾಣ ಇಲ್ಲ. ಈಗ ಶೀತಗಾಳಿ ಬೀಸುತ್ತಿದ್ದು ರೋಗ ಹರಡುವ ಭೀತಿ ಉಂಟಾಗಿದೆ. ಕೃಷಿ ಇಲಾಖೆ ಪ್ರಕಾರ ಡಿಸೆಂಬರ್ ವಾರದಲ್ಲಿ ಶೇಂಗಾ ಬಿತ್ತನೆ ಮಾಡಬೇಕು ಎಂಬ ಸಲಹೆ ಇದೆ.
ನೀರಿನ ತೊಂದರೆಯಿಂದ ಆದಷ್ಟು ಬೇಗ ಬಿತ್ತನೆ ಕೈಗೊಂಡಿದ್ದೇವೆ. ಸರ್ಕಾರ ಪ್ರತಿ ಕ್ವಿಂಟಲ್ ಶೇಂಗಾಕ್ಕೆ ಈಗಿನಿಂದಲೇ ಬೆಂಬಲ ಬೆಲೆ ನಿಗದಿಪಡಿಸಿದರೆ ಬೆಳೆ ಕೈಗೆ ಬರುವ ಸಮಯದಲ್ಲಿ ಬೆಲೆ ಕುಸಿತ ತಡೆಯಲು ಸಾಧ್ಯ. ಇಲ್ಲವಾದರೆ ಮತ್ತೆ ಅದೇ ರಾಗ ಅದೇ ಹಾಡಿನಂತೆ ಅನ್ನದಾತನ ಗೋಳು ಮುಂದುವರೆಯುವುದು ಎನ್ನುತ್ತಾರೆ ರೈತ ಶಿವಣ್ಣ.
ಮೇವು: ಶೇಂಗಾ ಬಿತ್ತನೆಯಿಂದ ಒಂದಿಷ್ಟು ಜಾನುವಾರುಗಳಿಗೆ ಮೇವಿನ ಬರ ನೀಗುವುದು. ಶೇಂಗಾದ ಹೊಟ್ಟು (ಸೊಪ್ಪು) ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಉಪಯುಕ್ತ ಆಹಾರವಾಗುತ್ತದೆ. ಇಲ್ಲದಿದ್ದರೆ ಮೇವಿನ ಸಮಸ್ಯೆ ಉಂಟಾಗುತ್ತದೆ ಎನ್ನುವ ಕಾರಣದಿಂದ ಶೇಂಗಾ ಬಿತ್ತನೆ ಮಾಡಲಾಗಿದೆ.
ಮಾರುಕಟ್ಟೆ: ತಾಲ್ಲೂಕಿನಲ್ಲಿ ಪ್ರತ್ಯೇಕ ಶೇಂಗಾ ಖರೀದಿ ಮಾರುಕಟ್ಟೆ ಸ್ಥಾಪಿಸಬೇಕು. ದಲ್ಲಾಳಿಗಳಿಗೆ ಅವಕಾಶ ನೀಡಬಾರದೆಂದು ಶೇಂಗಾ ಬಿತ್ತನೆ ಮಾಡಿದ ರೈತರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.