ADVERTISEMENT

ಸಮಾನತೆಯಿಂದ ದೇಶದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 10:25 IST
Last Updated 7 ಜನವರಿ 2012, 10:25 IST
ಸಮಾನತೆಯಿಂದ ದೇಶದ ಅಭಿವೃದ್ಧಿ
ಸಮಾನತೆಯಿಂದ ದೇಶದ ಅಭಿವೃದ್ಧಿ   

ಯಾದಗಿರಿ: ಎಲ್ಲ ವರ್ಗದ ಜನರಲ್ಲಿ ಸಮಾನತೆ ಮೂಡಿದಾಗ ಮಾತ್ರ ದೇಶದ ಸರ್ವಾಂಗೀಣ ಪ್ರಗತಿ ಸಾಧಿಸಲು ಸಾಧ್ಯ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘ ವಲಯ ಘಟಕದ ವತಿಯಿಂದ ಶುಕ್ರವಾರ ತಾಲ್ಲೂಕಿನ ಸೈದಾಪುರದಲ್ಲಿ ಹಮ್ಮಿಕೊಂಡಿದ ಕನಕದಾಸರ ಜಯಂತ್ಯುತ್ಸವ ಹಾಗೂ ಕನಕ ಭವನದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಕುರುಬ ಸಮಾಜದ ಜನತೆ ಕಾಯಕ ಜೀವಿಗಳು. ಎಲ್ಲರೂ ಅಕ್ಷರ ಜ್ಞಾನ ಹೊಂದಿ ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.

ಕನಕದಾಸರು ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದಾರೆ. ಅಂಥವರ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ರೂ. 10 ಲಕ್ಷ ಹಣ ನೀಡುತ್ತೇನೆ. ಜೊತೆಗೆ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೆನೆ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರವು ಎಲ್ಲ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ರೂ. 41 ಸಾವಿರ ಕೋಟಿ ಹಣ ಖರ್ಚು ಮಾಡಿದೆ. ಇಂದಿರಾ ಗಾಂಧಿ ಅವಧಿಯಲ್ಲಿ ಲಕ್ಷಾಂತರ ಭೂಮಿ ರಹಿತ ರೈತರಿಗೆ ಜಮಿನು ನೀಡಲಾಯಿತು. ಎಲ್ಲ ಜನರಿಗೆ ಆಹಾರ ಸಿಗುವ ದೃಷ್ಟಿಯಿಂದ ಆಹಾರ ಭದ್ರತೆ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಿದ್ದು, ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ಸಾಮಾನ್ಯ ಜನರ ಆರೋಗ್ಯ ತಪಾಸಣೆಗೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ರಾಜ್ಯ ಸರ್ಕಾರ ಮಾತ್ರ ಅಭಿವೃದ್ಧಿ ಕಡೆಗೆ ಗಮನ ನೀಡುತ್ತಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಾಬುರಾವ ಚಿಂಚನಸೂರ ಮಾತನಾಡಿ, ಖರ್ಗೆಯವರ ಮಾದರಿಯಲ್ಲಿಯೇ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಕನಕ ಭವನ ನಿರ್ಮಾಣಕ್ಕೆ ಹಾಗೂ ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ ರೂ. 5 ಲಕ್ಷ ಅನುದಾನ ನೀಡುವುದಾಗಿ ಹೇಳಿದರು.

ಶಾಸಕರಾದ ಡಾ. ಎ.ಬಿ. ಮಾಲಕರೆಡ್ಡಿ, ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಜಿಲ್ಲಾ ಪಂಚಾಯಿತಿ ಸದಸ್ಯ ಶರಣೀಕ್‌ಕುಮಾರ ದೋಖಾ, ಕೆಪಿಸಿಸಿ ಸದಸ್ಯರಾದ ಬುಚ್ಚಣ ಜೈಗ್ರಾಮ, ಮೌಲಾಲಿ ಅನಪೂರ, ಭಾಗಣ್ಣಗೌಡ ಸಂಕನೂರ, ವೀರಣ್ಣಗೌಡ ಪರಸರಡ್ಡಿ, ನಿಂಗಣ್ಣ ಚಿಂಚೋಡಿ, ಶಾಂತಪ್ಪ, ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷ ಸಾಯಿಬಣ್ಣ ಕೆಂಗೂರಿ, ಪ್ರಭುಲಿಂಗ ವಾರದ, ಸಿದ್ಧಣ್ಣ ಕಾಡಂನೋರ್, ಚಂದ್ರಶೇಖರ ವಾರದ, ಎಪಿಎಂಸಿ ಸದಸ್ಯ ಮಲ್ಲಣ್ಣ ಜೈಗ್ರಾಮ್, ಮಲ್ಲರಡ್ಡಿ ಕಣೇಕಲ್, ಮಲ್ಲಯ್ಯ ಕಮತಗಿ, ಸಿದ್ಧಣ್ಣಗೌಡ ಕಡೇಚೂರ, ಬಸವರಾಜ ಸ್ವಾಮಿ ಬದ್ದೇಪಲ್ಲಿ, ಬಸವರಾಜಪ್ಪಗೌಡ ಗೊಂದಡಿಗಿ, ಮಲ್ಲಣಗೌಡ ಕ್ಯಾತನಾಳ ಮತ್ತಿತರರು ವೇದಿಕೆಯಲ್ಲಿದ್ದರು.

ಡಾ. ಮಲ್ಲಿಕಾ ಘಂಟಿ ವಿಶೇಷ ಉಪನ್ಯಾಸ ನೀಡಿದರು. ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಮಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ನೀಲಳ್ಳಿ ಸ್ವಾಗತಿಸಿದರು. ಶ್ರೀಶೈಲ ಪೂಜಾರಿ ನಿರೂಪಿಸಿದರು. ಪರಮೇಶ ವಾರದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.