ADVERTISEMENT

‘ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ: ಮಂಜುನಾಥಸ್ವಾಮಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 6:37 IST
Last Updated 30 ಮಾರ್ಚ್ 2018, 6:37 IST
ಬಿ.ಎಸ್.ಮಂಜುನಾಥ ಸ್ವಾಮಿ
ಬಿ.ಎಸ್.ಮಂಜುನಾಥ ಸ್ವಾಮಿ   

ಯಾದಗಿರಿ: ತೀರಾ ಖಾಸಗಿ, ಕುಟುಂಬ ಗಳ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳ ಸಹಭಾಗಿತ್ವ ಇದ್ದರೆ ಮಾದರಿ ನೀತಿ ಸಂಹಿತೆ ಸಾರ್ವಜನಿಕರಿಗೂ ಅನ್ವಯವಾಗುತ್ತದೆ ಎಂಬುದಾಗಿ ಯಾದಗಿರಿ ಮತಕ್ಷೇತ್ರದ ಚುನಾವಣಾ ಅಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ನೀತಿ ಸಂಹಿತೆ ನಮಗೆ ಅನ್ವಯಿಸುವುದಿಲ್ಲ ಎಂಬುದಾಗಿ ಸಾರ್ವಜನಿಕರು ತಿಳಿದುಕೊಂಡಿದ್ದಾರೆ. ಮದುವೆ ಅಥವಾ ಹುಟ್ಟುಹಬ್ಬ, ಮದುವೆ ನಿಶ್ಚಿತಾರ್ಥ, ನಾಮಕರಣದಂತಹ ತೀರಾ ಖಾಸಗಿ ಸಮಾರಂಭಗಳಲ್ಲಿ ರಾಜಕಾರಣಿಗಳು ಭಾಗವಹಿಸಿ ಪಕ್ಷದ ಪರ ಮಾತನಾಡಿದರೆ ಇಲ್ಲವೇ ಒಂದು ವೇಳೆ ರಾಜಕಾರಣಿಗಳಲ್ಲದೇ ಒಬ್ಬ ಸಾಮಾನ್ಯ ವ್ಯಕ್ತಿ ನಿರ್ದಿಷ್ಟ ಪಕ್ಷ, ಅಭ್ಯರ್ಥಿಯ ಪರ ಮತಯಾಚಿಸುವಂತಹ, ಓಲೈಸುವಂತ ಮಾತುಗಳನ್ನಾಡಿದರೂ ಅಲ್ಲಿ ನಡೆಯುವ ಸಮಾರಂಭದ ಅರ್ಧದಷ್ಟು ಖರ್ಚನ್ನು ಹೆಸರು ಪ್ರಸ್ತಾಪಗೊಂಡ ಅಭ್ಯರ್ಥಿಯ ಚುನಾವಣಾ ಲೆಕ್ಕಪತ್ರಕ್ಕೆ ಸೇರಿಸುವಂತೆ ನೀತಿ ಸಂಹಿತೆ ಕಟ್ಟಳೆ ಸೂಚಿಸುತ್ತದೆ’ ಎಂದು ಗುರುವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಯಾವುದಕ್ಕೆ ಅನುಮತಿ ಬೇಕು?: ಸಾರ್ವಜನಿಕರವಾಗಿ ತೆರೆದುಕೊಳ್ಳದೆ ಕುಟುಂಬ, ಬಂಧು ಬಳಗ ಕೂಡಿಕೊಂಡು ಮಾಡಿಕೊಳ್ಳುವ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಮಾದರಿ ನೀತಿ ಸಂಹಿತೆಯಡಿ ಅನುಮತಿ ಪಡೆಯುವಂತಿಲ್ಲ.

ADVERTISEMENT

ಅದೇ ಸಮಾರಂಭ ಸಾರ್ವಜನಿಕವಾಗಿ ತೆರೆದುಕೊಂಡರೆ 24 ಗಂಟೆ ಮುಂಚಿತವಾಗಿ ಚುನಾವಣಾ ಅಧಿಕಾರಿ, ಪೊಲೀಸ್ ಅಧಿಕಾರಿಗಳಿಂದ ಡಿಕ್ಲರೇಷನ್ ಸಹಿತ ಅನುಮತಿ ಪಡೆಯಬೇಕು. ₹10 ಮೌಲ್ಯದ ಅಫೀಡವಿಟ್‌ ನಲ್ಲಿ ಡಿಕ್ಲರೇಷನ್ ಸಲ್ಲಿಸಬೇಕು’ ಎಂದು ಚುನಾವಣಾ ಅಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಮಾಹಿತಿ ನೀಡಿದರು.

‘ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣ, ಪ್ರಸಾರ, ಪ್ರದರ್ಶನ ಹಾಗೂ ಪತ್ರಿಕಾ, ವಿದ್ಯುನ್ಮಾನ, ಸಾಮಾಜಿಕ ಜಾಲತಾಣಗಳಲ್ಲಿನ ಜಾಹೀರಾತುಗಳಿಗೆ ಎಂಸಿಸಿ ಹಾಗೂ ಎಂಸಿಎಂಸಿಎ ಸಮಿತಿಯ ಅನುಮತಿ ಕಡ್ಡಾಯ. ಅನುಮತಿ ರಹಿತವಾಗಿ ಪ್ರಕಟಿಸುವುದು ಶಿಕ್ಷಾರ್ಹ ಅಪರಾಧವಾಗಿದೆ’ ಎಂದರು.

‘ಪ್ರಚಾರದ ಕಾರ್ಯಕ್ಕೆ 18 ವರ್ಷದ ಕೆಳಗಿನ ಮಕ್ಕಳನ್ನು ಬಳಸಿಕೊಂಡರೆ ಬಾಲಕಾರ್ಮಿಕ ಕಾಯ್ದೆ ಅನುಸಾರ ಕ್ರಮಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ರಾಜಕೀಯ ಪಕ್ಷಗಳು ಪರಿಸರ ಸ್ನೇಹಿ ಪ್ರಚಾರ ಸಾಮಗ್ರಿಗಳನ್ನು ಬಳಸಬೇಕು ಎಂಬುದಾಗಿ ಮಾದರಿ ನೀತಿ ಸಂಹಿತೆ ಸೂಚಿಸಿದೆ’ ಎಂಬುದಾಗಿ ಅವರು ತಿಳಿಸಿದರು.

**

ನೀತಿ ಸಂಹಿತೆ ಸಾರ್ವಜನಿಕರನ್ನು ಹೊರತುಪಡಿಸಿ ಇಲ್ಲ. ಸಾರ್ವಜನಿಕರು ಭಯಪಡುವ ಅಗತ್ಯ ಇಲ್ಲ. ರಾಜಕೀಯ ಪ್ರೇರಿತ ಘಟನೆಗಳು ಇರದಂತೆ ಖಾಸಗಿ ಕಾರ್ಯಕ್ರಮಗಳು ನಡೆಸಬಹುದು.

–ಬಿ.ಎಸ್.ಮಂಜುನಾಥ ಸ್ವಾಮಿ, ಚುನಾವಣಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.