ADVERTISEMENT

ಸೌಲಭ್ಯಗಳಿಗಾಗಿ ಒಗ್ಗಟ್ಟು ಅವಶ್ಯಕ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 9:15 IST
Last Updated 14 ನವೆಂಬರ್ 2012, 9:15 IST

ಯಾದಗಿರಿ:  ಹಿಂದುಳಿದ ದಲಿತ ಜನಾಂಗಕ್ಕೆ ಸರ್ಕಾರ ಸೌಲಭ್ಯಗಳು ದೊರಕಬೇಕಾದರೆ ದಲಿತ ಸಂಘರ್ಷ ಸಮಿತಿ ಶ್ರಮಿಸಬೇಕು ಎಂದು ಉಪನ್ಯಾಸಕ ಡಾ.ರವೀಂದ್ರನಾಥ ಹೊಸ್ಮನಿ ಹೇಳಿದರು.

ಭಾನುವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ದಲಿತ ಸಂಘರ್ಷ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಇಂದು ಸಂಘಟನೆಗಳಲ್ಲಿ ಸ್ವಾರ್ಥ ಪರ ಚಿಂತನೆಗಳು ಹೆಚ್ಚಾಗಿದ್ದು, ಇದರಿಂದ ನಮ್ಮಲ್ಲಿ ಒಗ್ಗಟ್ಟು ಕಡಿಮೆಯಾಗುತ್ತಿದೆ. ಸರ್ಕಾರಗಳು ನಮ್ಮನ್ನು ಶೋಷಿತರನ್ನಾಗಿಯೇ ಉಳಿಯುವಂತೆ ಮಾಡಿದ್ದು, ಇನ್ನಾದರೂ ಸಾಮೂಹಿಕ ಹೋರಾಟದ ದಾರಿ ತುಳಿಯಬೇಕಿದೆ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ದಲಿತ ಜನಾಂಗ ಶೈಕ್ಷಣಿಕವಾಗಿ ಮುಂದೆ ಬರಬೇಕು. ಆಳುವ ವರ್ಗವಾಗಬೇಕು ಎಂಬ ಮಹಾತ್ವಾಕಾಂಕ್ಷೆಯ ಕನಸನ್ನು ಕಂಡಿದ್ದರು. ಆದರೆ ನಮ್ಮಲ್ಲಿನ ಬಿನ್ನಾಭಿಪ್ರಾಯಗಳಿಂದಾಗಿ ನಾವು ಒಗ್ಗಟ್ಟಾಗದೇ ಕಚ್ಚಾಡಿಕೊಳ್ಳುತ್ತಿದ್ದೇವೆ ಎಂದರು.

ಸಮಿತಿಯ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಮಾತನಾಡಿ, ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ವ್ಯವಸ್ಥಿತವಾಗಿ ಸಂಘಟಿಸುತ್ತಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಕೊಡಲು ಪ್ರತಿಯೊಬ್ಬರು ಸಿದ್ಧರಾಗಿರಬೇಕು ಎಂದರು.

ಗೋಪಾಲ ತಳಿಗೇರಾ, ಶರಣಪ್ಪ ಕೊಂಬಿನ, ಪ್ರಭು ಬೊಮ್ಮನ, ಶಿವಕುಮಾರ ಕುರಕುಂಬಳ, ಹಣಮಂತ ವಲ್ಯಾಪುರೆ ಸೇರಿದಂತೆ ಇನ್ನಿತರರು ಇದ್ದರು.

ಇದೇ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಜಿಲ್ಲಾ ಘಟಕದ ಪದಾಧಿಕಾರಿಗಳಾಗಿ ಹೊನ್ನಪ್ಪ ಯಡ್ಡಳ್ಳಿ, ಮಲ್ಲಿನಾಥ ಸುಂಗಲಕರ್ (ಉಪ ವಿಭಾಗ ಸಂಚಾಲಕರು), ತಾಲ್ಲೂಕು ಘಟಕದ ಪದಾಧಿಕಾರಿಗಳಾಗಿ ಲಕ್ಷ್ಮಣ ನಾಟೇಕರ್ (ಸಂಚಾಲಕ), ಭೀಮರಾಯ ಬಳಿಚಕ್ರ, ನಿಂಗಪ್ಪ ಶಹಾಪುರ, ಶರಣಪ್ಪ ಹೊಸಮನಿ, ಮಹಿಪಾಲರಡ್ಡಿ ಮನಗನಾಳ  (ಸಂಘಟನಾ ಸಂಚಾಲಕರು) ಮತ್ತು ಮರಿಲಿಂಗ ಬದ್ದೇಪಲ್ಲಿ, ರಾಜು ಯಲಸತ್ತಿ, ಬಸವರಾಜ ರಾಜನಳ್ಳಿ, ಮಹಾದೇವಪ್ಪ ಬದ್ದೇಪಲ್ಲಿ (ಸದಸ್ಯರು) ಅವರನ್ನು ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.