ADVERTISEMENT

‘ಅಧಿಕಾರಿಗಳೇ, ಕಾರಣ ಹೇಳಬೇಡಿ ಕೆಲಸ ಮಾಡಿ’

ಗುರಮಠಕಲ್ ಕ್ಷೇತ್ರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಬಾಬುರಾವ ಚಿಂಚನಸೂರ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2016, 9:54 IST
Last Updated 6 ಆಗಸ್ಟ್ 2016, 9:54 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುಮಠಕಲ್ ಕ್ಷೇತ್ರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಬಾಬುರಾವ ಚಿಂಚನಸೂರ ಮಾತನಾಡಿದರು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುಮಠಕಲ್ ಕ್ಷೇತ್ರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಬಾಬುರಾವ ಚಿಂಚನಸೂರ ಮಾತನಾಡಿದರು   

ಯಾದಗಿರಿ: ಪ್ರತಿಯೊಂದು ಇಲಾಖೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಅನುದಾನ ಬರುತ್ತದೆ. ಆದರೆ, ನಿಗದಿತ ಸಮಯದೊಳಗೆ ಕೆಲಸ ಮಾಡಲು ಆಗುತ್ತಿಲ್ಲ ಏಕೆ ? ‘ಕಾರಣ ಹೇಳಬೇಡಿ ಕೆಲಸ ಮಾಡಿ’ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಗುರುಮಠಕಲ್ ಮತಕ್ಷೇತ್ರದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ರಸ್ತೆ, ಅಂಗನವಾಡಿ ಕೇಂದ್ರ, ಶೌಚಾಲಯ, ಶಾಲಾ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ನಿರ್ಮಿತಿ ಕೇಂದ್ರ ಮತ್ತು ಭೂಸೇನಾ ನಿಗಮ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. 

ಶಾಸಕರ ಪ್ರಶ್ನೆಗೆ ತಬ್ಬಿಬ್ಬಾದ ಅಧಿಕಾರಿಗಳು ವಿವರಣೆ ನೀಡಲು ತಡವರಿಸಿದರು. ಕಾಮಗಾರಿ ಪ್ರಗತಿಯಲ್ಲಿವೆ ಎನ್ನುತ್ತಿದ್ದಂತೆ ನನ್ನನ್ನು ಶಂಕುಸ್ಥಾಪನೆ ಮಾಡಲು ಕರೆದಿಲ್ಲ. ಅದು ಹೇಗೆ ಕಾಮಗಾರಿ ಪ್ರಗತಿಯಲ್ಲಿರಲು ಸಾಧ್ಯ ಎಂದು  ಮರು ಪ್ರಶ್ನೆಹಾಕಿದರು.

ಕೈಗಾರಿಕಾ ಮತ್ತು ಕೆಐಡಿಬಿ ಅಧಿಕಾರಿಗಳು ಕಡೇಚೂರು ಬಾಡಿಹಾಳ ಕೈಗಾರಿಕಾ ಪ್ರದೇಶದಲ್ಲಿ 45 ಕಂಪನಿಗಳು ಬರುತ್ತಿವೆ ಎಂದು ಪ್ರತಿ ಸಭೆಯಲ್ಲೂ ಹೇಳುತ್ತಿದ್ದಾರೆ. ಆದರೆ, ಅವು ಯಾವಾಗ ಬರುತ್ತವೆ. ಬರಪೀಡಿತ ಪ್ರದೇಶದಲ್ಲಿ ಕೈಗಾರಿಗಳು ಸ್ಥಾಪನೆಯಾದರೆ,

ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವ ಉದ್ದೇಶದಿಂದ ಸರ್ಕಾರ ಬೃಹತ್ ಯೋಜನೆಯನ್ನು ರೂಪಿಸಿದೆ. ಆದರೆ, ಅಧಿಕಾರಿಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯರಗೋಳ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಭವನ  ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ. ಆದರೆ, ಆ ಕಾಮಗಾರಿ ಕೂಡ ಈವರೆಗೂ ಆರಂಭವಾಗಿಲ್ಲ. ಸೋಮವಾರದೊಳಗೆ ಭವನದ ಶಂಕುಸ್ಥಾಪನೆ ಮಾಡದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದರು.

ಗುರುಮಠಕಲ್ ವಿಧಾನಸಭಾ ಕ್ಷೇತ್ರದ 32 ಗ್ರಾಮಗಳಿಗೆ ಭೀಮಾ ನದಿಯಿಂದ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಠಾನದಲ್ಲಿ ಬರುತ್ತಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕಾಮಗಾರಿ ಬೇಗ ಪೂರ್ಣಗೊಳಿಸಬೇಕು. ಮುಂಬರುವ ಬೇಸಿಗೆಯೊಳಗೆ ಪ್ರತಿಯೊಂದು ಗ್ರಾಮಕ್ಕೂ ಕುಡಿಯುವ ನೀರು ಸಿಗುವಂತೆ ಮಾಡಬೇಕು ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ಅಭಿವೃದ್ದಿ ಕಾರ್ಯಗಳಿಗೆ ತೊಡಕು ಉಂಟಾಗುತ್ತಿದೆ. ಹೀಗಾಗಿ ಈಗಿರುವ ಅಧಿಕಾರಿಗಳು ಕಾಮಗಾರಿಯ ವೇಗವನ್ನು ಹೆಚ್ಚಿಸಿ ಇಲಾಖೆಯಲ್ಲಿ ಪ್ರಗತಿಯನ್ನು ಸಾಧಿಸಿ ಎಂದರು.

ಗುರುಮಠಕಲ್ ವಿಶೇಷ ತಹಶೀಲ್ದಾರ ಕಚೇರಿಗೆ ಕಟ್ಟಡದ ಅವಶ್ಯಕತೆ ಇದೆ. ಅಧಿಕಾರಿಗಳು ಖರ್ಚಿನ ವಿವರಣೆ  ನೀಡಿದರೆ, ಮುಖ್ಯಮಂತ್ರಿಗಳಿಂದ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಬಳಿಚಕ್ರ ಮತ್ತು ಕಾಳೆಬೆಳಗುಂದಿ ರೈತರಿಗೆ ಬೆಳೆ ಪರಿಹಾರ ದೊರೆತಿಲ್ಲ  ಎನ್ನುವ ದೂರುಗಳಿವೆ. ತಕ್ಷಣ ಕೃಷಿ ಜಂಟಿ ನಿರ್ದೇಶಕರು ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳಬೇಕು ಎಂದು ಸೂಚಿಸಿದರು.

ಪಂಚಾಯಿತ್ ರಾಜ್, ಲೋಕೋಪಯೋಗಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮ, ಭೂಸೇನಾ ಮತ್ತು ನಿರ್ಮಿತಿ ಕೇಂದ್ರದ ಯಾವ ಅಧಿಕಾರಿಗಳು ನಿರೀಕ್ಷಿಸಿದ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಆಗಸ್ಟ್‌ 15ರ ನಂತರ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಕಾಮಗಾರಿಯ ವಿವರವನ್ನು ಪಡೆಯುವುದಾಗಿ  ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್ ಕಿಶೋರ ಸುರಳಕರ್, ಸಹಾಯಕ ಆಯುಕ್ತ ಡಾ.ಜಗದೀಶ್ ಇದ್ದರು.

*
ಕ್ಷೇತ್ರದ ಎಲ್ಲ ಇಲಾಖೆ ಅಧಿಕಾರಿಗಳು ನಿರೀಕ್ಷಿಸಿದ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಆಗಸ್ಟ್‌ 15ರ ನಂತರ ಕ್ಷೇತ್ರದ ಪ್ರತಿಯೊಂದು ಹಳ್ಳಿ ಪ್ರವಾಸ ಮಾಡುವೆ.
-ಬಾಬುರಾವ ಚಿಂಚನಸೂರ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT