ADVERTISEMENT

‘ರಫ್ತು ಆಧಾರಿತ ವ್ಯವಹಾರ ಅತ್ಯವಶ್ಯಕ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:24 IST
Last Updated 21 ಡಿಸೆಂಬರ್ 2013, 9:24 IST

ಯಾದಗಿರಿ: ಜಿಲ್ಲೆಯು ಎರಡು ನದಿಗಳನ್ನು ಹೊಂದಿದ್ದು, ನೀರಾವರಿ ಸೌಲಭ್ಯ ಪಡೆದಿದೆ. ಅನೇಕ ಸೌಕರ್ಯ­ಗಳನ್ನು ಹೊಂದಿರುವ ಜಿಲ್ಲೆಯಲ್ಲಿ ರಫ್ತು ಆಧಾರಿತ ವ್ಯವಹಾರ ನಡೆಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ದಿ. ಗ್ರೇನ್‌ ಸೀಡ್ಸ್‌ ಆ್ಯಂಡ್‌ ಕಾಟನ್‌ ಮರ್ಚಂಟ್ಸ್ ಅಸೋಸಿಯೇಶನ್‌ ಅಧ್ಯಕ್ಷ ಬಾಬು ದೋಖಾ ಹೇಳಿದರು.

ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ವಾಣಿಜ್ಯೋ­ದ್ಯಮ ಸಂಸ್ಥೆ, ದಿ ಗ್ರೇನ್ ಸೀಡ್ಸ್ ಆ್ಯಂಡ್‌ ಕಾಟನ್ ಮರ್ಚಂಟ್ಸ್ ಅಸೋಸಿ­ಯೇಶನ್ ಹಾಗೂ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್‌ ಆರ್ಗನೈ­ಜೇಶನ್‌ಗಳ ಆಶ್ರಯದಲ್ಲಿ ಇಲ್ಲಿಯ ಎಪಿಎಂಸಿ ಆವರಣದಲ್ಲಿರುವ ದಿ. ಗ್ರೇನ್‌ ಸೀಡ್ಸ್‌ ಆ್ಯಂಡ್‌ ಕಾಟನ್‌ ಮರ್ಚಂಟ್ಸ್‌ ಅಸೋಸಿಯೇಶನ್‌ಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳ­ಲಾಗಿದ್ದ ರಫ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯು ಅತ್ಯುತ್ತಮ ಸಾರಿಗೆ ಹಾಗೂ ರೈಲು ಸಂಪರ್ಕವನ್ನು ಹೊಂದಿದೆ. ಅಲ್ಲದೇ ಇಲ್ಲಿ ತೊಗರಿ, ಹೆಸರು, ಭತ್ತ ಸೇರಿದಂತ ಅನೇಕ ಆಹಾರ ಧಾನ್ಯಗಳು ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇಂತಹ ಪ್ರದೇಶದಲ್ಲಿ ಬೆಳೆಯುವ ಗುಣ­ಮಟ್ಟದ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಸಾಕಷ್ಟು ಅವಕಾಶ­ಗಳಿದ್ದು, ಇದನ್ನು ಸದ್ಬಳಕೆ ಮಾಡಿ­ಕೊಳ್ಳುವ ಅವಶ್ಯಕತೆ ಇದೆ ಎಂದರು.

ಬೆಂಗಳೂರು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಉಪನಿರ್ದೇಶಕ ಎಂ.ಎ. ಶರೀಫ್, ಅಂತರ ರಾಷ್ಟ್ರೀಯ ವ್ಯಾಪಾರದ ಕುರಿತು ಉಪನ್ಯಾಸ ನೀಡಿದರು.  ಕೇಂದ್ರದ ಧಾರವಾಡದ ಜಂಟಿ ನಿರ್ದೇಶಕ ಡಾ. ವೀರಣ್ಣ ಎಸ್.ಎಚ್, ರಫ್ತು ವ್ಯವಹಾರಕ್ಕೆ ಸಂಘ ಸಂಸ್ಥೆಗಳ ಬೆಂಬಲ, ಮತ್ತು ರಫ್ತು ವ್ಯವಹಾರಕ್ಕೆ ಲಭ್ಯವಿರುವ ಪ್ರೋತ್ಸಾಹ ಹಾಗೂ ರಫ್ತು ಸಾಧ್ಯತೆ, ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ವಾಣಿ­ಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಸಿದ್ದಾರಡ್ಡಿ ಬಲಕಲ್ ಅಧ್ಯಕ್ಷತೆ ವಹಿಸಿದ್ದರು.
ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಇರ್ಫಾನ್‌, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗದ ಉಪನಿರ್ದೇಶಕ ಮಾಣಿಕ ರಘೋಜಿ, ಅಕ್ಕಿ ಗಿರಣಿ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಾಯಕ್ ಹುಸೇನ್‌ ಬಾದಲ್ ಮುಂತಾದವರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.