ADVERTISEMENT

31ರ ವರೆಗೆ ನೀರು ಹರಿಸಲು ಶಾಸಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 9:24 IST
Last Updated 18 ಮಾರ್ಚ್ 2014, 9:24 IST

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇ­ಶದ ರೈತರ ಎರಡನೇ (ಹಿಂಗಾರು) ಅವಧಿಗಾಗಿ ಮಾ.31ರ ವರೆಗೆ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಬೇಕು ಎಂದು ಸುರಪುರ ಶಾಸಕ ರಾಜಾ ವೆಂಕಟಪ್ಪನಾಯಕ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಸೋಮವಾರ ಸಂಜೆ ಸಮೀಪದ ನಾರಾಯಣಪುರದ ಮುಖ್ಯ ಎಂಜಿನಿ­ಯರ್ ಕಚೇರಿಗೆ ರೈತ ಮುಖಂಡ­ರೊಂದಿಗೆ ತೆರಳಿದ ಶಾಸಕರು, ಅಧೀಕ್ಷಕ ಎಂಜಿನಿಯರ್‌ ಡಿ.ಆರ್.ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿ, ರೈತರ ಸಮಸ್ಯೆಯ ಕುರಿತು ಮಾತನಾಡಿದರು.
ಕಾಲುವೆಯಲ್ಲಿ ಬೇಡಿಕೆಗಿಂತ ಹೆಚ್ಚು ನೀರು ಹರಿಯುತ್ತಿರುವುದು ತಿಳಿದು ಬಂದಿದ್ದು, ವ್ಯರ್ಥವಾಗಿ ಹಳ್ಳಗಳಿಗೆ ಹರಿಸುವುದನ್ನು ಬಿಟ್ಟು, ಅದೇ ನೀರನ್ನು ರೈತರಿಗೆ ನೀಡಬೇಕು. ಮಾ.14ರಂದು ರಾತ್ರಿ ಜಲಾಶಯದಿಂದ ನದಿಗೆ ಅಗತ್ಯ­ಕ್ಕಿಂತ ಹೆಚ್ಚಿನ ನೀರನ್ನು ಹರಿಸಿದ್ದೇಕೆ? ಎಂದು ಪ್ರಶ್ನಿಸಿದರು.

ಶಾಸಕರಿಂದ ಮನವಿ ಪತ್ರ ಸ್ವೀಕರಿ­ಸಿದ ಕೃಷ್ಣಮೂರ್ತಿ ಮಾತನಾಡಿ, ನಾವು ಕೂಡ ರೈತರ ಮಕ್ಕಳಾಗಿ ಜನಿಸಿದ್ದೇವೆ. ರೈತರ ಸಮಸ್ಯೆ ನಮಗೂ ತಿಳಿದಿದೆ. ಮೇಲಧಿಕಾರಿಗಳ ಆದೇಶ­ದಂತೆ ಮುಂದಿನ ನಿರ್ಧಾರ ತೆಗೆದು­ಕೊಳ್ಳುವುದಾಗಿ ಶಾಸಕರಿಗೆ ಭರವಸೆ ನೀಡಿದರು.
ಜಲಾಶಯದ ವಿಭಾಗೀಯ ಕಾರ್ಯ ನಿರ್ವಾಹಕ ಎಂಜಿನಿಯರ್ ರಂಗಾರಾಮ್‌, ನದಿಗೆ ನೀರು ಹರಿಸಿ­ರುವ ಕುರಿತು ಮಾಹಿತಿ ನೀಡಿದರು.
ಮುಖಂಡರಾದ ರಾಜಶೇಖರಗೌಡ ವಜ್ಜಲ್, ಸೂಲಪ್ಪ ಕಮತಗಿ, ನಿಂಗಣ್ಣ ಬಳಿ, ಪ್ರಭುಗೌಡ ಪಾಟೀಲ, ಆರ್.ಎಂ.ರೇವಡಿ, ಮುದಿಗೌಡ ಕುಪ್ಪಿ, ಗುಂಡಪ್ಪ ಸೊಲ್ಲಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.