ADVERTISEMENT

₹4 ಸಾವಿರ ಕೋಟಿ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ

ಹಾನಿಗೆ ಎಷ್ಟೇ ಖರ್ಚಾದರೂ ರಾಜ್ಯ ಸರ್ಕಾರ ಹಣ ಬಿಡುಗಡೆ: ಸಚಿವ ಅಶೋಕ್‌

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 16:38 IST
Last Updated 26 ಆಗಸ್ಟ್ 2020, 16:38 IST
ಆರ್.ಅಶೋಕ
ಆರ್.ಅಶೋಕ   

ಯಾದಗಿರಿ: ರಾಜ್ಯದಲ್ಲಿ ಸಂಭವಿಸಿದ ಪ್ರವಾಹದ ಹಾನಿಗೆ ಪರಿಹಾರ ನೀಡಲು ₹4 ಸಾವಿರ ಕೋಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪ್ರವಾಹದಿಂದಾಗಿರುವ ಹಾನಿಗೆ ಎಷ್ಟೇ ಖರ್ಚಾದರೂರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್‌ಹೇಳಿದರು.

ಜಿಲ್ಲೆಯ ಸುರಪುರ ತಾಲ್ಲೂಕಿನ ದೇವಪುರ ಕ್ರಾಸ್ ಬಳಿಯಿರುವ ಬ್ರಿಜ್ ಬಳಿ ಸ್ಥಳ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈಗಾಗಲೇ ಎನ್‍ಡಿಆರ್‌ಎಫ್ಎರಡನೇ ಕಂತಿನ ₹319ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಮೂರನೇ ಕಂತಿನ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ. ಪ್ರವಾಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಮ್ಮ ಜೊತೆಯಲ್ಲಿದೆ. ರಾಜ್ಯದಲ್ಲಿ ಪ್ರವಾಹದ ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ADVERTISEMENT

ಕಳೆದ ಬಾರಿಯ ಪ್ರವಾಹದ ಹಾನಿಗೆ ಹಲವಾರು ರೈತರಿಗೆ ಪರಿಹಾರ ಬಂದಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪರಿಹಾರಕ್ಕಾಗಿ ರೈತರು ತಡವಾಗಿ ಅರ್ಜಿಗಳನ್ನು ನೀಡಿದ್ದಾರೆ. ರೈತರು ನೀಡಿದ ದಾಖಲಾತಿಗಳಲ್ಲಿ ವ್ಯತ್ಯಾಸವಾದ ಕಾರಣ ಹಣ ಬರುವಲ್ಲಿ ವಿಳಂಬವಾಗಿದೆ. ಅವರೆಲ್ಲರಿಗೂ ಶೀಘ್ರ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಮನೆ ಬಿದ್ದಿರುವವರಿಗೆ ಕಳೆದ ಬಾರಿಯಂತೆ ಪರಿಹಾರ ನೀಡಲಾಗುವುದು, ಬೆಳೆ ಪರಿಹಾರವನ್ನು ಎನ್‍ಡಿಆರ್‌ಎಫ್ ನಿಯಮದಂತೆ ನೀಡಲಾಗುವುದು. ಬೇರೆ ಜಿಲ್ಲೆಯವರಿಗೆ ಪರಿಹಾರ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳ ತಪ್ಪಿನಿಂದ ಈ ರೀತಿ ಆಗಿದ್ದರೆ ಸರಿಸಡಿಸಲು ಆದೇಶ ನೀಡಿದ್ದೇನೆ ಎಂದು ತಿಳಿಸಿದರು.

ಬರ ಪರಿಶೀಲನೆ ಎಂದ ಸಚಿವ: ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಅಶೋಕ್‌ಅವರು, ಬಾಯ್ತಪ್ಪಿನಿಂದ ಬರ ಪರಿಶೀಲನೆಗೆ ಆಗಮಿಸಿದ್ದೇನೆ ಎಂದರು. ನಂತರ ಸಾವರಿಸಿಕೊಂಡು ಪ್ರವಾಹ ಪರಿಸ್ಥಿತಿ ಎಂದು ಉಚ್ಚರಿಸಿದರು.

ಸುರಪುರ ಶಾಸಕ ರಾಜೂಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸವನಗೌಡ ಪಾಟೀಲ ಯಡಿಯಾಪುರ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.