ಯಾದಗಿರಿ: ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಅಂಗವಿಕಲರಿಗೆ ಶೇ 5 ರಷ್ಟು ಅನುದಾನ ಮೀಸಲಿಡುವಂತೆ ಸುತ್ತೋಲೆ ಇದೆ. ಈ ಅನುದಾನದಲ್ಲಿ ಅಂಗವಿಕಲ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ಸಾಧನಾ ಸಲಕರಣೆಗಳು, ವಿದ್ಯಾರ್ಥಿಗಳಿಗೆ ಪಾಠೋಪಕರಣಗಳು, ಶುಲ್ಕ, ಅಂಗವಿಕಲರಿಗೆ ಮನೆಗಳು, ತ್ರಿಚಕ್ರ ವಾಹನಗಳು ಇತರ ಸೌಲಭ್ಯ ಒದಗಿಸಬಹುದಾಗಿದೆ. ಆದರೆ, ಯಾವ ಇಲಾಖೆಯೂ ಅನುಷ್ಠಾನಗೊಳಿಸುತ್ತಿಲ್ಲ.
ಜಿಲ್ಲೆಯಲ್ಲಿ ಆರು ತಾಲ್ಲೂಕು ಸೇರಿ 21,569 ಜನ ಅಂಗವಿಕರು ಇದ್ದಾರೆ. ಸರ್ಕಾರಿ ಕಚೇರಿ, ಗ್ರಾಮ ಪಂಚಾಯಿತಿ, ಶಾಲೆಗಳಲ್ಲಿ ರ‍್ಯಾಂಪ್‌ಗಳನ್ನು ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ನಿಯಮದ ಪ್ರಕಾರ 6 ಅಡಿ ಉದ್ದ, 1 ಅಡಿ ಎತ್ತರ, 3 ಅಡಿ ಅಗಲ ಇರಬೇಕು. ಆದರೆ, ಎಲ್ಲೆಡೆ 1 ಅಡಿಗಿಂತ ಎತ್ತರದಲ್ಲಿ ಕಟ್ಟಲಾಗಿದ್ದು, ಜಾರುಬಂಡಿಯಂತಾಗಿವೆ ಎಂದು ಆರೋಪಿಸಲಾಗಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ ಮತ್ತು ಸದಸ್ಯರ ಸಭೆಯಲ್ಲಿ ಅಂಗವಿಕಲರ ಮೀಸಲಿಟ್ಟ ಅನುದಾನ ಬಳಕೆಯ ವಿಷಯದಲ್ಲಿ ಮತ್ತು ಸೌಲಭ್ಯಗಳ ಪೂರೈಕೆಗೆ ಸಂಬಂಧಿಸಿದಂತೆ ಈವರೆಗಿನ ಕೆಲಸ ಇನ್ನೂ ತೃಪ್ತಿದಾಯಕವಿಲ್ಲ ಎನ್ನುವುದು ವಿಆರ್‌ಡಬ್ಲ್ಯೂ ಒಬ್ಬರ ಮಾತುಗಳು.
ಸರ್ಕಾರ ಅಂಗವಿಕಲರಿಗೆ ಶೇ 5 ಮೀಸಲಾತಿ ನೀಡಿದೆ. ಆದರೆ, ಅಧಿಕಾರಿಗಳ ಅಸಡ್ಡೆ ಮತ್ತು ನಿಷ್ಕಾಳಜಿಯಿಂದ ಮೀಸಲಾತಿ ನಮಗೆ ಸಮರ್ಪಕವಾಗಿ ಸದ್ಭಳಕೆಯಾಗುತ್ತಿಲ್ಲ. ಕೇವಲ ತ್ರಿಚಕ್ರ ವಾಹನ ನೀಡಿದರೆ, ಸಾಲದು ಇನ್ನುಳಿದ ಬೇಡಿಕೆಗಳನ್ನು ಒದಗಿಸಬೇಕು. ನಮಗೆ ಅನುಕಂಪ ಬೇಡ ನೆರವಿನ ಅಭಯ ನೀಡಿ. ಶೇ 5 ರಷ್ಟು ಅನುದಾನ ನೀಡದೆ ಇರುವ ಇಲಾಖೆಯ ಕಡತಗಳನ್ನು ಜಿಲ್ಲಾಧಿಕಾರಿ ರದ್ದುಪಡಿಸಬೇಕು ಎಂಬ ಮಾತುಗಳನ್ನು ಅಂಗವಿಕಲರು ಒತ್ತಾಯಿಸುತ್ತಾರೆ.
‘ಎಲ್ಲಾ ಬಗೆಯ ಅಂದರೆ 21 ವಿವಿಧ ಬಗೆಯ ಅಂಗವಿಕಲರಿಗೆ ಸರಿ ಸಮಾನವಾಗಿ ಸರ್ಕಾರದ ಸೌಲಭ್ಯಗಳು ಸಿಗುವಂತೆ ಆಗಬೇಕು. ಯಂತ್ರಚಾಲಿತ ವಾಹನ ವಿತರಣೆ ಮಾಡಿದರೆ ಉಳಿದ ಅಂಗವಿಕಲರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಿ’ ಎಂದು ಸಂಗಮೇಶ ವಜ್ಜಲ್ ಆಗ್ರಹಿಸಿದ್ದಾರೆ.
ಜಿಲ್ಲೆಯ ಹಲವು ಬಸ್ ನಿಲ್ದಾಣಗಳಲ್ಲಿ ರ‍್ಯಾಂಪ್ ಇಲ್ಲ. ಅಂಗವಿಕಲ ಸ್ನೇಹಿ ಶೌಚಾಲಯ ಇಲ್ಲ. ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಇತರ ಪ್ರಯಾಣಿಕರು ಅಂಗವಿಕಲರಿಗೆ ಸೀಟ್ ಬಿಟ್ಟುಕೊಡುವುದಿಲ್ಲ. ನರೇಗಾ ಯೋಜನೆಯಡಿ ಅಂಗವಿಕಲರಿಗೆ ಪ್ರತ್ಯೇಕ ಜಾಬ್‌ಕಾರ್ಡ್ ನೀಡಿ ಅವರಿಗೆ ಅನುಕೂಲವಾಗುವಂತೆ ಕನಿಷ್ಠ 100 ದಿನದ ಕೆಲಸ ನೀಡುತ್ತಿಲ್ಲ. ನಗರಸಭೆಯಲ್ಲಿ ಅನುದಾನ ದುರುಪಯೋಗವಾಗುತ್ತಿದೆ ಎಂಬ ಆರೋಪಗಳಿವೆ.
‘ಅಂಗವಿಕಲರನ್ನು ಸಾಮಾನ್ಯ ವ್ಯಕ್ತಿಗಳು ವಿವಾಹವಾದಲ್ಲಿ ₹50,000 ಪ್ರೋತ್ಸಾಹಧನ 2023-24 ನೇ ಸಾಲಿಗೆ ಜಿಲ್ಲೆಯಲ್ಲಿ 6 ಫಲಾನುಭವಿಗಳಿಗೆ ವಿತರಿಸಲಾಗಿದೆ. ಅಂಧ ವಿದ್ಯಾರ್ಥಿಗಳಿಗೆ 4 ಬ್ರೈಲ್ ಕಿಟ್‌ಗಳನ್ನು ವಿತರಿಸಲಾಗಿದೆ. ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಜಿಲ್ಲೆಯಲ್ಲಿ 10 ಹೊಲಿಗೆ ಯಂತ್ರ ವಿತರಿಸಲಾಗಿದೆ. ತೀವ್ರತರನಾದ ಅಂಗವಿಕಲರಿಗೆ 9 ಬ್ಯಾಟರಿಚಾಲಿತ ವೀಲ್ ಚೇರ್, ಅಂಗವಿಕಲರ ಸ್ವಯಂ ಉದ್ಯೋಗಕ್ಕಾಗಿ ₹1ಲಕ್ಷಗಳ ವರೆಗೆ ಸಾಲ ಸೌಲಭ್ಯ (₹50,000 ಪ್ರೋತ್ಸಾಹ ಧನ), ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದನ 14 ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಅಂಗವಿಕಲರು ವಿಕಲತೆಯನ್ನು ಹೋಗಲಾಡಿಸಲು ವೈದ್ಯಕೀಯ ಪರಿಹಾರ ವಿತರಿಸಲಾಗಿದೆ’ ಎನ್ನುತ್ತಾರೆ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ.
‘ರಾಜ್ಯ ಮಟ್ಟದಲ್ಲಿ ನಮ್ಮ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ಕೆಲಸವಾಗುತ್ತಿದೆ. ಬೇಡಿಕೆಗಳನ್ನೂ ಸಲ್ಲಿಸಿದ್ದೇವೆ. ಆದರೆ, ನಮಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳು ಮತ್ತು ಬೇಡಿಕೆಗಳು ಈಡೇರುವ ಸಮಯ ಯಾವಾಗ ಬರುತ್ತೋ ತಿಳಿಯದು’ ಎಂದು ವಿಆರ್‌ಡಬ್ಲ್ಯೂ ಒಬ್ಬರು ಬೇಸರ ವ್ಯಕ್ತಪಡಿಸಿದರು.
ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ
2023-24 ನೇ ಸಾಲಿಗೆ ಜಿಲ್ಲೆಯಲ್ಲಿ ಅರ್ಹ ಅಂಗವಿಕಲರಿಗೆ 165 ಯಂತ್ರಚಾಲಿತ ಬೈಕ್ ಅಂಧ ವಿದ್ಯಾರ್ಥಿಗಳಿಗೆ 6 ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆಶರಣಪ್ಪ ಪಾಟೀಲ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ
ತಾಲ್ಲೂಕಿನಲ್ಲಿ ಅಂಗವಿಕಲರ ಮಾಸಾಶನದ ದುರುಪಯೋಗ ನಡೆಯುತ್ತಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ತನಿಖೆಯಾಗಬೇಕುನಾಗೇಂದ್ರ ದೋರಿ ಅಂಗವಿಕಲ ಹಕ್ಕುಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಸುರಪುರ
ಅಂಗವಿಕಲರು ಸಂಘಟಿತರಾಗಿ ಶೇ 5 ರ ಅನುದಾನ ಅಂಗವಿಕಲ ಕಲ್ಯಾಣ ಇಲಾಖೆಯ ಸೌಲಭ್ಯಗಳು ಪಡೆದುಕೊಳ್ಳಬೇಕು. ಈ ಬಗ್ಗೆ ನಮ್ಮ ಕಚೇರಿಯಲ್ಲಿ ಮಾಹಿತಿ ಪಡೆದುಕೊಳ್ಳಿಮಾಳಪ್ಪ ಪುಜಾರಿ ಎಂಆರ್‌ಬ್ಲ್ಯೂ ಸುರಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.