ADVERTISEMENT

ಕುರಿಗಾರರು ದಲ್ಲಾಳಿಗಳ ಮೊರೆ ಹೋಗಬೇಡಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 5:23 IST
Last Updated 3 ಫೆಬ್ರುವರಿ 2018, 5:23 IST
ಶಹಾಪುರದ ಶಾದಿಮಹಲ್‌ದಲ್ಲಿ ಶುಕ್ರವಾರ ಕುರಿಗಾರರ ಸಹಕಾರಿ ಸಂಘದ ಸದಸ್ಯರಿಗೆ ತರಬೇತಿ ಶಿಬಿರದಲ್ಲಿ ಪಂಡಿತರಾವ ಚಿದ್ರಿ ಅವರನ್ನು ಸನ್ಮಾನಿಸಲಾಯಿತು
ಶಹಾಪುರದ ಶಾದಿಮಹಲ್‌ದಲ್ಲಿ ಶುಕ್ರವಾರ ಕುರಿಗಾರರ ಸಹಕಾರಿ ಸಂಘದ ಸದಸ್ಯರಿಗೆ ತರಬೇತಿ ಶಿಬಿರದಲ್ಲಿ ಪಂಡಿತರಾವ ಚಿದ್ರಿ ಅವರನ್ನು ಸನ್ಮಾನಿಸಲಾಯಿತು   

ಶಹಾಪುರ: ‘ಕುರಿಗಾರರು ಕೇವಲ ಕುರಿ ಸಾಕಾಣಿಕೆ ಮಾಡಿದರೆ ಸಾಲದು. ಸೂಕ್ತ ಮಾರುಕಟ್ಟೆಯ ಬಗ್ಗೆ ಅರಿವು ಹಾಗೂ ಜಾಗೃತಿ ಅಗತ್ಯವಾಗಿದೆ. ಕುರಿಯನ್ನು ದಲ್ಲಾಳಿಯ ಕೈಯಲ್ಲಿ ಕೊಟ್ಟು ಮೋಸ ಹೋಗಬಾರದು’ ಎಂದು ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳಿ ಅಧ್ಯಕ್ಷ ಪಂಡಿತರಾವ ಚಿದ್ರಿ ಸಲಹೆ ನೀಡಿದರು.

ಇಲ್ಲಿನ ಶಾದಿಮಹಲ್‌ನಲ್ಲಿ ಶುಕ್ರವಾರ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕುರಿಗಾರರ ಸಹಕಾರಿ ಸಂಘದ ಸದಸ್ಯರಿಗೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ನಗರದ ಎಪಿಎಂಸಿ ಜಾಗದಲ್ಲಿ ಕುರಿ ಮಾರಾಟ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಬಂದಿದೆ. ಆದರೆ ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿದೆ. ಇದರ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ತಾಲ್ಲೂಕಿನಲ್ಲಿ 6 ಕುರಿ ಮತ್ತು ಮೇಕೆ ಸಾಕಾಣಿಕೆ ಸಂಘ ಸೇರಿ ಜಿಲ್ಲೆಯಲ್ಲಿ 14 ಸಂಘಗಳಿವೆ. ನೆರೆ ರಾಜ್ಯ ತೆಲಂಗಾಣ ಮಾದರಿಯಲ್ಲಿ ಸಂಘಗಳನ್ನು ಬಲಪಡಿಸಲಾಗುವುದು. ಸಂಘದ ಆಶ್ರಯದಲ್ಲಿ ರಾಜ್ಯದ ವಿವಿಧೆಡೆ 200 ಮಾಂಸ ಮಾರಾಟ ಮಳಿಗೆ ಸ್ಥಾಪಿಸ ಲಾಗುವುದು. ಪ್ರತಿ ಸಂಘಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಚಿಂತನೆ ನಡೆದಿದೆ’ ಎಂದರು.

ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ಸರ್ಕಾರ ಪ್ರತಿ ಕುರಿಗೆ ₹5000 ವಿಮೆ ಮಾಡಿದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಸಹಕಾರ ಸಂಘದ ಮೂಲಕ ಸಾಕಷ್ಟು ಆರ್ಥಿಕ ಅಭಿವೃದ್ಧಿಗೆ ನೆರವು ಬರಲಿದೆ. ಕುರಿಗಾರರ ಯೋಜನೆಯನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು’ ಎಂದರು.

ರಾಜ್ಯ ಕುರಿ ಮತ್ತು ಮೇಕೆ ಮಹಾ ಮಂಡಳದ ನಿರ್ದೇಶಕ ಶಾಂತಗೌಡ ಪಾಟೀಲ್ ನಾಗನಟಗಿ, ಜಿಲ್ಲಾ ಪಂಚಾ ಯಿತಿ ಸದಸ್ಯ ವಿನೋದ ಪಾಟೀಲ್, ರೈತ ಮುಖಂಡ ಶರಣಪ್ಪ ಸಲಾದಪೂರ, ಬಸವರಾಜ ವಿಭೂತಿಹಳ್ಳಿ, ಗಿರೆಪ್ಪಗೌಡ ಬಾಣತಿಹಾಳ, ಮಾನಸಿಂಗ ಚವ್ಹಾಣ, ಡಾ.ಭೀಮಣ್ಣ ಮೇಟಿ, ಷಣ್ಮುಖಪ್ಪ, ಡಾ.ರಾಜು ದೇಶಮುಖ, ಶೇಷರಾವ್, ಯಲ್ಲಪ್ಪ ಇಂಗಳಗಿ, ಹಯ್ಯಾಳಪ್ಪ ಸುರಪುರಕರ್, ಭೀಮಣ್ಣಗೌಡ ಪಾಟೀಲ್ ದರಿಯಾಪುರ,ಶರಬಣ್ಣ ರಸ್ತಾಪುರ, ನಿಜಗುಣ ಪೂಜಾರಿ ಇದ್ದರು.

* * 

ಪ್ರತಿ ಕುರಿ ಮತ್ತು ಮೇಕೆಗೆ ಸರ್ಕಾರ ವಿಮಾ ಸೌಲಭ್ಯ ಒದಗಿಸಿದೆ. ಅಕಾಲಿಕವಾಗಿ ಕುರಿ ಮೃತಪಟ್ಟರೆ ₹5 ಸಾವಿರ ಪರಿಹಾರಧನ ನೀಡಲಾಗುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ.
ಶರಣಬಸಪ್ಪ ದರ್ಶನಾಪುರ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.