ಕೆಂಭಾವಿ: ಇಲ್ಲಿನ ಶತಮಾನ ಕಂಡ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ‘ಅಗತ್ಯ ದಾಖಲಾತಿಯಿಲ್ಲ’ ಎಂಬ ಕಾರಣ ನೀಡಿ, ಹಿಂಬಡ್ತಿ ನೀಡಲಾಗಿದೆ. ಇದು ಇಲ್ಲಿನ ಶಿಕ್ಷಣ ಪ್ರೇಮಿಗಳು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸರ್ಕಾರಿ ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರ, ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ಹಾಗೂ ನಿಯಮಗಳನ್ನು ಗಾಳಿಗೆ ತೂರಿರುವುದೇ ಇದಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿದೆ.
ಕೆಂಭಾವಿಯ ಶತಮಾನ ಕಂಡ ಶಾಲೆಯು, ಸಾವಿರಾರು ಶಿಕ್ಷಕರು ಲಕ್ಷಗಟ್ಟಲೇ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಕೀರ್ತಿ ಹೊಂದಿದೆ. ಆದರೆ ಸರ್ಕಾರದ ಇತ್ತೀಚಿನ ಬದಲಾವಣೆಗಳು, ಶಿಕ್ಷಕರ ಕೊರತೆ, ಸೂಕ್ತ ನಿರ್ವಹಣೆಯಿಲ್ಲದೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಕೇವಲ 202 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿದ್ದಾರೆ. ಹೀಗಾಗಿ ಕೆಂಭಾವಿ ಸೇರಿದಂತೆ ಪಟ್ಟಣದ ಮೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳಾಗಿ ಹಿಂಬಡ್ತಿ ನೀಡಿ, ಶಿಕ್ಷಣ ಇಲಾಖೆ ಅಧಿಕೃತ ವೆಬ್‍ಸೈಟ್‍ನಲ್ಲಿ ಆದೇಶ ಪ್ರಕಟಿಸಿದೆ.
ಸರ್ಕಾರಿ ಆದೇಶದ ಅನುಸಾರ ಶಾಲೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಕಡ್ಡಾಯ. ಕಡಿಮೆ ದಾಖಲಾತಿಯಿದ್ದರೆ ಅಂತಹ ಶಾಲೆಗಳಿಗೆ ಹಿಂಬಡ್ತಿ ನೀಡಲಾಗುತ್ತದೆ. ಪಟ್ಟಣದ ಬಾಲಕಿಯರ ಸರ್ಕಾರಿ ಶಾಲೆ ಮತ್ತು ಸಂಜೀವ ನಗರದ ಸರ್ಕಾರಿ ಶಾಲೆಗಳಲ್ಲಿ 150 ರಿಂದ 200 ಮಕ್ಕಳ ಪ್ರವೇಶಾತಿಯಿದೆ. ಈ ಕಾರಣದಿಂದ ಮಾದರಿ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಗಳಾಗಿ ಹಿಂಬಡ್ತಿ ಪಡೆದಿವೆ.
ಶಿಕ್ಷಕರ ಕೊರತೆ: ಶಾಲೆಗಳು ಈಗ ಹಿರಿಯ ಪ್ರಾಥಮಿಕ ಶಾಲೆಗಳಾಗಿ ಪರಿವರ್ತನೆಯಾಗಿದ್ದು, ಇಲ್ಲಿರುವ ಶಿಕ್ಷಕರು ಬೇರೆಡೆ ವರ್ಗಾವಣೆ ಆಗುತ್ತಿದ್ದಾರೆ. ಮಾದರಿ ಶಾಲೆಗೆ ಒಟ್ಟು 18 ಶಿಕ್ಷಕರ ಅಗತ್ಯವಿದೆ. ಪ್ರಸ್ತುತ ಐವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಹಿಂಬಡ್ತಿ ಪಡೆದ ಹಿನ್ನೆಲೆಯಲ್ಲಿ ಜ್ಯೇಷ್ಠತಾ ಆಧಾರದ ಮೇಲೆ ವರ್ಗಾವಣೆಯಾಗಿ ಇಲ್ಲಿಗೆ ಬಂದಿದ್ದವರು, ಮತ್ತೆ ಮಾದರಿ ಪ್ರಾಥಮಿಕ ಶಾಲೆಗೆ ತೆರಳಲಿದ್ದಾರೆ. ಹೀಗಾಗಿ ಶಾಲೆಯಲ್ಲಿ ಮತ್ತೆ ಶಿಕ್ಷಕರ ಕೊರತೆಯ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ.
ಅವೈಜ್ಞಾನಿಕ ಅನುಮತಿ: ಶಿಕ್ಷಣ ಇಲಾಖೆಯು ಖಾಸಗಿ ಶಾಲೆ ಆರಂಭಿಸಲು ಅವೈಜ್ಞಾನಿಕವಾಗಿ ಅನುಮತಿ ನೀಡಿದ್ದು, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯಲು ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಖಾಸಗಿ ಶಾಲೆಗೆ ಅನುಮತಿ ನೀಡಬೇಕಾದರೆ ಸರ್ಕಾರಿ ಶಾಲೆಯಿಂದ ಅದು ಕನಿಷ್ಠ 2 ಕಿ.ಮೀ ಅಂತರವಿರಬೇಕು ಎಂಬ ನಿಯಮ ಹಾಗೂ ಹಲವು ಶರತ್ತುಗಳಿವೆ. ಆದರೆ ಅಧಿಕಾರಿಗಳು ಅವುಗಳನ್ನು ಗಾಳಿಗೆ ತೂರಿ, ಕೇವಲ 100 ಮೀ. ಅಂತರದಲ್ಲಿಯೇ ಎರಡೆರಡು ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದಾರೆ. ಅಲ್ಲದೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನರಾವೂ ಇದರಲ್ಲಿ ಅಡಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಶತಮಾನದ ಶಾಲೆಗೆ ಹಿಂಬಡ್ತಿಯಂತಹ ಬದಲಾವಣೆಗಳಾಗಿಲ್ಲ. ರಾಜ್ಯಮಟ್ಟದಲ್ಲಿ ಆಗಿದ್ದರೆ ಅಂತಹ ಶತಮಾನದ ಶಾಲೆಗಳನ್ನು ಉಳಿಸಿಕೊಳ್ಳಲಾಗುವುದುಎಸ್.ಎಸ್. ಮುಧೋಳ ಡಿಡಿಪಿಐ ಯಾದಗಿರಿ
ಶತಮಾನದ ಶಾಲೆಗೆ ಹಿಂಬಡ್ತಿ ನೀಡಿರುವ ಗಮನಕ್ಕೆ ಬಂದಿಲ್ಲ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗುವುದುವಾಮನರಾವ ದೇಶಪಾಂಡೆ ಹಳೆ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.