ADVERTISEMENT

ಎದೆಯೊಳಗೆ ಸಂತಸದ ದೀಪ ಇರಿಸಿಕೊಂಡವರೇ ಸಂತರು

ವಿಶ್ವಾರಾಧ್ಯರ ಜಾತ್ರೆಯ ಮಾನವ ಧರ್ಮ ಸಮಾವೇಶ; ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 8:35 IST
Last Updated 24 ಫೆಬ್ರುವರಿ 2026, 8:35 IST
ಯಾದಗಿರಿಯ ಅಬ್ಬೆ ತುಮಕೂರಿನಲ್ಲಿ ಭಾನುವಾರ ರಾತ್ರಿ ನಡೆದ ಮಾನವ ಧರ್ಮ ಸಮಾವೇಶವನ್ನು ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸಿದರು. ಮಠಾಧೀಶರು, ಗಣ್ಯರು ಉಪಸ್ಥಿತರಿದ್ದರು
ಯಾದಗಿರಿಯ ಅಬ್ಬೆ ತುಮಕೂರಿನಲ್ಲಿ ಭಾನುವಾರ ರಾತ್ರಿ ನಡೆದ ಮಾನವ ಧರ್ಮ ಸಮಾವೇಶವನ್ನು ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸಿದರು. ಮಠಾಧೀಶರು, ಗಣ್ಯರು ಉಪಸ್ಥಿತರಿದ್ದರು   

ಯಾದಗಿರಿ: ‘ಬಡತನ, ಸೋಲು, ಸಂಕಷ್ಟ, ಅಪಮಾನ, ನಿಂದನೆಯ ಚುಚ್ಚು ಮಾತಿನ ಗಾಳಿ ಮನುಷ್ಯನ ಜೀವನದಲ್ಲಿ ಬೀಸುತ್ತಿದ್ದರೂ ಎದೆಯೊಳಗೆ ಸಂತಸದ ದೀಪವನ್ನು ಇರಿಸಿಕೊಂಡು, ಅದು ಆರದಂತೆ ನೋಡಿಕೊಳ್ಳುವವರೇ ಸಂತರು’ ಎಂದು ಕೊಪ್ಪಳ ಗವಿ ಸಿದ್ದೇಶ್ವರ ಮಠದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಜಾತ್ರೆಯ ಅಂಗವಾಗಿ ಭಾನುವಾರ ರಾತ್ರಿ ಜರುಗಿದ ಮಾನವ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘‌ಜೀವನದಲ್ಲಿ ಒಮ್ಮೊಮ್ಮೆ ಕಷ್ಟ– ಸುಖ, ಸೋಲು– ಗೆಲುವು, ಬಡತನ– ಶ್ರೀಮಂತಿಕೆಗಳು ಬರುತ್ತಿರುತ್ತವೆ. ಅವುಗಳನ್ನು ತಲೆಗೆ ಹಚ್ಚಿಕೊಳ್ಳದೆ ಸಂತರಂತೆ ಬದುಕಬೇಕು. ಇದ್ದಂಗೆ ಇರಬೇಕು, ಇಲ್ಲದಂಗೂ ಇರಬೇಕು, ಮೇಲಿರುವ ಭಗವಂತ ಕರೆದಾಗ ಎದ್ದು ಹೋಗುವಷ್ಟು ಮುಕ್ತವಾಗಿಯೂ ಇರಬೇಕು. ಜೀವನ ಭಗವಂತನಿಗೆ ಅರ್ಪಿಸಿ ಸುಂದರವಾಗಿ ಮತ್ತು ಸಂತೋಷದಿಂದ ಬದುಕಬೇಕು’ ಎಂದು ನುಡಿದರು.

ADVERTISEMENT

‘ಕಠಿಣ ವ್ರತ, ಗುಹೆಯಲ್ಲಿ ವಾಸ, ದಿಗಂಬರರಾಗಿ ಇದ್ದು, ತಲೆ ಕೆಳಗೆ ಕಾಲು ಮೇಲೆ ಮಾಡಿ ಸೊಪ್ಪು ತಿನ್ನುವವರು ಸಂತರಾಗುವುದಿಲ್ಲ. ಉತ್ತಮ ನಡತೆಯ ಮೂಲಕ ಬದುಕನ್ನು ಕಟ್ಟಿಕೊಳ್ಳುವವರೂ ಸಂತರು ಎನಿಸಿಕೊಳ್ಳುತ್ತಾರೆ’ ಎಂದರು.

‘ಧರ್ಮವೆಂದರೆ ಓದಿ ತಿಳಿದುಕೊಳ್ಳುವುದಲ್ಲ, ಅದನ್ನು ಆಚರಣೆ ಮಾಡಿ ಅರ್ಥೈಸಿಕೊಳ್ಳುವುದು. ಧರ್ಮವಂತನಾಗಲು ಕೈಯಲ್ಲಿ ಒಳ್ಳೆಯ ಕೆಲಸ, ನಾಲಿಗೆಯ ಮೇಲೆ ನಾಲ್ಕು ಒಳ್ಳೆಯ ನುಡಿಗಳು, ಎದೆಯಲ್ಲಿ ದೇವರ ನೆನಪು ಇರಿಸಿಕೊಳ್ಳಬೇಕು’ ಎಂದು ಹೇಳಿದರು.

ಬೆಂಗಳೂರಿನ ಮಹಾಂತಲಿಂಗ ಶಿವಾಚಾರ್ಯರು ಮಾತನಾಡಿ, ‘ಜಗತ್ತಿನಲ್ಲಿ ಯಾರಿಗೂ ಸಾಧ್ಯವಾಗದ ಅಸಾಧ್ಯವಾದುದನ್ನು ಮಾಡಿದ ಅಣಿಮಾದಿಗಳನ್ನು ಸಿದ್ದಿಸಿಕೊಂಡವರು ಜಗಜಟ್ಟಿ ವಿಶ್ವಾರಾಧ್ಯರು. ಹೀಗಾಗಿ, ಅವರನ್ನು ಜಗಜಟ್ಟಿ ಎಂದು ಕರೆಯಲಾಗುತ್ತದೆ’ ಎಂದರು.

ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು ಮಾತನಾಡಿ, ‘ದೇವರು ಗರ್ಭ ಗುಡಿಯಲ್ಲಿ ಕುಳಿತು ವರ್ಷಾನುಗಟ್ಟಲೇ ಭಕ್ತರಿಗೆ ದರ್ಶನ ಕರುಣಿಸುತ್ತಾನೆ. ವರ್ಷದಲ್ಲಿ ಒಮ್ಮೆ ಉತ್ಸವ ಮೂರ್ತಿಯ ರೂಪದಲ್ಲಿ ತೇರಿನಲ್ಲಿ ಕುಳಿತು ಭಕ್ತರಿಗೆ ದರ್ಶನ ಕರುಣಿಸುವುದೆ ರಥೋತ್ಸವದ ಕಲ್ಪನೆ. ಅಂತೆಯೇ ವಿಶ್ವಾರಾಧ್ಯರು ಜಾತ್ರೆಗೆ ಸೇರಿದ ಎಲ್ಲರಿಗೂ ದರ್ಶನ ಭಾಗ್ಯ ಕರುಣಿಸಿದ್ದಾರೆ’ ಎಂದು ಹೇಳಿದರು.

ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ‘ವಿಶ್ವಾರಾಧ್ಯರ ಕ್ಷೇತ್ರದ ಮಠವು ಬಡವ– ಬಲ್ಲಿದ, ಉಚ್ಛ– ನೀಚ ಎಂಬ ಭೇದ ಭಾವವನ್ನು ಎಣಿಸದೆ ಎಲ್ಲರೂ ಸಮಾನರು ಎಂಬ ಭಾವದಲ್ಲಿ ಕಾಣುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಅಬ್ಬೆತುಮಕೂರಿನ ಕಿರಿಯ ಸ್ವಾಮೀಜಿ ಶಿವಶೇಖರ ಶಿವಾಚಾರ್ಯರು, ಸೊನ್ನದ ಶಿವಾನಂದ ಸ್ವಾಮೀಜಿ, ಹಲಕರ್ಟಿಯ ಮುನೀಂದ್ರ ಸ್ವಾಮೀಜಿ, ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಪಾಳಾ ಮಠದ ಗುರುಮೂರ್ತಿ ಶಿವಾಚಾರ್ಯರು, ಶಹಾಪುರದ ಸೂಗೂರೇಶ್ವರ ಸ್ವಾಮೀಜಿ, ಗಬ್ಬೂರ ಬೂದಿಬಸವೇಶ್ವರ ಸ್ವಾಮೀಜಿ, ಯಲ್ಹೇರಿಯ ಕೋಟ್ಟೂರೇಶ್ವರ ಸ್ವಾಮೀಜಿ, ಮಳಖೇಡದ ಕಾರ್ತಿಕೇಶ್ವರ ಶಿವಾಚಾರ್ಯರು, ದೇವಾಪುರದ ಶಿವಮೂರ್ತಿ ಸ್ವಾಮೀಜಿ ಸೇರಿ ಹಲವು ಪೂಜ್ಯರು ಪಾಲ್ಗೊಂಡಿದ್ದರು.

ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು, ಶರಣಗೌಡ ಕಂದಕೂರು, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಮಾಜಿ ಸಚಿವ ಸಿದ್ದರಾಮ ಮೇತ್ರೆ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರು, ಮುಖಂಡರಾದ ಹಣಮಂತಗೌಡ ಹಿರೇಗೌಡರ್, ಮಹೇಶರೆಡ್ಡಿ ಮುದ್ನಾಳ, ರಾಚನಗೌಡ ಮುದ್ನಾಳ, ಬಸುಗೌಡ ಬಿಳ್ಹಾರ, ಸುಭಾಶ್ಚಂದ್ರ ಕೌಲಗಿ, ಚನ್ನಪ್ಪಗೌಡ ಮೋಸಂಬಿ ಸೇರಿದಂತೆ ಹಲವರು ಭಾಗವಹಿಸಿದ್ದರು.

‘ಭಾರತದ್ದು ಉನ್ನತ ಪರಂಪರೆ’

‘ಭಾರತ ಉನ್ನತ ಪರಂಪರೆಯನ್ನು ಹೊಂದಿದ್ದು ಕಾಲ ಕಾಲಕ್ಕೆ ಸಂತ ಮಹಾಂತರು ಬಾಳಿ ಬದುಕಿ ಜನತೆಯ ಬಾಳನ್ನು ಬೆಳಗಿದ್ದಾರೆ. ಅಂತಹ ಪರಂಪರೆಯಲ್ಲಿ ವಿಶ್ವಾರಾಧ್ಯರು ವಿಶಿಷ್ಠವಾದ ಅವಧೂತರು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಹೇಳಿದರು. ಮಾನವ ಧರ್ಮ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ‘ವಿಶ್ವಾರಾಧ್ಯ ಮಠದಲ್ಲಿ ಯಾವುದೇ ಜಾತಿ ಭೇದ ಭಾವವಿಲ್ಲ. ಇಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತದೆ. ಇಂದಿನ ಧಾರ್ಮಿಕ ಗೋಷ್ಠಿಗೆ ಮಾನವ ಧರ್ಮ ಸಮಾವೇಶವೇ ಇದಕ್ಕೆ ಸಾಕ್ಷಿಯಾಗಿದೆ’ ಎಂದರು.

Cut-off box - ರಸಮಂಜರಿ ಸಂಭ್ರಮ  ಸಮಾವೇಶದ ಬಳಿಕ ಗಾಯಕಿ ಅನುರಾಧಾ ಭಟ್ ಅಜಯ ವಾರಿಯರ್ ಸರಿಗಮಪ ರಿಯಾಲಿಟಿ ಶೋ ವಿಜೇತೆ ಶಿವಾನಿ ಬೀದರ್ ಅವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಧಾರಾವಾಹಿಯ ನಟ–ನಟಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ  ಮಠಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.

ಸಮಾವೇಶದಲ್ಲಿ ಇಂದು ಜಾತ್ರೆಯ ಮಾನವ ಧರ್ಮ

ಸಮಾವೇಶದ ಅಂಗವಾಗಿ ಫೆಬ್ರುವರಿ 24ರ ಬೆಳಿಗ್ಗೆ 10ಕ್ಕೆ ನಡೆಯುವ ಶರಣ ಸಂಸ್ಕೃತಿ ಶಿಬಿರವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎ.ಈರಣ್ಣ ಅವರು ಉದ್ಘಾಟಿಸುವರು. ಡಿಡಿಪಿಐ ಚನ್ನಬಸಪ್ಪ ಮುಧೋಳ ಬಿಇಒ ವೀರಪ್ಪ ಕನ್ನೆಳ್ಳಿ ಡಾ.ಸಂಗಮ್ಮ ವೀರಬಸವಂತರೆಡ್ಡಿ ಮುದ್ನಾಳ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ತಾಲ್ಲೂಕು ಅಧ್ಯಕ್ಷ ರಾಜಶೇಖರ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಹಾಪುರದ ಬಸವಯ್ಯ ಶರಣರು ಹಿಟ್ನಾಳನ ಸಿದ್ಧೇಶ್ವರ ಸ್ವಾಮೀಜಿ ವಿಜಯಪುರದ ವೀರುಪಾಕ್ಷ ದೇವರು ಸೇರಿ ಹಲವರು ಭಾಗವಹಿಸುವರು. ಸಂಜೆ 7ಕ್ಕೆ ‘ಅಪ್ಪ ನೀಚ ಮಗ ಅರೆಹುಚ್ಚ’ ನಾಟಕವನ್ನು ಡಿವೈಎಸ್‌ಪಿ ಸುರೇಶ ಎಂ. ಅವರು ಉದ್ಘಾಟಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.