ADVERTISEMENT

ಯಾದಗಿರಿ | ಕುರುಬ ಸಮಾಜ ಎಸ್‌ಟಿಗೆ ಸೇರಿಸಿ: ಮಲ್ಲಣ್ಣ ಐಕೂರ

21 ರಿಂದ ಜನವರಿ 3 ರ ವರೆಗೆ ತಾಲ್ಲೂಕು ಮಟ್ಟದ ಸರಣಿ ಹೋರಾಟ: ಐಕೂರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 16:10 IST
Last Updated 19 ಡಿಸೆಂಬರ್ 2023, 16:10 IST
ಮಲ್ಲಣ್ಣ ಐಕೂರ
ಮಲ್ಲಣ್ಣ ಐಕೂರ   

ಯಾದಗಿರಿ: ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು. ‘ಗೊಂಡ್’ ಪರ್ಯಾಯ ಪದ ‘ಕುರುಬ’ ಎಂದು ಪರಿಗಣಿಸಲು ಆಗ್ರಹಿಸಿ ಡಿಸೆಂಬರ್‌ 21 ರಿಂದ ಜನವರಿ 3 ರವರೆಗೆ ತಾಲ್ಲೂಕು ಮಟ್ಟದ ಸರಣಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಣ್ಣ ಐಕೂರ ಹೇಳಿದರು.

ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ತಿಂಥಣಿ ಬ್ರಿಜ್ ಗೊಂಡ್ ಕುರುಬ ಹೋರಾಟ ಸಮಿತಿ ಕಲಬುರಗಿ, ಬೀದರ್‌, ಯಾದಗಿರಿ ಜಿಲ್ಲಾ, ತಾಲ್ಲೂಕು ಗೊಂಡ್ (ಕುರುಬ) ಸಂಘ ಮತ್ತು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಧರಣಿ ನಡೆಯುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಎಸ್‌ಟಿ ಮೀಸಲಾತಿ ವಂಚಿತ ಬೀದರ್ ಮತ್ತು ಅವಿಭಜಿತ ಕಲಬುರಗಿ ಜಿಲ್ಲೆಯ ಗೊಂಡ್ (ಕುರುಬ) ಜನರ ಅವಿರತ ಹೋರಾಟದ ಫಲವಾಗಿ 1997 ರಲ್ಲಿ ರಾಜ್ಯ ಸರ್ಕಾರ ಬೀದರ್, ಕಲಬುರಗಿ (ಯಾದಗಿರಿ) ಜಿಲ್ಲೆಗಳ 'ಕುರುಬ'ರನ್ನು 'ಗೊಂಡ್' ಪರ್ಯಾಯ ಪದವಾಗಿ ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಕೇಂದ್ರ ಸರ್ಕಾರದ ಆದೇಶದ ಮೇರೆಗೆ 2014 ರಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಕುಲಶಾಸ್ತ್ರ ವರದಿಯನ್ನು ನಂತರ ಮೂರು ಬಾರಿ ಪೂರಕ ದಾಖಲೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೂ ಇನ್ನೂ ಮೀಸಲಾತಿ ಘೋಷಣೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

2024 ರ ಚುನಾವಣೆ ಹತ್ತಿರ ಬಂದರೂ ಕುರುಬರ ಎಸ್.ಟಿ.ಬೇಡಿಕೆ ಈಡೇರದ ಕಾರಣ ಕೇಂದ್ರ ಸರ್ಕಾರ ಕುರುಬರಿಗೆ ನಂಬಿಕೆ ದ್ರೋಹ ಮಾಡಿದೆ. ಕುರುಬರ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯವಾಗಿದೆ ಎಂದು ಹೇಳಿದರು.

ಡಿ.21ರಂದು ಸುರಪುರ, 28 ರಂದು ಶಹಾಪುರ, ಜನವರಿ 1 ರಂದು ಯಾದಗಿರಿ, ಹುಣಸಗಿ, ಜ. 2 ರಂದು ವಡಗೇರಾದಲ್ಲಿ ಹಾಗೂ ಜ. 3 ರಂದು ಗುರುಮಠಕಲ್ ತಾಲ್ಲೂಕಿನಲ್ಲಿ ಸರಣಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ಸಂಗಣಗೌಡ, ಸಿದ್ದಣಗೌಡ ಕಾಡಂನೋರ್, ಭೀಮಣ್ಣ ಮೇಟಿ, ಚನ್ನಕೇಶವ ಬಾಣತಿಹಾಳ, ಪ್ರಭುಲಿಂಗ ವಾರದ್, ಈಶ್ವರಪ್ಪ, ಹಣಮಂತರಾಯಗೌಡ ತೇಕರಾಳ, ಮಲ್ಲಣ್ಣ, ಮಲ್ಲಯ್ಯ ಮಗ್ಗಾ, ಮಲ್ಲಿಕಾರ್ಜುನ, ಆಶೆಪ್ಪ ಸೈದಾಪುರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.