ಶಹಾಪುರ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸಾಮಾನ್ಯ. ಸ್ಫರ್ಧೆ ಮುಗಿದ ಬಳಿಕ ಅದನ್ನು ಮರೆತು ಎಲ್ಲರೂ ಒಗ್ಗೂಡಿ ಸಂಘದ ಬೇಕು–ಬೇಡಿಕೆಗಳ ಈಡೇರಿಕೆಗೆ ಸಾಂಘೀಕವಾಗಿ ಹೋರಾಟ ನಡೆಸಬೇಕು’ ಎಂದು ಹಿರಿಯ ವಕೀಲ ಶ್ರೀನಿವಾಸರಾವ್ ಕುಲಕರ್ಣಿ ತಿಳಿಸಿದರು.
ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಗುರುವಾರ ನಡೆದ ವಕೀಲರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಶಹಾಪುರ ನಗರದಲ್ಲಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸ್ಥಾಪಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಬೇಕು. ವಕೀಲರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದರು.
ಪದಗ್ರಹಣ ಹಾಗೂ ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಯೂಸೂಫ್ ಸಿದ್ದಕಿ,‘ಅಭಿವೃದ್ಧಿ ಹಾಗೂ ಜನಪರ ಕೆಲಸ ಆಗಬೇಕಾದರೆ ಎಲ್ಲರ ಸಹಕಾರ ಅಗತ್ಯ. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕ್ರೀಡಾ ಮನೋಭಾವದಿಂದ ತೆಗೆದುಕೊಂಡು ಹೋಗಬೇಕು. ವಕೀಲರ ಅಧ್ಯಯನಕ್ಕಾಗಿ ಸುಸಜ್ಜಿತ ಗ್ರಂಥಾಲಯ ಅಗತ್ಯವಾಗಿದೆ. ನ್ಯಾಯಾಲಯದ ಆವರಣದ ಒಂದು ಕೋಣೆಯಲ್ಲಿ ಗ್ರಂಥಾಲಯ ಸ್ಥಾಪಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಇದಕ್ಕೆ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಹೇಮಾ ಪಸ್ತಾಪುರ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಶೋಭಾ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ, ಎಪಿಪಿಗಳಾದ ದಿವ್ಯಾರಾಣಿ ನಾಯಕ ಸುರಪುರ, ಮರೆಪ್ಪ ಹೊಸಮನಿ, ವಕೀಲರ ಸಂಘದ ನೂತನ ಪದಾಧಿಕಾರಿಗಳಾದ ವಾಸುದೇವ ಕಟ್ಟಿಮನಿ, ಸಂತೋಷ ಸತ್ಯಂಪೇಟೆ, ಮಲ್ಲಿಕಾರ್ಜುನ ಹಯ್ಯಾಳಕರ್, ನಾಗರಾಜ ಅರಳಹಳ್ಳಿ ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷ ಸಂತೋಷ ದೇಶಮುಖ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.