
ವಡಗೇರಾ: ಸಾವಿರಾರು ಭಕ್ತರ ಭಕ್ತಿ ಪರಕಾಷ್ಠೆಯಲ್ಲಿ ಶುಕ್ರವಾರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಆದಿ ದೇವತೆ ಅಂಬಾಮಹೇಶ್ವರಿಯ ಭವ್ಯ ದೇವಸ್ಥಾನ ಲೋಕಾರ್ಪಣೆಗೊಂಡಿದೆ.
ದೇವಸ್ಥಾನ ಲೋಕಾರ್ಪಣೆಗಾಗಿ ಗುರುವಾರದಿಂದ ದೇವಸ್ಥಾನದಲ್ಲಿ ಹೋಮ, ಹವನ, ಕಳಸಾರೋಹಣ, ವಾಸ್ತು, ನಿಧಿ ಸ್ಥಾಪನೆ ಸೇರಿದಂತೆ ಇನ್ನಿತರ ಧಾರ್ಮಿಕ ವಿಶೇಷ ಪೂಜೆಗಳು ನೆರವೇರಿದವು.
ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಶಹಾಪುರದ ಏಕದಂಡಗಿ ಮಠ ಕಾಳಹಸ್ತೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಪ್ರಸಿದ್ಧ ಪುರೋಹಿತರಾದ ಕೇಶವಾಚಾರ್ಯ, ಯತೀಶ ಆಚಾರ್ಯ, ಶಶಿ ಆಚಾರ್ಯ ಸಗರ, ಮೌನೇಶ ಗೊಡಿಹಾಳ, ಗಂಗಾಧರ ಸಗರ ರವರ ನೇತೃತ್ವದಲ್ಲಿ ಹೋಮ ಹವನ ಜರುಗಿದವು
ನಂತರ ಕುಂಭದಿಂದ ಆಹ್ವಾನ, ಕಳಸಾರೋಹಣ, ನೇತ್ರ ಮಿಲನ, ನಿಧಿ ಸ್ಥಾಪನೆ, ದೇವಿಗೆ ಅಲಂಕಾರ, ಗೋ ಪೂಜೆ, ಹಾಲುಗಂಭ ಪೂಜೆ, ಅಂಬಾ ಮಹೇಶ್ವರಿ ದೇವಿ ಹಾಗೂ ಕಾಳಿಕಾ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಿ ಭವ್ಯ ದೇವಸ್ಥಾನ ಲೋಕಾರ್ಪಣೆಗೊಳಿಸಲಾಯಿತು.
ನಂತರ ಪಟ್ಟಣದ ಹದಿನೈದು ನೂರು ಮುತ್ತೈದೆಯರಿಗೆ ದೇವಸ್ಥಾನದ ವತಿಯಿಂದ ಹೂವಿನ ದಂಡಿ ಕಟ್ಟಿ ವಿಳ್ಯದೆಲೆ, ಬಳೆ, ಕುಪ್ಪಸ, ಕೊಬ್ಬರಿ ಉತ್ತುತ್ತಿ, ಅಡಿಕೆ, ಕಲ್ಲು ಸಕ್ಕರೆ, ಬಾಳೆ ಹಣ್ಣುಗಳನ್ನು ನೀಡಿ ಉಡಿ ತುಂಬಲಾಯಿತು.
ಧಾರ್ಮಿಕ ಕಾರ್ಯಗಳು ಮುಗಿದ ನಂತರ ದೇವಾಲಯ ವ್ಯವಸ್ಥಾಪಕ ಸಮಿತಿಯವರು ಭಕ್ತರಿಗೆ ದೇವಿಯ ದರ್ಶನ ಮಾಡಲು ಅವಕಾಶ ಮಾಡಿಕೊಡಲಾಯಿತು. ಹಾಗೆಯೇ ಪ್ರಸಾದದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ವಿರೂಪಾಕ್ಷ ಸ್ವಾಮಿ ವಿಶ್ವಕರ್ಮ, ಕೊನಹಳ್ಳಿ ಮಠದ ನಿತ್ಯಾನಂದ ಸ್ವಾಮೀಜಿ ಸೇರಿದಂತೆ ಪಟ್ಟಣದ ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು, ಮಹಿಳೆಯರು ಭಕ್ತರು ಇದ್ದರು.
ದೇವಾಸ್ಥಾನ ನಿರ್ಮಾಣ ಕಾರ್ಯ ಶ್ಲಾಘನೀಯ ‘ದೇವಸ್ಥಾನಗಳು ಎಲ್ಲಾ ಧರ್ಮದ ಶಾಂತಿ ಹಾಗೂ ಸೌಹಾರ್ದದ ಕೇಂದ್ರಗಳಾಗಿವೆ. ಪಟ್ಟಣದ ಮುಖಂಡರು ರೈತರು ಮಹಿಳೆಯರು ಇನ್ನಿತರರು ಸೇರಿ ಅತ್ಯಂತ ಸುಂದರವಾದ ದೇವಸ್ಥಾನ ನಿರ್ಮಿಸಿರುವ ಕಾರ್ಯ ಶ್ಲಾಘನೀಯವಾಗಿದೆ’ ಎಂದು ಶಹಾಪುರ ಏಕದಂಡಗಿ ಮಠ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು. ‘ಧಾರ್ಮಿಕ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ನಾನು ನಂದು ಎಂಬ ಅಹಂಕಾರವನ್ನು ಪ್ರತಿಯೊಬ್ಬರು ತ್ಯಜಿಸಬೇಕು ದಾನ ಧರ್ಮ ಕಾರ್ಯದಿಂದ ಮನುಷ್ಯನ ಜನ್ಮ ಸಾರ್ಥಕ. ಇಂದು ಇಂತಹ ಸಾರ್ಥಕತೆ ವಡಗೇರಾ ಪಟ್ಟಣದಲ್ಲಿ ಆಗಿದ್ದು ಆದಿ ದೇವತೆ ಅಂಬಾಮಹೇಶ್ವರ ದೇವಿ ತಮ್ಮೆಲ್ಲರಿಗೂ ಆರೋಗ್ಯ ಆಯಸ್ಸು ಐಶ್ವರ್ಯ ಹಾಗೂ ಉತ್ತಮ ಮಳೆ ಬೆಳೆ ಕೊಟ್ಟು ಕಾಪಾಡಲಿ’ ಎಂದು ಆಶೀರ್ವದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.