ADVERTISEMENT

ಅಂಬೇಡ್ಕರ್ ತತ್ವ ಪಾಲನೆಯಿಂದ ಬದುಕು ಸಾರ್ಥಕ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 8:11 IST
Last Updated 7 ಡಿಸೆಂಬರ್ 2025, 8:11 IST
ಯಾದಗಿರಿ ನಗರದಲ್ಲಿ ಶನಿವಾರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್‌ಪಿ ಪೃಥ್ವಿಕ್ ಶಂಕರ್, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಗೌರವ ಸಮರ್ಪಿಸಿದರು
ಯಾದಗಿರಿ ನಗರದಲ್ಲಿ ಶನಿವಾರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್‌ಪಿ ಪೃಥ್ವಿಕ್ ಶಂಕರ್, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಗೌರವ ಸಮರ್ಪಿಸಿದರು   

ಯಾದಗಿರಿ: ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂದೇಶಗಳು, ತತ್ವಗಳನ್ನು ವೇದವಾಕ್ಯವಾಗಿ ಅಪ್ಪಿಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕ ಆಗುತ್ತದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.‌

ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ಏರ್ಪಡಿಸಿದ್ದ 69ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರಿಗೆ ಗೌರವ ಸಮರ್ಪಿಸಿ ಅವರು ಮಾತನಾಡಿದರು.

‘ಸಂವಿಧಾನ ರಚನಾ ಸಭೆಯ ಕಾರ್ಯಚಟುವಟಿಕೆಯಲ್ಲಿ ರಾಷ್ಟ್ರೀಯತೆ ಮತ್ತು ಐಕ್ಯತೆಯ ಚೌಕಟ್ಟು ಮೀರದಂತೆ ಎಚ್ಚರವನ್ನು ವಹಿಸಿದ್ದರು. ರಾಷ್ಟ್ರೀಯತೆಯ ಮೂಲ ಅಂಶಗಳನ್ನು ಸಂವಿಧಾನದ ಭಾಗವಾಗುವಂತೆ ನೋಡಿಕೊಳ್ಳುವಲ್ಲಿ ಅಂಬೇಡ್ಕರ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ’ ಎಂದರು.

ADVERTISEMENT

‘ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಮನುಕುಲಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದ್ದಾರೆ. ಜನರಿಗೂ ಅವುಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಅಂಬೇಡ್ಕರ್ ಅವರ ವಿಚಾರಗಳನ್ನು ಅಳವಡಿಸಿಕೊಂಡ ಯುವಕರ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, ‘ಅಂಬೇಡ್ಕರ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುವಾಗ ಲೆನಿನ್, ಮಾರ್ಕ್ಸ್ ಬಗ್ಗೆ ಬಹಳ ಪ್ರಭಾವಿತರಾಗಿದ್ದರು. ಸಮಾಜದಲ್ಲಿ ಸಮಾನತೆ ಇರಬೇಕು ಎಂದು ಬಯಸಿದ್ದರು. ಸಮಾಜದಲ್ಲಿನ ಜಾತಿ ವ್ಯವಸ್ಥೆಯ ತಪ್ಪು ಎಲ್ಲಿ ಆಗಿದೆ, ಅದಕ್ಕೆ ನಿವಾರಣೆ ಏನು ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದರು’ ಎಂದರು.

‘ಸಮಾಜದ ಮುಖಂಡರು ಅಂಬೇಡ್ಕರ್ ಅವರ ವಿಚಾರಗಳನ್ನು ತಿಳಿದುಕೊಂಡು, ಅವರ ಸಲಹೆಯಂತೆ ಮುನ್ನಡೆಯುತ್ತಿದ್ದಾರೆ. ಮಕ್ಕಳಿಗೂ ಸಹ ಅಂಬೇಡ್ಕರ್ ಅವರು ವಿಚಾರಗಳನ್ನು ತಿಳಿಸಬೇಕು. ಕಷ್ಟದ ಜೀವನದಲ್ಲಿ ಮಹಾನ್ ಸಾಧನೆ ಮಾಡಿದವರ ಬಗ್ಗೆ ತಿಳಿಸಿ, ಸಮಾಜಕ್ಕಾಗಿ ಅವರು ಮಾಡಿದ ಕೆಲಸಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದರು. 

ಇದೇ ವೇಳೆ ಮುಖಂಡ ಸುರೇಂದ್ರ ಬಬಲಾದಿ, ಸುರೇಶ್ ಬೊಮ್ಮ ಅವರು ಪಂಚಶೀಲ ಮತ್ತು ನೀಲಿ ಧ್ವಜವನ್ನು ನೆರವೇರಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಎಸ್ ಚನ್ನಬಸಪ್ಪ, ತಹಶೀಲ್ದಾರ್ ಸುರೇಶ ಅಂಕಲಗಿ, ಸಹಾಯಕ ನಿರ್ದೇಶಕ ಬೆಬಿ ಲಕ್ಷ್ಮಣ ಹುಲಸವಾರ್, ನಿಲಯ ಮೇಲ್ವಿಚಾರಕರಾದ ದೇವಿಂದ್ರಪ್ಪ, ಮೊಹ್ಮದ್ ಹುಸೇನಿ, ನಿಂಗಣ್ಣ ಸೇರಿ, ಸುನಿಲ್‌ ಪವಾರ್, ವಕೀಲ ಮಹೇಶ ಎಸ್.ಕುರಕುಂಬಳ, ಕುಪೇಂದ್ರ ವಠಾರ್, ಸ್ಯಾಮ್ಸನ್ ಮಾಳಿಕೇರಿ, ಮಲ್ಲಣ್ಣ ದಾಸನಕೇರಿ, ಭೀಮರಾಯ ಬೊಮ್ಮನ್, ಮಲ್ಲಿಕಾರ್ಜುನ್ ಈಟಿ, ಮಹೇಶ್ ಕುರುಕುಂಬಳ, ಕೈಲಾಸ ಅನ್ವರ್, ಶರಣು ನಾಟೇಕರ್, ಸ್ವಾಮಿ ದೇವ್ ದಾಸನ ಕೇರಿ, ಮಂಜುನಾಥ್ ದಾಸನಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ಮಹಾನ್ ಮಾನವತಾವಾದಿ’

ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾನತೆ ನ್ಯಾಯಕ್ಕಾಗಿ ಹೋರಾಡಿದ ಮಹಾನ್ ಮಾನವತವಾದಿ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಹೇಳಿದರು.‌ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಹಾಪರಿನಿರ್ವಾಣ ದಿನದಂದು ಬಾಬಾ ಸಾಹೇಬರಿಗೆ ಗೌರವ ಸಮರ್ಪಣೆ ಮಾಡಿ ಅವರು ಮಾತನಾಡಿದರು. ‘ಅಂಬೇಡ್ಕರ್ ಅವರು ಭಾರತಕ್ಕೆ ಸುಭದ್ರವಾದ ಸಂವಿಧಾನ ಕೊಟ್ಟು ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ಕೊಟ್ಟಿದ್ದಾರೆ. ಶಿಕ್ಷಣ ಸಂಘಟನೆ ಹೋರಾಟ ಸ್ವಾಭಿಮಾನದಿಂದ ಬದುಕುವಂತಹ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ’ ಎಂದರು. ಮುಖಂಡರಾದ ದೇವಿಂದ್ರ ನಾಥ್‌ನಾದ್ ಪರಶುರಾಮ್ ಕುರುಕುಂದ ಸುನಿತಾ ಚವ್ಹಾಣ್ ಮಲ್ಲಿಕಾರ್ಜುನ್ ಹೊನಿಗೆರಾ ವಿಜಯಲಕ್ಷ್ಮಿ ನಾಯಕ್ ಶಕುಂತಲಾ ಜಿ. ಭೀಮಬಾಯಿ ಸೆಂಡಿಗಿ ಚನ್ನವೀರಯ್ಯ ಸ್ವಾಮಿ ಕಟಿಗಿ ಸೇರಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.