
ಯಾದಗಿರಿ: ‘ಪ್ರಾಣಿ, ಪಕ್ಷಿಗಳ ಸಂತತಿ ಹೆಚ್ಚಿಸಿ, ಅವುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಾದೇಶಿಕ ಸಂಶೋಧನಾ ಪ್ರಯೋಗಾಲಯ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಗುರುವಾರ 2022-23ನೇ ಸಾಲಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆರ್‌ಐಡಿಎಫ್ ಯೋಜನೆ ಅಡಿಯಲ್ಲಿ ₹80 ಲಕ್ಷ ಅನುಮಾನದಲ್ಲಿ ಪ್ರಾದೇಶಿಕ ಸಂಶೋಧನಾ ಪ್ರಯೋಗಾಲಯದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಪ್ರಾಣಿ ಮತ್ತು ಪಕ್ಷಿ ಸಂಕುಲಗಳಿಗೆ ವಿವಿಧ ರೀತಿಯಲ್ಲಿ ಪರೀಕ್ಷೆ ನಡೆಸಿ, ಅವುಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲು ಪ್ರಯೋಗಾಲಯದ ಕಟ್ಟಡ ನೆರವಾಗಲಿದೆ. ಕಟ್ಟಡದ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.
‘ಜಿಲ್ಲೆಯ ಪ್ರಾಣಿ, ಪಕ್ಷಿಗಳಿಗೆ ಅನಾರೋಗ್ಯ ಕಾಡಿದಾಗ ಅವುಗಳ ರಕ್ತ ಪರೀಕ್ಷೆ ಸೇರಿದಂತೆ ಬೇರೆ ಪರೀಕ್ಷೆಗಳಿಗಾಗಿ ಕಲಬುರಗಿ, ಬಳ್ಳಾರಿ ತೆಗೆದುಕೊಂಡು ಹೊಗುವ ಸ್ಥಿತಿ ಇತ್ತು. ಇದನ್ನು ಮನಗಂಡ ರಾಜ್ಯ ಸರ್ಕಾರವು ನಬಾರ್ಡ್ ಯೋಜನೆಯಡಿ ₹ 80 ಲಕ್ಷ ಅನುದಾನ ನೀಡಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ’ ಎಂದರು.
ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ರಾಜು ದೇಶಮುಖ ಮಾತನಾಡಿ, ‘ಆರು ತಿಂಗಳಲ್ಲಿ ಈ ಕಟ್ಟಡ ನಿರ್ಮಾಣ ಪೂರ್ತಿಯಾಗಲಿದೆ. ಬಳಿಕ ಇಲಾಖೆ ಜೈವಿಕ ತಂತ್ರಜ್ಞರು ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವರು. ₹ 60 ಲಕ್ಷ ಮೌಲ್ಯದ ಪರಿಕರಕಗಳನ್ನು ಮುಂದಿನ ದಿನಗಳಲ್ಲಿ ಖರೀದಿಸಲಾಗುವುದು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ‘ಯುಡಾ’ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಮುಖಂಡರಾದ ಮಲ್ಲಿಕಾರ್ಜುನ ಇಟೆ, ಹಣಮಂತ ನಾಯಕ, ಚನ್ನಕೇಶವ ಬಾಣತಿಹಾಳ, ಮಲ್ಲಣ್ಣದಾಸನಕೇರಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಶ್ಯಾಮಾಸನ್ ಮಾಳಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.