ಯಾದಗಿರಿ: ತಾಲ್ಲೂಕಿನ ಕಿಲ್ಲನಕೇರಾ ಗ್ರಾಮದ ಬೀರಲಿಂಗಪ್ಪ ಉದ್ದೇಶಪೂರ್ವಕವಾಗಿ ಶಾಸಕ ಶರಣಗೌಡ ಕಂದಕೂರ ಅವರ ತೇಜೋವಧೆ ಮಾಡಲು ದಯಾಮರಣ ಅರ್ಜಿ ಸಲ್ಲಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಾತ್ಯತೀತ ಜನತಾದಳದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗಿದೆ.
ಕಿಲ್ಲನಕೇರಾ ಗ್ರಾಮದ ಬೀರಲಿಂಗಪ್ಪ ಎಂಬುವವರು ಗುರುಮಠಕಲ್ ಮತಕ್ಷೇತ್ರದ ಉದ್ದೇಶದೊಂದಿಗೆ ಶಾಸಕರ ಕಿರುಕುಳದಿಂದ ಮನನೊಂದ ಹಿನ್ನೆಲೆಯಲ್ಲಿ ದಯಾಮರಣ ನೀಡಲು ಕೋರಿ ಅರ್ಜಿ ಸಲ್ಲಿಸುವ ನಾಟಕವಾಡಿ ಬ್ಲಾಕ್‌ಮೇಲ್ ಮಾಡುತ್ತಿರುವುದು ಮಾಧ್ಯಮದ ಮೂಲಕ ಗಮನಕ್ಕೆ ಬಂದಿರುತ್ತದೆ. ಶರಣಗೌಡ ಕಂದಕೂರ ಹೆಸರಿಗೆ ಚ್ಯುತಿ ತರುವ ಉದ್ದೇಶದೊಂದಿಗೆ ನಾಟಕವಾಡುತ್ತಿದ್ದಾನೆ ಎಂದು ದೂರಿದ್ದಾರೆ.
ಶಾಸಕರ ವಿರುದ್ಧ ಬಂದಿರುವ ಆರೋಪಗಳು ನಿರಾಧರ. ಗ್ರಾಮದ ಲಕ್ಷ್ಮೀದೇವಸ್ಥಾನಕ್ಕೆ ಮುಜರಾಯಿ ಇಲಾಖೆಯಿಂದ ₹3.98 ಲಕ್ಷ ಅನುದಾನ ಮಂಜೂರಾಗಿದ್ದು, ದೇವಸ್ಥಾನದ ಅನುದಾನವನ್ನು ಇದೇ ಬೀರಲಿಂಗಪ್ಪ ಎಂಬುವವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಗ್ರಾಮದ ಮುಖಂಡರು ಹಾಗೂ ಲಕ್ಷ್ಮೀದೇವಸ್ಥಾನ ಸಮಿತಿ ಅಧ್ಯಕ್ಷರು ಶಾಸಕರ ಗಮನಕ್ಕೆ ತಂದಿದ್ದಾರೆ. ತಾವು ಈಗಾಗಲೇ ದೇವಸ್ಥಾನದ ಜೀರ್ಣೋದ್ಧಾರಕ್ಕೆಂದು ಭಕ್ತರಿಂದ ದೇಣಿಗೆ ಸಂಗ್ರಹ ಮಾಡಿದ್ದಾರೆ. ಹೀಗಾಗಿ ಅನುದಾನವನ್ನು ಬೇರೆ ಕಾಮಗಾರಿಗೆ ಬಳಕೆ ಆಗುವಂತೆ ಕಾಮಗಾರಿಯನ್ನು ಬದಲಾವಣೆ ಮಾಡಿರುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ವಿಷಯವನ್ನು ತಿರುಚಿ ಶಾಸಕರ ಹೆಸರಿಗೆ ಚ್ಯುತಿ ತರುವ ದುರುದ್ದೇಶದೊಂದಿಗೆ ದೇವಸ್ಥಾನಕ್ಕೆ ಮಂಜುರಾದ ಕಾಮಗಾರಿಯನ್ನು ಬೇರೆ ಕಾಮಗಾರಿಯನ್ನಾಗಿ ಮಾಡಲಾಗಿದೆಯೆಂದು ಸುಳ್ಳು ಆರೋಪ ಮಾಡಿ ಶಾಸಕರ ಭಾವಚಿತ್ರಕ್ಕೆ ಚಪ್ಪಲಿ ಇಟ್ಟು ಸಾಮಾಜಿಕ ಚಾಲಾತಾಣಗಳಲ್ಲಿ ಹರಿಬಿಟ್ಟಿರುವ ಈತನ ಹೇಯ ಕೃತ್ಯದಿಂದ ಬೇಸರಗೊಂಡ ಗ್ರಾಮಸ್ಥರು ಈತನ ಮೇಲೆ ಸೈದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ವೇಳೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶುಭಾಶ್ಚಂದ್ರ ಕಟಕಟಿ ಹೊನಗೇರಾ, ಮಲ್ಲನಗೌಡ ಕೌಳೂರು ಸೇರಿದಂತೆ ಗ್ರಾಮಸ್ಥರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.