ADVERTISEMENT

ಆರ್ಸೆನಿಕ್‍ಯುಕ್ತ ನೀರು ಸೇವನೆ: ಚರ್ಮ ಕ್ಯಾನ್ಸರ್

​ಪ್ರಜಾವಾಣಿ ವಾರ್ತೆ
Published 28 ಮೇ 2019, 19:46 IST
Last Updated 28 ಮೇ 2019, 19:46 IST
ಕೆಂಭಾವಿ ಸಮೀಪದ ಕಿರದಳ್ಳಿ ತಾಂಡಾದ ಮಹಿಳೆಯೊಬ್ಬರು ಕೊಳವೆ ಬಾವಿ ನೀರು ಪಡೆಯುತ್ತಿರುವುದು
ಕೆಂಭಾವಿ ಸಮೀಪದ ಕಿರದಳ್ಳಿ ತಾಂಡಾದ ಮಹಿಳೆಯೊಬ್ಬರು ಕೊಳವೆ ಬಾವಿ ನೀರು ಪಡೆಯುತ್ತಿರುವುದು   

ಕೆಂಭಾವಿ: ನಮ್ಮೂರಿಗೆ ಯಾರೂ ಹೆಣ್ಣು ಕೊಡೊದಿಲ್ಲ. ಹೆಣ್ಣು ಕೊಡಕೂ ಹೆದರುತ್ತಾರೆ ಸ್ವಾಮಿ. ಹಿಂಗಾಗಿ ನಮ್ಮ ಮಕ್ಕಳ ಮದುವೆ ಮಾಡೋದೆ ದುಸ್ತರವಾಗಿದೆ...

ಇದು ಸುರಪುರ ತಾಲ್ಲೂಕಿನ ಕಿರದಳ್ಳಿ ತಾಂಡಾದಲ್ಲಿ ಕೊಳವೆ ಬಾವಿಯಿಂದ ಬರುವ ಆರ್ಸೆನಿಕ್‌ಯುಕ್ತ ನೀರು ಸೇವನೆಯಿಂದ ಚರ್ಮ ರೋಗಕ್ಕೆ ತುತ್ತಾಗಿರುವ ಕುಟುಂಬದ ಸದಸ್ಯರ ಮಾತು.

ಇಲ್ಲಿನ ಕೊಳವೆಬಾವಿಯ ಆರ್ಸೆನಿಕ್‌ಯುಕ್ತ ನೀರು ಈ ಗ್ರಾಮಕ್ಕೆ ಸಾಮಾಜಿಕ ಪಿಡುಗಾಗಿದೆ. ತಾಂಡಾದಲ್ಲಿರುವ 125 ಕುಟುಂಬಗಳಲ್ಲಿ ಒಬ್ಬರಲ್ಲಾದರೂ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಈ ಗ್ರಾಮದಲ್ಲಿ ಸಂಬಂಧ ಬೆಳೆಸಲು ಯಾರೂ ಮುಂದೆ ಬರುತ್ತಿಲ್ಲ. ಕೆಲ ಕುಟುಂಬಗಳ ಸದಸ್ಯರು ತಾಂಡಾವನ್ನೇ ತೊರೆದು ವಲಸೆ ಹೋಗಿದ್ದಾರೆ.

ADVERTISEMENT

ಆರ್ಸೆನಿಕ್‌ಯುಕ್ತ ನೀರು ಸೇವನೆಯಿಂದಾಗಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಮೂವರಿಗೆ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಂಡು ಅದು ಕ್ಯಾನ್ಸರ್‌ ರೋಗಕ್ಕೆ ಮಾರ್ಪಾಡಾಗಿ ಮೃತಪಟ್ಟಿದ್ದಾರೆ.

ಎರಡು ತಿಂಗಳಲ್ಲಿ ಇಲ್ಲಿನ ರೂಪ್ಲಿಬಾಯಿ (60), ಹಣಮಂತರಾಯ ದಳಪತಿ (70), ನಾಣಪ್ಪ ದೇವಪ್ಪ (72) ಇವರು ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ.

ದಳಪತಿ ಸಹೋದರ ಮೀರುಲಾಲ ಕೃಷ್ಣಪ್ಪ (55) ಸೇರಿದಂತೆ ಗ್ರಾಮದ ಹಲವರು ಇದೇ ರೋಗಕ್ಕೆ ತುತ್ತಾಗಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.

ತಾಂಡಾದಲ್ಲಿ ಕಿರುನೀರು ಸರಬರಾಜಿಗಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ವಿದ್ಯುತ್‌ ಇಲ್ಲದಿದ್ದರೆ ಮತ್ತೆ ಕೊಳವೆ ಬಾವಿ ನೀರು ಕುಡಿಯಬೇಕಾಗಿದೆ ಎಂದು ತಾಂಡಾದ ನಿವಾಸಿ ಲಾಲು ಚೌಹಾಣ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.