ADVERTISEMENT

ಯಾದಗಿರಿ: ರಾಷ್ಟ್ರಮಟ್ಟದಲ್ಲಿ ಮಿಂಚಿದ ಯೋಗ ಸಾಧಕಿ ಅಶ್ವಿನಿ

ಮೊದಲಿಂದಲೂ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ, ಯೋಗ ಸ್ಪರ್ಧೆಯಲ್ಲಿ ಸಾಧನೆ

ಬಿ.ಜಿ.ಪ್ರವೀಣಕುಮಾರ
Published 21 ಜೂನ್ 2022, 4:56 IST
Last Updated 21 ಜೂನ್ 2022, 4:56 IST
ಯೋಗಾಸನದಲ್ಲಿ ನಿರತರಾಗಿರುವ ಯೋಗಪಟು ಬಿ.ಅಶ್ವಿನಿಪ್ರಜಾವಾಣಿ ಚಿತ್ರ/ರಾಜಕುಮಾರ ನಳ್ಳಿಕರ
ಯೋಗಾಸನದಲ್ಲಿ ನಿರತರಾಗಿರುವ ಯೋಗಪಟು ಬಿ.ಅಶ್ವಿನಿಪ್ರಜಾವಾಣಿ ಚಿತ್ರ/ರಾಜಕುಮಾರ ನಳ್ಳಿಕರ   

ಯಾದಗಿರಿ: ಈ ಯುವತಿ ಎಸ್ಸೆಸ್ಸೆಲ್ಸಿಯಲ್ಲಿ ರುವಾಗ ಯೋಗದ ಬಗ್ಗೆ ಮೂರು ದಿನಗಳ ಶಿಬಿರದಲ್ಲಿ ಪಾಲ್ಗೊಂಡಿ ದ್ದರು. ಅದನ್ನು ಅಷ್ಟಕ್ಕೆ ಬಿಡದೇ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ನಗರದ ಮಾತಾಮಾಣಿಕೇಶ್ವರಿ ನಗರದ ಶಿಕ್ಷಕ ಶಶಿಧರ ಅವರ ಪುತ್ರಿ ಬಿ.ಅಶ್ವಿನಿ. ಈಗ ಬಿಎಸ್‌ಸಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ ರಾಜ್ಯ ಮತ್ತು ಅಂತರರಾಜ್ಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಗಳಿಸಿ ತಂದೆ–ತಾಯಿ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಯೋಗ ಕಲಿತದ್ದು, ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಕುರಿತು ಅಶ್ವಿನಿಅವರ ಮಾತುಗಳಲ್ಲೇ ಓದಿ...
ಮೊದಲಿಂದಲೂ ಪಠ್ಯೇತರ ಚಟುವಟಿಕೆಗಳಲ್ಲಿ ನನಗೆ ಆಸಕ್ತಿ ಇತ್ತು. ಆಟೋಟಗಳಲ್ಲಿ ಭಾಗವಹಿಸಿದ್ದರಿಂದ ಯೋಗ ಕಲಿಯಲು ಪ್ರೇರಣೆಯಾಯಿತು. ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಮೂರು ದಿನ ನಡೆದ ಯೋಗ ಶಿಬಿರದಲಿ ಭಾಗವಹಿಸಿದ್ದೆ. ಅನೇಕ ಹೆಣ್ಣುಮಕ್ಕಳು 10ನೇ ತರಗತಿಯವರಗೆ ಮಾತ್ರ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಪಿಯು, ಪದವಿ ಹಂತದಲ್ಲಿ ಅವುಗಳನ್ನು ಸ್ಥಗಿತಗೊಳಿಸುತ್ತಾರೆ. ಆದರೆ ನಾನು ಪಿಯುಗೆ ಬಂದ ನಂತರ ಯೋಗ ಕಲಿಯಲು ಆಸಕ್ತಿ ಉಂಟಾಯಿತು.

ADVERTISEMENT

ಯೂಟ್ಯೂಬ್‌ ನೋಡಿ ಯೋಗ ಆಸನಗಳನ್ನು ಕಲಿತುಕೊಂಡೆ. ಉಪನ್ಯಾಸಕ ಡಾ.ಚಂದ್ರಕಾಂತ ಬಿರಾದಾರ ಅವರ ಪ್ರೇರಣೆಯಿಂದ ಹಲವು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಇದರಿಂದ ಅನೇಕ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಯಿತು.

ಕಲಬುರಗಿಯಲ್ಲಿ ಮಲಬಾರ್‌ ಗೋಲ್ಡ್‌ ಸಹಯೋಗದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ 100 ಹೆಣ್ಣುಮಕ್ಕಳು ಭಾಗವಹಿಸಿದ್ದರು. ಟಾಪ್‌ 5ರಲ್ಲಿ ನಾನು ಇದ್ದೆ. ₹20 ಸಾವಿರ ಬಹುಮಾನವಿತ್ತು. ವೋಟಿಂಗ್‌ ಆಧಾರದ ಮೇಲೆ ಜಯಶಾಲಿಯನ್ನು ಆಯ್ಕೆ ಮಾಡುವುದಾಗಿತ್ತು. ಇದರಲ್ಲಿ ಭಾಗವಹಿಸಿದ ನಂತರ ಉಳಿದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆಯಾಯಿತು.

ಆಂಧ್ರಪ್ರದೇಶದ ನೂಜಿವಿಡ್‌ನಲ್ಲಿ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಕಲಬುರಗಿಯ ಎಸ್‌ಬಿಆರ್‌ ಕಾಲೇಜಿನಿಂದ 6 ಬಾಲಕರು, 6 ಬಾಲಕಿಯರು ಭಾಗವಹಿಸಿದ್ದೇವು. ಇದಾದ ನಂತರ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ.

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಮಹಾತ್ಮ ಗಾಂಧಿ ಪ್ರತಿಭಾ ಯೋಗ ರತ್ನ ಪ್ರಶಸ್ತಿ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಯೋಗ ಟೂರ್ನಿಯಲ್ಲಿ ಭಾಗವಹಿಸಿದ್ದೇನೆ.

‘ಹೆಣ್ಣುಮಕ್ಕಳು ಯೋಗ ಮಾಡಿ’
‘ಆಧುನಿಕ ಆಹಾರ ಪದ್ಧತಿಯಿಂದ ಹೆಣ್ಣುಮಕ್ಕಳಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಡಿ), ನಿಯಮಿತವಾಗಿ ಋತುಚಕ್ರ ಆಗದಿರುವುದು ಈಗ ಸಾಮಾನ್ಯವಾಗಿದೆ. ಇದೆಲ್ಲ ಸರಿಯಾಗಿ ಇರಬೇಕು ಎಂದರೆ ಯೋಗ ಪರಿಣಾಮಕಾರಿ’ ಎನ್ನುತ್ತಾರೆ ಯೋಗಪಟು ಬಿ.ಅಶ್ವಿನಿ.

‘ನಾನು ಪ್ರತಿನಿತ್ಯ ಒಂದೂವರೆ ಗಂಟೆ ಯೋಗಾಭ್ಯಾಸ ಮಾಡುತ್ತಿದ್ದೇನೆ. ಯೋಗ ಮಾಡುವುದರಿಂದ ದೈಹಿಕ ಸಮತೋಲನ ಕಾಪಾಡಿಕೊಳ್ಳಬಹುದು. ಸದಾ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ವಿಷಯುಕ್ತ ಆಹಾರ ಸೇವನೆಯಿಂದ ಹೆಣ್ಣುಮಕ್ಕಳಲ್ಲಿ ವ್ಯತ್ಯಾಸಗಳಾಗುತ್ತವೆ. ಬರೀ ಓದುವ ಗುಂಗಿನಲ್ಲಿ ಇರದೇ ಯೋಗದಲ್ಲಿ ತೊಡಗಿಸಿಕೊಂಡರೆ ಉತ್ತಮ’ ಎನ್ನುತ್ತಾರೆ ಅವರು.

ಅನನ್ಯ ಯೋಗ ಸಾಧಕ ವೆಂಕಟೇಶ ಚಿತ್ರಕಾರ
ಸುರಪುರ:
ಆರೋಗ್ಯ ಸಮಸ್ಯೆ ನಿವಾರಣೆಗೆ ಯೋಗದ ಮೊರೆ ಹೋದ ನಗರದ ವರ್ತಕ ವೆಂಕಟೇಶ ಸಿದ್ದಣ್ಣ ಚಿತ್ರಕಾರ ಯೋಗದಿಂದಲೇ ಉತ್ತಮ ಆರೋಗ್ಯ ಕಂಡುಕೊಂಡಿದ್ದಾರೆ.

20 ವರ್ಷಗಳ ಹಿಂದೆ 80 ಕೆ.ಜಿ ತೂಕವಿದ್ದ ವೆಂಕಟೇಶ ಅವರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ರಾಮರಾವ ಕುಲಕರ್ಣಿ ಸಗರ ಎಂಬ ಯೋಗ ಗುರುವಿನ ಸಲಹೆ ಮೇರೆಗೆ ಯೋಗ ಕಲಿಯಲು ಆರಂಭಿಸಿ, ಯೋಗ ಮತ್ತು ಪ್ರಾಣಯಾಮದಲ್ಲಿ ಪರಿಣತಿ ಪಡೆದು ಸತತ ಯೋಗಾಭ್ಯಾಸದಿಂದ ಈಗ ಆರೋಗ್ಯ ಜೀವನ ನಡೆಸುತ್ತಿದ್ದಾರೆ. ಅವರ ತೂಕ ಈಗ ಬರೋಬ್ಬರಿ 60 ಕೆ.ಜಿಗೆ ಇಳಿದಿದೆ.

ನಿತ್ಯ ಬೆಳಿಗ್ಗೆ 6 ರಿಂದ 7.30 ರವರೆಗೆ ನಗರದ ಟೇಲರ್ ಮಂಜಿಲ್‌ ದಲ್ಲಿ ಕಳೆದ 18 ವರ್ಷ ಗಳಿಂದ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದಾರೆ. ಇದುವರೆಗೆ ಒಂದು ಸಾವಿರಕ್ಕೂ ಹೆಚ್ಚು ಜನ ಅವರಲ್ಲಿ ತರಬೇತಿ ಪಡೆದಿದ್ದಾರೆ.

‘ಈಗಿನ ಜಂಜಡ ಮತ್ತು ದುರಾಸೆಯ ಯುಗದಲ್ಲಿ ಎಲ್ಲರೂ ಹಣದ ಹಿಂದೆ ಬಿದ್ದಿದ್ದಾರೆ. ತಮ್ಮ ಆರೋಗ್ಯದ ಗಮನವೂ ಇಲ್ಲ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿದರೆ ಸದೃಢ ಆರೋಗ್ಯ ನಮ್ಮದಾಗಲಿದೆ. ಸುಂದರ ಸಮಾಜ ನಿರ್ಮಾಣವಾಗುತ್ತದೆ’ ಎನ್ನುತ್ತಾರೆ ಅವರು.

*

ಯೋಗಪಟು ಅಶ್ವಿನಿ ನ್ಯಾಷನಲ್ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಯೋಗ ಮಾಡುವ ಕುರಿತು ಅನೇಕರಿಗೆ ಸಲಹೆ ನೀಡುತ್ತಾರೆ
-ಕೆ.ಸೋಮನಾಥರೆಡ್ಡಿ ಎಲ್ಹೇರಿ, ಯೋಗ ಗುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.