ADVERTISEMENT

ಉತ್ತಿ – ಬಿತ್ತುವ ಅಯ್ಯಮ್ಮ

ಬಿ.ಜಿ.ಪ್ರವೀಣಕುಮಾರ
Published 8 ಮಾರ್ಚ್ 2020, 10:18 IST
Last Updated 8 ಮಾರ್ಚ್ 2020, 10:18 IST
ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರು ಗ್ರಾಮದ ಅಯ್ಯಮ್ಮ ಕೃಷಿ ಕೆಲಸದಲ್ಲಿ ನಿರತರಾಗಿರುವುದು
ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರು ಗ್ರಾಮದ ಅಯ್ಯಮ್ಮ ಕೃಷಿ ಕೆಲಸದಲ್ಲಿ ನಿರತರಾಗಿರುವುದು   

ಯಾದಗಿರಿ: ತಾಲ್ಲೂಕಿನ ಅಬ್ಬೆತುಮಕೂರು ಗ್ರಾಮದಲ್ಲಿ 40 ವರ್ಷದಿಂದ ಪುರುಷರಿಗೆ ಸರಿಸಮಾನವಾಗಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಅಯ್ಯಮ್ಮ ಗಮನ ಸೆಳೆಯುತ್ತಿದ್ದಾರೆ.

‘ನನ್ನ ಅಣ್ಣನ ನಿಧನ ನಂತರ ಕೃಷಿ ಕೆಲಸ ಹೆಗಲಿಗೆ ಬಿತ್ತು. ಅಣ್ಣನ ಇಬ್ಬರು ಮಕ್ಕಳು ಸಣ್ಣ ಪ್ರಾಯದವರು ಇದ್ದರು. ಹೀಗಾಗಿ ಅವರಿಂದ ಕೃಷಿ ಕೆಲಸ ಮಾಡಿಸಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ನಾನೇ ಕೃಷಿ ಮಾಡಿಕೊಂಡು ಬಂದಿದ್ದೇನೆ’ ಎನ್ನುತ್ತಾರೆ60 ವರ್ಷದ ಅಯ್ಯಮ್ಮ ಅಬ್ಬೆತುಮಕೂರು.

ಬಿತ್ತನೆ ಬೀಜದಿಂದ ಹಿಡಿದು ಮನೆಗೆ ಫಸಲಿನ ಚೀಲ ಬರುವವರೆಗೆ ಇವರದೇ ಉಸ್ತುವಾರಿ. ಊರಿನವರು ಮೊದಲು ಹೇಗೆ ಇದನ್ನೆಲ್ಲ ಅಯ್ಯಮ್ಮ ಮಾಡುತ್ತಾರೆ ಎಂದು ಆಶ್ಚರ್ಯಪಟ್ಟಿದ್ದರು. ಬರುಬರುತ್ತಾ ಎಲ್ಲ ಕೆಲಸ ಮಾಡುವುದನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದರು.

ADVERTISEMENT

ಅಯ್ಯಮ್ಮ ಎಲ್ಲ ಬಗೆಯ ಕೃಷಿ ಚಟುವಟಿಕೆ, ಉಳುಮೆ–ಬಿತ್ತನೆಯ ಕೆಲಸ ಮಾಡುತ್ತಾರೆ.

15ರಿಂದ 16ನೇ ವಯಸ್ಸಿನಲ್ಲಿ ಕೃಷಿ ಕೆಲಸ ಆರಂಭಿಸಿದ್ದಾರೆ. ಅಣ್ಣ ಮರಿಲಿಂಗಪ್ಪ ನಿಧನದ ನಂತರ ಒಕ್ಕಲುತನ ಬಿಡಬಾರದು ಎನ್ನುವ ಕಾರಣಕ್ಕೆ ಕೃಷಿ ಕೆಲಸ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತಂಗಿ ಮಲ್ಲಮ್ಮ ಅವರನ್ನು ಮೊದಂಪುರಕ್ಕೆ ಮದುವೆ ಮಾಡಿಕೊಡಲಾಗಿದೆ. ಅಯ್ಯಮ್ಮ ಅವರದ್ದು ಬಾಲ್ಯ ವಿವಾಹ. ಹೀಗಾಗಿ ಪತಿ ಮನೆಗೆ ತೆರಳದೆ ತವರು ಮನೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ.

‘6 ಎಕರೆ ಜಮೀನು ಇದೆ. ಇದರಲ್ಲಿ ಹತ್ತಿ, ಜೋಳ, ಶೇಂಗಾ, ಭತ್ತ, ಹೆಸರು ಬಿತ್ತನೆ ಮಾಡಲಾಗುತ್ತಿದೆ. ಈಗ ವಯಸ್ಸಾಗಿದ್ದರಿಂದ ಅಣ್ಣನ ಮಕ್ಕಳು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ನಾನು ಕೃಷಿ ಮಾಡುವುದನ್ನು ಬಿಟ್ಟಿಲ್ಲ’ ಎನ್ನುತ್ತಾರೆ
ಅವರು.

‘ಪುರುಷರು ಮಾಡುವ ಕೆಲಸಗಳನ್ನು ನಮ್ಮ ಅತ್ತೆ ಮಾಡುತ್ತಿದ್ದಾರೆ. ಅವರ ಬೆಂಬಲವಾಗಿ ನಾವಿದ್ದೇವೆ, ನಾವು ಸಣ್ಣವರು ಇದ್ದಾಗ ತಂದೆಯಂತೆಯೇ ಕೆಲಸ ಮಾಡಿದ್ದರು’ ಎಂದು ಅಭಿಮಾನದಿಂದ ಹೇಳುತ್ತಾರೆ ಅಳಿಯ ಮರಿಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.