ADVERTISEMENT

ತಾಯಿ ಪಕ್ಷಕ್ಕೆ ಬಾಬುರಾವ ಚಿಂಚನಸೂರ ದ್ರೋಹ: ಮಟ್ಟೆಣನವರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 15:13 IST
Last Updated 21 ಮಾರ್ಚ್ 2023, 15:13 IST
   

ಯಾದಗಿರಿ: ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಬಿಜೆಪಿ ತಾಯಿ ಪಕ್ಷ ಎಂದು ಹೇಳಿ ಅದೇ ತಾಯಿಗೆ ದ್ರೋಹ ಮಾಡಿ ಹೋಗಿದ್ದಾರೆ. ಇದರಿಂದ ಗುರಮಠಕಲ್ ಮತಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ ಎಂದು ಕಾಡಾ ಅಧ್ಯಕ್ಷ ಮಾಜಿ ಗಿರೀಶ ಮಟ್ಟೆಣ್ಣನವರ್‌ ಆರೋಪಿಸಿದರು.

ಬಿಜೆಪಿ ಪಕ್ಷದಲ್ಲಿ ಇದ್ದು, ಅಧಿಕಾರ ಅನುಭವಿಸಿ ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಾಬುರಾವ ಚಿಂಚನಸೂರಗೆ ಬಿಜೆಪಿ ಪಕ್ಷ ಎಲ್ಲಾ ರೀತಿಯಿಂದ ಅಧಿಕಾರ ಕೊಟ್ಟರೂ ಅಧಿಕಾರದ ದುರಾಸೆಗೆ ಪಕ್ಷಕ್ಕೆ ರಾಜೀನಾಮೆ ನೀಡಿರುವುದರಿಂದ ಕೋಲಿ ಸಮಾಜಕ್ಕೆ ಅನ್ಯಾಯವಾಗಿದೆ. ವಿಧಾನ ಪರಿಷತ್ ಸ್ಥಾನ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ಪಡೆದು ಅಧಿಕಾರ ಅನುಭವಿಸಿ ಪಕ್ಷ ತ್ಯಜಿಸಿರುವುದು ನೋವಿನ ಸಂಗತಿ ಎಂದು ಹೇಳಿದರು.

ADVERTISEMENT

ಶೋಷಿತ ವರ್ಗಗಳ ಏಳಿಗೆಗಾಗಿ ಕೆಲಸ ಮಾಡುತ್ತಾರೆ ಎಂದು ಭಾವಿಸಿ ಬಿಜೆಪಿ ಸರ್ಕಾರ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದರು. ಅವರ ಧರ್ಮಪತ್ನಿ ಅವರನ್ನು ಕೇಂದ್ರ ಆಹಾರ ನಿಗಮದ ನಿರ್ದೇಶಕರನ್ನು ಮಾಡಿದ್ದಾರೆ. ಅದೇನೆಲ್ಲ ಮರೆತು ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ ಆಪಾದಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್‌ ಖರ್ಗೆ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ. ಅದನ್ನು ಮರೆತು ಪಕ್ಷಕ್ಕೆ ಯಾವ ಮುಖವನ್ನು ಇಟ್ಟುಕೊಂಡು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಾರೆ ಎಂದು ಜನರಿಗೆ ಕಾಂಗ್ರೆಸ್ ಪಕ್ಷದ ನಾಯಕರು ಉತ್ತರ ಕೊಡಬೇಕಾಗುತ್ತದೆ ಎಂದು ಹೇಳಿದರು.

ಬಾಬುರಾವ ಚಿಂಚನಸೂರ ಅವರು ಇಡೀ ರಾಜ್ಯದ ಕೋಲಿ ಸಮಾಜದ ಜನತೆಗೆ ಅನ್ಯಾಯ ಮಾಡಿದ್ದಾರೆ. ಅವರು ತಮ್ಮ ಅಧಿಕಾರದ ದುರಾಸೆ ಸಲುವಾಗಿ ಪಕ್ಷದಿಂದ ಪಕ್ಷಕ್ಕೆ ಹೋಗುತ್ತಿದ್ದಾರೆ. ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗುರಮಠಕಲ್ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಾಯಿಬಣ್ಣ ಬಸವಂತಪುರ, ಸೂಗಪ್ಪ ನೀಲಹಳ್ಳಿ, ಹಣಮಂತ ಮೇಸ್ತರಿ ಅಚ್ಚೋಲಾ, ಮಲ್ಲಿಕಾರ್ಜುನ ಕೌಳೂರ, ನಾಗರಾಜ, ರವಿ ಕುಲಕರ್ಣಿ ಇಡ್ಲೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.