ADVERTISEMENT

ಗಿರಿ ನಗರಕ್ಕೆ ದುರ್ವಾಸನೆಯ ಸ್ವಾಗತ!

ರೈಲ್ವೆ ಸೇತುವೆ ಬಳಿ ಮಾಂಸ ತ್ಯಾಜ್ಯದಿಂದ ಕೆಟ್ಟ ವಾಸನೆ, ಅಧಿಕಾರಿಗಳಿಗೆ ಹಿಡಿ ಶಾಪ

ಬಿ.ಜಿ.ಪ್ರವೀಣಕುಮಾರ
Published 21 ಅಕ್ಟೋಬರ್ 2022, 6:42 IST
Last Updated 21 ಅಕ್ಟೋಬರ್ 2022, 6:42 IST
ಯಾದಗಿರಿ ನಗರದ ರೈಲ್ವೆ ಸೇತುವೆ ಸಮೀಪ ಮಾಂಸ ತ್ಯಾಜ್ಯಗಳನ್ನು ರಾಶಿಗಟ್ಟಲೇ ಸುರಿದಿದ್ದು, ದುರ್ವಾಸನೆ ಬೀರುತ್ತದೆ
ಯಾದಗಿರಿ ನಗರದ ರೈಲ್ವೆ ಸೇತುವೆ ಸಮೀಪ ಮಾಂಸ ತ್ಯಾಜ್ಯಗಳನ್ನು ರಾಶಿಗಟ್ಟಲೇ ಸುರಿದಿದ್ದು, ದುರ್ವಾಸನೆ ಬೀರುತ್ತದೆ   

ಯಾದಗಿರಿ: ನಗರ ಹೊರವಲಯದ ರೈಲ್ವೆ ಸೇತುವೆ ಬಳಿ ಮಾಂಸ ತ್ಯಾಜ್ಯ ವಸ್ತುಗಳನ್ನು ಬಿಸಾಡುತ್ತಿದ್ದು, ದುರ್ವಾಸನೆಗೆ ಜನರು ಬೇಸತ್ತಿದ್ದಾರೆ.

ಹೈದರಾಬಾದ್‌–ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಕೆಟ್ಟ ವಾಸನೆ ಜನರಿಗೆ ಹೇಸಿಗೆಯನ್ನುಂಟು ಮಾಡಿದೆ. ಬಸ್‌ ಪ್ರಯಾಣಿಕರು, ಬೈಕ್‌ ಸವಾರರು, ಆಟೊ ಚಾಲಕರು, ಪಾದಯಾತ್ರಿಗಳು ಮೂಗುಮುಚ್ಚಿಕೊಂಡೆ ತೆರಳಬೇಕು. ಇಲ್ಲದಿದ್ದರೆ ಉಸಿರು ಬಿಗಿ ಹಿಡಿದು ಆ ಸ್ಥಳ ದಾಟುವವರೆಗೆ ಕಾಯಬೇಕಾದ ಪರಿಸ್ಥಿತಿ ಬಂದಿದೆ.

ಹಳೆ ಬಸ್‌ ನಿಲ್ದಾಣ ಸಮೀಪ ಮಾಂಸಹಾರಿ ಹೋಟೆಲ್‌, ಮಾಂಸಹಾರಿ ಮಳಿಗೆಗಳಿದ್ದು, ಅಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ಮಾಂಸವನ್ನು ರೈಲ್ವೆ ಸೇತುವೆ ಬಳಿ ಬಿಸಾಡುತ್ತಿದ್ದಾರೆ. ಇದು ಕೊಳೆತು ದುರ್ವಾಸನೆ ಬೀರುವುದರಿಂದ ಹಲವಾರು ರೋಗಗಳಿಗೆ ಕಾರಣವಾಗುತ್ತಿದೆ.

ADVERTISEMENT

ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು: ನಗರಾಭಿವೃದ್ಧಿ ಮತ್ತು ನಗರಸಭೆ ಅಧಿಕಾರಿಗಳು ನಗರ ಹೊರವಲಯದಲ್ಲಿ ಮಾಂಸ ತ್ಯಾಜಗಳಿಂದ ದುರ್ವಾಸನೆ ಹರಡುತ್ತಿರುವ ಬಗ್ಗೆ ಗೊತ್ತಿದ್ದರೂ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೇ ಮಾರ್ಗದಲ್ಲಿ ಅಧಿಕಾರಿಗಳು ತೆರಳುತ್ತಿದ್ದು, ಎಸಿ ವಾಹನದಲ್ಲಿ ತೆರಳುವವರಿಗೆ ಇದೆಲ್ಲ ಹೇಗೆ ಗೊತ್ತಾಗಬೇಕು ಎನ್ನುವುದು ನಾಗರಿಕರ ಅಳಲಾಗಿದೆ.

ಪ್ರಮುಖ ರಸ್ತೆ: ಶಹಾಪುರ–ಸುರಪುರ–ಯಾದಗಿರಿ ರಾಜ್ಯ ಹೆದ್ದಾರಿಯ ಕೋಳಿ ಮಾಂಸ ತ್ಯಾಜ್ಯ, ರೆಕ್ಕೆಪುಕ್ಕ ಎಲ್ಲೆಂದರೆಲ್ಲಿ ಬಿಸಾಕಲಾಗಿದ್ದು, ನಗರಕ್ಕೆ ಬರುವವರಿಗೆ ಕೆಟ್ಟದುರ್ವಾಸನೆಬೀರುತ್ತಿದೆ.

ಶಾಲಾ–ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಆಗಮಿಸುತ್ತಾರೆ. ಪ್ರತಿದಿನ ಬೆಳಿಗ್ಗೆ, ಸಂಜೆ ವೇಳೆ ದುರ್ವಾಸನೆಯಿಂದ ಬೇಸತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ರಾಶಿಗಟ್ಟಲೇ ಕೋಳಿ ರೆಕ್ಕೆಪುಕ್ಕ, ಕೊಳೆತ ಮಾಂಸ ತ್ಯಾಜ್ಯದ ದುರ್ವಾಸನೆ ಆ ಭಾಗದಲ್ಲಿ ತೆರಳುವವರಿಗೆ ವಾಕರಿಕೆ ತರಿಸುತ್ತಿದೆ.

ಎತ್ತೆತ್ತುಕೊಳ್ಳಲಿ ಜನಪ್ರತಿನಿಧಿಗಳು: ಜಿಲ್ಲಾ ಕೇಂದ್ರವಾಗಿದ್ದು, ಪ್ರತಿನಿತ್ಯ ಸಾವಿರಾರು ಜನರ ಓಡಾಟ ಇರುತ್ತದೆ. ಆದರೆ, ದುರ್ವಾಸನೆಯಿಂದ ಇಡೀ ನಗರಸಭೆಗೆ ಕೆಟ್ಟ ಹೆಸರು ತರುವಂತಹ ಕೆಲಸ ಕೆಲ ಮಾಂಸ ವ್ಯಾಪಾರಿ, ಹೋಟೆಲ್‌ ಮಾಲೀಕರಿಂದ ಆಗುತ್ತಿದೆ. ತ್ಯಾಜ್ಯ ಮಾಂಸ ವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ.

‘ಅಧಿಕಾರಿಗಳು, ಜನಪ್ರತಿನಿಧಿಗಳು ಮಾಂಸದ ಅಂಗಡಿ ಮಾಲೀಕರಿಗೆ ಜಾಗೃತಿ ಮೂಡಿಸಬೇಕು. ರಸ್ತೆ ಪಕ್ಕದಲ್ಲಿ ತ್ಯಾಜ್ಯ ಸುರಿಯದಂತೆ ತಿಳಿವಳಿಕೆ ನೀಡಬೇಕು. ಆಗ ಮಾತ್ರ ರಸ್ತೆ ಬದಿ ಚೆಲ್ಲಾಡುವುದು ನಿಲ್ಲಲ್ಲಿದೆ. ಒಂದು ದಿನ ಸ್ವಚ್ಛಗೊಳಿಸಿ, ಮರುದಿನ ಮತ್ತೆ ಯಥಾಸ್ಥಿತಿಗೆ ಬಂದರೆ ಯಾವುದೇ ಲಾಭವಿಲ್ಲ’ ಎಂದು ನಗರನಿವಾಸಿ ರವಿಕುಮಾರ ಸತ್ಯಂಪೇಟೆ ಆಗ್ರಹಿಸುತ್ತಾರೆ.

‘ಯಾದಗಿರಿ ನಗರದ ಮುಖ್ಯ ರಸ್ತೆಯ ಹತ್ತಿರ ಮಾಂಸ ತ್ಯಾಜ್ಯ ಬಿಸಾಡಿದ್ದಾರೆ. ಯಾದಗಿರಿ ಬರುವ ಜನರಿಗೆ ದುರ್ವಾಸನೆ ಸ್ವಾಗತ ಮಾಡುತ್ತಿದೆ. ಕೆಟ್ಟ ವಾಸನೆಯಿಂದ ರೋಗ ರುಜನಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಕೂಡಲೇ ನಗರಸಭೆ ಪೌರಾಯುಕ್ತರು, ಜನಪ್ರನಿಧಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಯಾದಗಿರಿಗೆ ಬರುವ ಜನರಿಗೆ ಒಳ್ಳೆಯ ವಾತಾವರಣ ನಿರ್ಮಿಸಬೇಕು’ ಬಬಲಾದಿ ಗ್ರಾಮಸ್ಥ ಗೌತಮ ಕ್ರಾಂತಿ ಆಗ್ರಹಿಸುತ್ತಾರೆ.

***

ವಡಗೇರಾದಿಂದ ಯಾದಗಿರಿಗೆ ಬರುವಾಗ ರೈಲ್ವೆ ಸೇತುವೆ ಬಳಿ ಕುರಿ, ಕೋಳಿ, ಆಡು ಸೇರಿದಂತೆ ಕರುಳು, ಚರ್ಮ ಇನ್ನಿತರ ಮಾಂಸ ತ್ಯಾಜ್ಯ ವಸ್ತುಗಳನ್ನು ಬಿಸಾಡಿದ್ದು, ಇದರಿಂದ ದುರ್ವಾಸನೆ ಬೀರುತ್ತದೆ. ಇಲ್ಲಿ ಸುರಿಯದಂತೆ ಶಾಶ್ವತವಾದ ಕ್ರಮಕೈಗೊಳ್ಳಬೇಕು
ಗೌತಮ ಕ್ರಾಂತಿ, ಬಬಲಾದಿ ಗ್ರಾಮಸ್ಥ

***

ರೈಲ್ವೆ ಸೇತುವೆ ಬಳಿ ಮಾಂಸ ತ್ಯಾಜ್ಯ ಬಿಸಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಸ್ವಚ್ಛ ಮಾಡಿಸುತ್ತೇನೆ. ವ್ಯಾಪಾರಿಗಳು ಈ ರೀತಿ ರಸ್ತೆ ಬದಿ ತ್ಯಾಜ್ಯ ಬಿಸಾಡುವುದರಿಂದ ದುರ್ವಾಸನೆಗೆ ಕಾರಣವಾಗುತ್ತಿದೆ. ಈ ಬಗ್ಗೆ ಶಾಶ್ವತ ಕ್ರಮ ವಹಿಸಲಾಗುವುದು
ಸುರೇಶ ಅಂಬಿಗೇರ, ನಗರಸಭೆ ಅಧ್ಯಕ್ಷ

ಕೆಲವರು ಮಾತ್ರ ರೈಲ್ವೆ ಸೇತುವೆ ಬಳಿ ಮಾಂಸ ತ್ಯಾಜ್ಯ ಬಿಸಾಡುತ್ತಿದ್ದಾರೆ. ಸೂಕ್ತ ವಿಲೇವಾರಿಗೆ ಸಂಬಂಧಿಸಿದವರು ಜಾಗೃತಿ ಮೂಡಿಸಿದರೆ ಹೊರಗಡೆ ಬಿಸಾಡುವುದು ತಪ್ಪಲಿದೆ. ಇದರಿಂದ ದುರ್ವಾಸನೆ ಬೀರುವುದು ತಪ್ಪಲಿದೆ

- ಮಹಮ್ಮದ್‌ ಆರೀಫ್‌, ಮಾಂಸ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.