ADVERTISEMENT

ಹುಣಸಗಿ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 3:13 IST
Last Updated 28 ಸೆಪ್ಟೆಂಬರ್ 2021, 3:13 IST
ಹುಣಸಗಿ ಪಟ್ಟಣದಲ್ಲಿ ಭಾರತ್ ಬಂದ್ ಬೆಂಬಲಿಸಿ ನಡೆದ ಪ್ರತಿಭಟನೆ ಬಳಿಕ ರೈತಸಂಘದ ರಾಜ್ಯ ಘಟಕದ ಉಪಾಧ್ಯಕ್ಷೆ ಮಹಾದೇವಿ ಬೇನಾಳಮಠ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮುಖಂಡ ಬಸನಗೌಡ, ಸಿದ್ದಣ್ಣ ಅಬ್ಯಾಳಿ ಇದ್ದರು
ಹುಣಸಗಿ ಪಟ್ಟಣದಲ್ಲಿ ಭಾರತ್ ಬಂದ್ ಬೆಂಬಲಿಸಿ ನಡೆದ ಪ್ರತಿಭಟನೆ ಬಳಿಕ ರೈತಸಂಘದ ರಾಜ್ಯ ಘಟಕದ ಉಪಾಧ್ಯಕ್ಷೆ ಮಹಾದೇವಿ ಬೇನಾಳಮಠ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮುಖಂಡ ಬಸನಗೌಡ, ಸಿದ್ದಣ್ಣ ಅಬ್ಯಾಳಿ ಇದ್ದರು   

ಹುಣಸಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತಸಂಘದ (ಕೋಡಿಹಳ್ಳಿ ಚಂದ್ರಶೇಖರ ಬಣ) ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಬೇನಾಳಮಠ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಭಾರತ ಬಂದ್‌ಗೆ ಬೆಂಬಲಿಸಿ ನಡೆದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ರೈತರನ್ನು ಮೂಲೆಗುಂಪು ಮಾಡಲು ಹೊರಟಿದೆ. ದೇಶದಲ್ಲಿ ಕೃಷಿ ಭೂಮಿ ಪರಭಾರೆ, ಬಿತ್ತನೆ ಬೀಜ ಹಾಗೂ ಗೋ ಸಂರಕ್ಷಣೆ ಹೆಸರಿನಲ್ಲಿ ಅವರು ತಂದಿರುವ ಕಾನೂನುಗಳು ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿರುವ ವ್ಯವಸ್ಥಿತ ಹುನ್ನಾರ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ADVERTISEMENT

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಚಿಂಚೋಳಿ ಮಾತನಾಡಿ, ಜನಸಾಮಾನ್ಯರಿಗೆ ಅಗತ್ಯ ವಸ್ತುಗಳಾದ ಅನಿಲ, ಪೆಟ್ರೋಲ್, ಡೀಸೆಲ್ ಹಾಗೂ ದಿನಸಿ ವಸ್ತುಗಳ ಬೆಲೆ ಗಗನಕ್ಕೇರುತ್ತಲೆ ಇವೆ. ಇಷ್ಟಿದ್ದರೂ ಸಹ ನಮ್ಮದು ರೈತ ಪರ ಸರ್ಕಾರ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಇದರ ಹಿಂದೆ ಇರುವ ಗುಟ್ಟು ಏನು ಎಂದು ಪ್ರಶ್ನಿಸಿದರು.

ರೈತ ಮುಖಂಡರಾದ ಶಿವಪ್ಪ ಸದಬ, ಚಂದ್ರಕಾಂತ ಗೊಡ್ರಿಹಾಳ, ಯಮನಪ್ಪ ಕುಂಬಾರ, ರುದ್ರಪ್ಪ ಮೇಟಿ, ಶರಣಮ್ಮ ಬೂದಿಹಾಳ ಇತರರು ಹೋರಾಟದಲ್ಲಿ ಮಾತನಾಡಿದರು.

ಸಂಘದ ಹುಣಸಗಿ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಣ್ಣ ಅಬ್ಯಾಳಿ, ಸಿದ್ದನಗೌಡ ಗುರಡ್ಡಿ, ರಾಚಯ್ಯಸ್ವಾಮಿ, ಸಾಬಣ್ಣ ಗಿಂಡಿ, ಕಾಶಿಂಸಾಬ ಅಗ್ನಿ, ಮಲ್ಲಿಕಾರ್ಜುನ ಗೌಂಡಿ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳ ಗ್ರಾಮ ಘಟಕದ ಪದಾಧಿಕಾರಿಗಳು ರೈತರು ಭಾಗವಹಿಸಿದ್ದರು.

ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಬಸ್ ನಿಲ್ದಾಣದ ಹತ್ತಿರ ಹಾಗೂ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಣಿ ನಡೆಸಲಾಯಿತು. ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ವೆಂಕಟೇಶ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಪಿಐ ದೌಲತ್.ಎನ್.ಕೆ ಅವರ ನೇತೃತ್ವದ ಪೊಲೀಸ್ ಬಂದೋಬಸ್ತ್‌ನಲ್ಲಿ ನಾರಾಯಣಪುರ ಪಿಎಸ್ಐ ಸಿದ್ದೇಶ್ವರ, ಕೆಂಭಾವಿ ಪಿಎಸ್ಐ ಗಜಾನಂದ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.