ADVERTISEMENT

ಉಕ್ಕಿದ ಭೀಮಾ; ದ್ವೀಪವಾದ ಹೆಡಗಿಮದ್ರಾ

ತೋಟೇಂದ್ರ ಎಸ್ ಮಾಕಲ್
Published 15 ಅಕ್ಟೋಬರ್ 2020, 8:48 IST
Last Updated 15 ಅಕ್ಟೋಬರ್ 2020, 8:48 IST
ಯಾದಗಿರಿ ತಾಲ್ಲೂಕಿನ ಸೈದಾಪುರ ಸಮೀಪದ ಗೂಡೂರು ಮತ್ತು ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಸುತ್ತಮುತ್ತಲಿನ ಜಮೀನು ಜಲಾವೃತ್ತವಾಗಿದೆ
ಯಾದಗಿರಿ ತಾಲ್ಲೂಕಿನ ಸೈದಾಪುರ ಸಮೀಪದ ಗೂಡೂರು ಮತ್ತು ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಸುತ್ತಮುತ್ತಲಿನ ಜಮೀನು ಜಲಾವೃತ್ತವಾಗಿದೆ   

ಯರಗೋಳ (ಯಾದಗಿರಿ ಜಿಲ್ಲೆ): ಇಲ್ಲಿಗೆ ಸಮೀಪದ ಹೆಡಗಿಮದ್ರಾ ಗ್ರಾಮದ ಸುತ್ತಲಿನ ಹಳ್ಳಿಗಳಲ್ಲಿ ಭೀಮಾನದಿ ನೀರು ನುಗ್ಗಿ ಹೊಲ, ಗದ್ದೆಗಳಲ್ಲಿನ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೃಷಿಕರಾದ ಸಿದ್ದಪ್ಪ ಚಪ್ಪರ ಮನೆ, ಚಂದಪ್ಪ, ನವಾಬ್ ಖಾನ್, ಸಾಬಣ್ಣ ಹೇಳವರ ಹೊಲಗಳಲ್ಲಿ ನೀರು ನುಗ್ಗಿ ಹತ್ತಿ, ಕಬ್ಬು, ತೊಗರಿ, ಭತ್ತ ಸಂಪೂರ್ಣ ಜಲಾವೃತಗೊಂಡಿದೆ.

ಹೆಡಗಿಮದ್ರಾ ಗ್ರಾಮದಿಂದ ತಳಕ್ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ನೀರಲ್ಲಿ ಮುಳುಗಡೆ ಆಗಿದೆ. ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಸನ್ನತಿ, ನಾಲವಾರ ಗ್ರಾಮಕ್ಕೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ADVERTISEMENT

ಹೆಡಗಿಮದ್ರಾ ಗ್ರಾಮದಿಂದ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಠಾಣಗುಂದಿ ಗ್ರಾಮದಿಂದ ಹೆಡಗಿಮದ್ರಾಕ್ಕೆ ಸಂಪರ್ಕಿಸುವ ರಸ್ತೆಯ ಮೇಲೆ ಹಳ್ಳ ಉಕ್ಕಿ ಹರಿಯುತ್ತಿದ್ದು, ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಲಕಂಠ ಶಹಾಪುರ ಪ್ರತಿಕ್ರಿಯಿಸಿ, 'ಗ್ರಾಮದ ಸುತ್ತಲು ನೀರು ನಿಂತಿದೆ. ಯಾವುದೇ ಸಾವು, ನೋವು ಸಂಭವಿಸಿಲ್ಲ' ಎಂದಿದ್ದಾರೆ.

‘ಗ್ರಾಮದ ಹೊಲಗಳಲ್ಲಿ ನೀರು ನುಗ್ಗಿ, ಅಪಾರ ಪ್ರಮಾಣದ ಬೆಳೆಗಳು ನಷ್ಟವಾಗಿದ್ದು, ಜಿಲ್ಲಾಡಳಿತ ಕೂಡಲೇ ಪರಿಹಾರ ಘೋಷಣೆ ಮಾಡುವಂತೆ’ ರೈತ ಸಂಘಟನೆಯ ಜಮಾಲ್ ಸಾಬ್ ಒತ್ತಾಯಿಸಿದ್ದಾರೆ.

ಹೆಡಗಿಮದ್ರಾ ಗ್ರಾಮದ ಸುತ್ತಲು ನೀರು ಆವರಿಸಿ ದ್ವೀಪದಂತೆ ಭಾಸವಾಗುತ್ತಿದೆ. ಸ್ಥಳಕ್ಕೆ ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.