ADVERTISEMENT

ಸುರಪುರ: ಬಿಸಿಲಲ್ಲೂ ಬಾನಾಡಿಗಳ ಕಲರವ

ನೀರಿನ ತೊಟ್ಟಿ ನಿರ್ಮಿಸಿ, ಕಾಳು ನೀಡುವ ವಾಯುವಿಹಾರಿಗಳು

ಅಶೋಕ ಸಾಲವಾಡಗಿ
Published 7 ಮಾರ್ಚ್ 2024, 6:17 IST
Last Updated 7 ಮಾರ್ಚ್ 2024, 6:17 IST
ಪಕ್ಷಿ ಮತ್ತು ಅಳಿಲು ತೊಟ್ಟಿಯಲ್ಲಿ ನೀರು ಕುಡಿಯುತ್ತಿರುವುದು
ಪಕ್ಷಿ ಮತ್ತು ಅಳಿಲು ತೊಟ್ಟಿಯಲ್ಲಿ ನೀರು ಕುಡಿಯುತ್ತಿರುವುದು   

ಸುರಪುರ: ನಗರದ ಬೆಟ್ಟ ಪ್ರದೇಶ ಯಲ್ಲಪ್ಪನ ಬಾವಿ, ಟೇಲರ್ ಮಂಜಿಲ್, ಫಾಲನ್ ಬಂಗ್ಲೆ, ಇತರೆಡೆ ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಿಗಳ ಸಂಖ್ಯೆ ಅಧಿಕವಾಗಿರುತ್ತದೆ.

ಸಮೃದ್ಧ ತಪ್ಪಲು ಪ್ರದೇಶವಾದ ಈ ಜಾಗ ಸದಾ ಹಚ್ಚಹಸಿರಿನಿಂದ ಕೂಡಿರುತ್ತಿತ್ತು. ಬೆಟ್ಟ ಗುಡ್ಡಗಳಲ್ಲಿ ಬೆಳೆದಿರುವ ವೈವಿಧ್ಯಮಯ ಗಿಡಗಳು ಹಲವು ಪಕ್ಷಿ ಪ್ರಬೇಧಕ್ಕೆ ಆಶ್ರಯ ನೀಡುತ್ತಿದ್ದವು.

ಯಲ್ಲಪ್ಪನಬಾವಿ, ಬಾವಿಯ ಹಿಂದಿರುವ ಎರಡು ಕೆರೆಗಳು ಬಾನಾಡಿಗಳಿಗೆ ನೀರು ಉಣಿಸುತ್ತಿದ್ದವು. ಈ ಭಾಗದಲ್ಲಿ ವಾಯು ವಿಹಾರ ಮಾಡುವ ಜನರಿಗೆ ಪಕ್ಷಿಗಳ ಕಲರವ, ಅಳಿಲು, ಮೊಲ, ನವಿಲು, ಮುಂಗುಸಿ ಇತರ ಪ್ರಾಣಿಗಳ ಓಡಾಟ ಮುದ ನೀಡುತ್ತಿತ್ತು.

ADVERTISEMENT

ಪ್ರಸಕ್ತ ವರ್ಷ ಸಮರ್ಪಕ ಮಳೆ ಬಾರದ್ದರಿಂದ ಗಿಡಗಳು ಒಣಗಿವೆ. ಕೆರೆ ನೀರು ಬತ್ತಿದೆ. ಹೀಗಾಗಿ ಫೆಬ್ರುವರಿಯಲ್ಲೆ ಪಕ್ಷಿಗಳು ಕಂಡು ಬರುತ್ತಿರಲಿಲ್ಲ. ಇದನ್ನರಿತ ವಾಯು ವಿಹಾರಿಗಳು ಟೇಲರ್ ಮಂಜಿಲ್‍ದಿಂದ ಫಾಲನ್ ಬಂಗ್ಲೆವರೆಗೆ ಸುಮಾರು ಎರಡು ಕಿ.ಮೀ. ಅಲ್ಲಲ್ಲಿ ಚಿಕ್ಕ ಚಿಕ್ಕ ಮಣ್ಣಿನ ತೊಟ್ಟಿಗಳನ್ನು ಇಟ್ಟಿದ್ದಾರೆ. ಗಿಡಗಳಿಗೆ ಜೋತು ಬಿಟ್ಟಿದ್ದಾರೆ. ಸಿಮೆಂಟ್‍ನಿಂದ ಕೆಲವು ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ನಿತ್ಯ ಈ ತೊಟ್ಟಿಗಳಿಗೆ ನೀರು ಹಾಕುತ್ತಾರೆ. ಜತೆಗೆ ಬಿಸ್ಕಟ್, ಬ್ರೆಡ್, ಕಾಳು, ಹಣ್ಣುಗಳು, ಸಕ್ಕರೆ, ಒಣ ಹಣ್ಣುಗಳನ್ನು ಹಾಕುತ್ತಿದ್ದಾರೆ.

ವಾಯು ವಿಹಾರಿಗಳ ಈ ನಿಸ್ವಾರ್ಥ ಸೇವೆ ಪಕ್ಷಿ ಪ್ರಾಣಿಗಳಿಗೆ ಜೀವ ನೀಡಿದಂತಾಗಿದೆ. ಬೆಳಕು ಹರಿಯಲು ಆರಂಭವಾಗುತ್ತಿದ್ದಂತೆ ಎಲ್ಲೆಡೆ ಪಕ್ಷಿಗಳ ಕಲರವ ನಡೆಯುತ್ತದೆ. ಪ್ರಾಣಿ, ಪಕ್ಷಿಗಳು ನಿತ್ಯ ತಮಗೆ ಆಹಾರ, ನೀರು ಉಣ ಬಡಿಸುವ ವ್ಯಕ್ತಿಗಳಿಗಾಗಿ ಕಾಯುತ್ತಿರುವುದು ಕಂಡು ಬರುತ್ತದೆ. ಮುಂಗುಸಿ, ಅಳಿಲುಗಳು ಧೈರ್ಯದಿಂದ ವಾಯು ವಿಹಾರಿಗಳ ಕೈಯಿಂದಲೇ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತವೆ. ಬೆಳಿಗ್ಗೆ ಈ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬ.

ಕರಿಗುಬ್ಬಿ, ಬಿಳಿಗುಬ್ಬಿ, ಬೆಳವ, ಗೊರವಂಕ, ಕಿಂಗ್ ಫಿಶರ್, ಗಿಣಿ, ಕಾಗೆ ಇನ್ನೂ ಹಲವು ಪಕ್ಷಿ ಪ್ರಬೇಧಗಳು ಒಟ್ಟಾಗಿ ಇಲ್ಲಿ ಕಂಡು ಬರುತ್ತಿವೆ. ಜೊತೆಗೆ ಸ್ವಚ್ಚಂದವಾಗಿ ಓಡಾಡುವ ಅಳಿಲು, ಮುಂಗುಸಿಯ ಆಟ ನೋಡುವುದೇ ಆನಂದ.

ಉಮಾಕಾಂತ ಪಂಚಮಗಿರಿ, ಮಲ್ಲಿಕಾರ್ಜುನ ಇನಾಮದಾರ, ಚಂದ್ರಶೇಖರ ಜೇವರ್ಗಿ, ದಿನೇಶ ವ್ಯಾಸ್, ಗೋಪಾಲ ರತ್ತವಾ, ಶ್ಯಾಮ ವ್ಯಾಸ್, ಶ್ರೀನಿವಾಸ ಸೋನಿ, ನರಸಿಂಹಕಾಂತ ಪಂಚಮಗಿರಿ, ಅಂಬರೀಷ್‌ ಜೇವರ್ಗಿ, ಶರದ್ ವ್ಯಾಸ್ ಇತರರು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕುಡುಕರ ತಾಣವಾಗಿರುವ ಪ್ರದೇಶ: ವಾಯು ವಿಹಾರಿಗಳಿಗೆ, ಪಕ್ಷಿ, ಪ್ರಾಣಿಗಳಿಗೆ ಹೇಳಿ ಮಾಡಿಸಿರುವ ಈ ಸ್ಥಳ ಕುಡುಕರ ಪ್ರದೇಶವಾಗುತ್ತಿದೆ. ಎಲ್ಲೆಡೆ ಕುಡಿದ ಬಾಟಲಿಗಳು ಬಿದ್ದಿವೆ. ಇಸ್ಪೀಟ್ ಎಲೆಗಳು ಕಂಡು ಬರುತ್ತವೆ. ಪಾರ್ಟಿ ಮಾಡಿ ಬೀಸಾಡಿದ ತ್ಯಾಜ್ಯ ಜಾಗವನ್ನು ಮಲೀನಗೊಳಿಸಿದೆ.

ಮೊಬೈಲ್ ಟವರ್‌ಗಳು ಹೊರಸೂಸುವ ಅಪಾಯಕಾರಿ ಕಿರಣಗಳಿಂದ ನಗರ ಪ್ರದೇಶದಲ್ಲಿ ಚಿಕ್ಕ ಚಿಕ್ಕ ಪಕ್ಷಿಗಳು ಕಂಡು ಬರುತ್ತಿಲ್ಲ. ಅದರಲ್ಲೂ ಗುಬ್ಬಚ್ಚಿಯ ಶಬ್ಧ ಸ್ತಬ್ಧಗೊಂಡಿದೆ. ನಗರ ಪ್ರದೇಶದಿಂದ ದೂರದಲ್ಲಿರುವ ಈ ಪ್ರದೇಶದಲ್ಲಿ ಗುಬ್ಬಚ್ಚಿಗಳ ಸಾಗರವೇ ಇದೆ.

ಸುರಪುರದ ಫಾಲನ್ ಬಂಗ್ಲೆ ಪ್ರದೇಶದಲ್ಲಿ ವಾಯುವಿಹಾರಿಗಳು ಪಕ್ಷಿಗಳು ಕುಡಿಯಲು ತೊಟ್ಟಿಯಲ್ಲಿ ನೀರು ಹಾಕುತ್ತಿರುವುದು
ಪಕ್ಷಿಗಳಿಗೆ ನೀರು ಆಹಾರ ನೀಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಈ ಕಾರ್ಯದಿಂದ ಮನಸ್ಸಿಗೆ ಸಿಗುವ ಆನಂದಕ್ಕೆ ಪಾರವೇ ಇಲ್ಲ
ಉಮಾಕಾಂತ ಪಂಚಮಗಿರಿ ವಾಯು ವಿಹಾರಿ
ಅನನ್ಯ ಪಕ್ಷಿತಾಣವಾಗಬಹುದಾದ ಈ ಪ್ರದೇಶ ಅನೈತಿಕ ಚಟುವಟಿಕೆಗಳಿಂದ ಜರ್ಜರಿತವಾಗಿದೆ. ತಾಲ್ಲೂಕು ಆಡಳಿತ ಈ ಪ್ರದೇಶದ ಸಂರಕ್ಷಣೆ ಮಾಡಬೇಕು
ಮಲ್ಲಿಕಾರ್ಜುನ ಇನಾಮದಾರ ವಾಯು ವಿಹಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.