ADVERTISEMENT

‘ಸಾಹಿತ್ಯ ಶೋಷಿತರ ಧ್ವನಿಯಾಗಲಿ’-ಈಶ್ವರ ಕಟ್ಟಿಮನಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 4:39 IST
Last Updated 20 ಏಪ್ರಿಲ್ 2022, 4:39 IST
ಯಾದಗಿರಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಡಾ.ಬಸವರಾಜ ಎಸ್.ಕಲೆಗಾರ ಅವರ ‘ಯಾದಗಿರಿ ಜಿಲ್ಲೆಯ ದಲಿತ ಕಾವ್ಯ’ ಮತ್ತು ‘ಚಿವುಟಿದಷ್ಟು ಚಿಗುರುವವರು’ ಎಂಬ ಕೃತಿಗಳ ಬಿಡುಗಡೆ ಮಾಡಲಾಯಿತು
ಯಾದಗಿರಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಡಾ.ಬಸವರಾಜ ಎಸ್.ಕಲೆಗಾರ ಅವರ ‘ಯಾದಗಿರಿ ಜಿಲ್ಲೆಯ ದಲಿತ ಕಾವ್ಯ’ ಮತ್ತು ‘ಚಿವುಟಿದಷ್ಟು ಚಿಗುರುವವರು’ ಎಂಬ ಕೃತಿಗಳ ಬಿಡುಗಡೆ ಮಾಡಲಾಯಿತು   

ಯಾದಗಿರಿ: ಬುದ್ಧ, ಬಸವ, ಅಂಬೇಡ್ಕರ್ ಅವರ ಕೊಟ್ಟ ಹಾದಿಯಲ್ಲಿ ನಾವು ನೀವೆಲ್ಲರೂ ನಡೆಯಬೇಕು. ಅವರ ತತ್ವ ನಿಷ್ಠೆಯ ಕಾಯಕ ಪ್ರಜ್ಞೆಯನ್ನು ಪಾಲಿಸಬೇಕು ಎಂದು ಕವಿ ಈಶ್ವರ ಕಟ್ಟಿಮನಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಡಾ.ಬಸವರಾಜ ಎಸ್.ಕಲೆಗಾರ ಅವರ ‘ಯಾದಗಿರಿ ಜಿಲ್ಲೆಯ ದಲಿತ ಕಾವ್ಯ’ ಮತ್ತು ‘ಚಿವುಟಿದಷ್ಟು ಚಿಗುರುವವರು’ ಎಂಬ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಪ್ರಭಾರ ಕುಲಪತಿ ಡಾ.ಟಿ.ಎಂ.ಭಾಸ್ಕರ್, ಅತ್ಯಂತ ಕಷ್ಟದಲ್ಲೂ ಸುಮಾರು 20 ಕೃತಿಗಳನ್ನು ಮುದ್ರಿಸಿದ ಡಾ.ಬಸವರಾಜ ಕಲೆಗಾರ ಅವರ ಸೇವೆ ಮೆಚ್ಚುವಂತಹದ್ದು, ಯಾದಗಿರಿ ಜಿಲ್ಲೆಯ ದಲಿತ ಕಾವ್ಯ ನೊಂದವರ ನೋವಿನ ಕಾವ್ಯ. ಅವಮಾನ ಶೋಷಣೆಗಳಂಥ ಬಿಗುವಿನ ವಾತಾವರಣದಲ್ಲಿ ತಮ್ಮ ಕಾವ್ಯವನ್ನು ಕಟ್ಟಿಕೊಟ್ಟ ಲೇಖಕರ ಕಾರ್ಯ ಗಮನಾರ್ಹವಾದದ್ದು. ಎಲೆಮರೆಯ ಕಾಯಿಯಂಥ ಅನೇಕ ಯುವ ಲೇಖಕರನ್ನು ಗುರುತಿಸಿ ದಾಖಲಿಸಿದ ಡಾ.ಬಸವರಾಜ ಕಲೆಗಾರ ಈ ಕಾರ್ಯ ಅಭಿನಂದನೀಯ ಎಂದರು.

ADVERTISEMENT

ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ, ಡಾ.ಬಸವರಾಜ ಕಲೆಗಾರ ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಹೊಂದಿದವರು. ಕಲೆ ಮತ್ತು ಸಾಹಿತ್ಯ ತನ್ನ ಬದುಕಿನ ಹಸಿರು ಉಸಿರು ಎಂಬಂತೆ ಕಾಯಕನಿರತರಾಗಿದ್ದಾರೆ. ಗಾಯಗೊಂಡ ಭಾರತ ಬಗ್ಗೆ ಬರೆದಂತೆ, ನೊಂದವರ ನೋವಿನ ಗೀತೆಯನ್ನು ಹಾಡಿದಂತೆ, ದಿನ ನಿತ್ಯ ನಡೆಯುವ ಶೋಷಣೆ ಅವಮಾನದಂಥ ಸಂಗತಿಗಳನ್ನು ಒಂದೆಡೆ ದಾಖಲಿಸಿದಂತೆ, ಯುವ ಪ್ರತಿಭೆಗಳನ್ನು ಗುರುತಿಸುವ ಮಹತ್ವದ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂಬ ನಿಲುವನ್ನು ವಿವರಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಡಾ.ಬಸವರಾಜ ಕಲೆಗಾರ ಅವರ ಸಾಹಿತ್ಯ ಕೃತಿಗಳು ಜಿಲ್ಲೆಯ ಸಾಹಿತ್ಯ ಅವಲೋಕನಕ್ಕೆ ಮಹತ್ವದ ದಾಖಲೆ. ಇಂಥ ಲೇಖಕರನ್ನು ಗುರುತಿಸಿ ಗೌರವಿಸುವ, ಬೆಳೆಸುವ ಕಾರ್ಯ ಜಿಲ್ಲಾ ಪರಿಷತ್ತು ಪ್ರಾಮಾಣಿಕವಾಗಿ ಮಾಡುತ್ತದೆ. ಜಿಲ್ಲೆಯ ಲೇಖಕರು ಮುಂದಿನ ದಿನಗಳಲ್ಲಿ ಇಂತಹ ಕೃತಿಗಳನ್ನು ಬರೆದರೆ ಪರಿಷತ್ತು ಪ್ರಕಟಿಸಿ ಪ್ರೋತ್ಸಾಹ ಮಾಡುತ್ತದೆ ಎಂದರು.

ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಲಿಂಗಣ್ಣ ಗೋನಾಲ ಮಾತನಾಡಿ, ವಡಗೇರಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ಗಾಳೆಪ್ಪ ಪೂಜಾರಿ, ಡಾ.ಬಸವರಾಜ ಕಲೆಗಾರ ಅವರ ಸಾಹಿತ್ಯ ಮತ್ತು ಕಲೆಯ ಬಗೆಗಿನ ಸೇವೆ ಸ್ಮರಿಸಿದರು.

ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಸಿದ್ದರಾಜರೆಡ್ಡಿ, ಡಾ.ಭೀಮರಾಯ ಲಿಂಗೇರಿ ನಿರೂಪಿಸಿ, ಸ್ವಾಗತಿಸಿ ದರು.ಕೃತಿಗಳ ಲೇಖಕ ಡಾ.ಬಸವರಾಜ ಕಲೆಗಾರ ವಂದಿಸಿದರು.

ಅಯ್ಯಣ್ಣ ಹುಂಡೇಕಾರ, ಆರ್.ಮಹಾದೇವಪ್ಪ ಅಬ್ಬೆತುಮಕೂರ, ಎಸ್.ಎನ್.ಮಣ್ಣೂರ, ಬಸವಂತರಾಯಗೌಡ, ವೆಂಕಟೇಶ ಕಲಕಂಭ, ರವೀಂದ್ರನಾಥ ಹೊಸಮನಿ, ಮಹೇಶ ಪಾಟೀಲ ಕಿಲ್ಲನಕೇರಾ, ಡಾ.ಸಿದ್ರಾಮರೆಡ್ಡಿ ತುಮಕೂರ, ಚನ್ನಪ್ಪ ಸಾಹು ಠಾಣಗುಂದಿ, ಡಾ.ಅಶೋಕ ಕುಮಾರ ಮಟ್ಟಿ, ಕುಪೇಂದ್ರ ವಠಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.