ADVERTISEMENT

ಬಜೆಟ್‌: ಗಿರಿ ಜಿಲ್ಲೆಗೆ ಸಿಕ್ಕಿಲ್ಲ ಅನುದಾನ

ನಿರಾಶದಾಯಕ ಬಜೆಟ್‌: ಹೊಸ ಯೋಜನೆ ಘೋಷಿಸಿಲ್ಲ, ಹಳೆಯದಕ್ಕೆ ಪುನಶ್ಚೇತನವಿಲ್ಲ

ಬಿ.ಜಿ.ಪ್ರವೀಣಕುಮಾರ
Published 6 ಮಾರ್ಚ್ 2020, 9:56 IST
Last Updated 6 ಮಾರ್ಚ್ 2020, 9:56 IST
ಮಂಜುಳಾ ಗೂಳಿ
ಮಂಜುಳಾ ಗೂಳಿ   

ಯಾದಗಿರಿ:ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ ಮಂಡಿ ಸಿರುವ 2020–21ನೇ ಆಯವ್ಯಯ ಜಿಲ್ಲೆಗೆ ಕಿಂಚಿಂತ್ತೂ ಅನುದಾನ ನೀಡದೆ ತೀರಾ ನಿರ್ಲಕ್ಷ್ಯಿಸಿದೆ.

ನೀರಾವರಿಗೆ ಯಾವುದೇ ಅನುದಾನ ನೀಡಿಲ್ಲ. ಕೃಷ್ಣಾ ಕೊಳ್ಳದ ರೈತರ ಬೇಡಿಕೆಗೆ ಸ್ಪಂದಿಸಿಲ್ಲ. ಹೊಸ ಯೋಜನೆಗಳನ್ನು ಘೋಷಿಸದಿದ್ದರೂ ಹಳೆಯೋಜನೆಗಳಿಗೆ ಯಾವುದೇ ಪುನಶ್ಚೇತನ ನೀಡಿಲ್ಲ. ಜಿಲ್ಲೆಯ ಸಾರ್ವಜನಿಕರು ಈ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ಸಿಗುತ್ತದೆ ಎಂದು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಿರೀಕ್ಷೆಗೆ ಎಳ್ಳು ನೀರು ಬಿಡಲಾಗಿದೆ.

ಡಿಪಿಆರ್‌ಗೆ ಸೀಮಿತ:‘ರಾಯಚೂರು, ಯಾದಗಿರಿ, ಕಲಬುರ್ಗಿ ಜಿಲ್ಲೆಗೆ ಕುಡಿವ ನೀರು ಪೂರೈಕೆಗೆ ತಿಂಥಣಿ ಸೇತುವೆ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಾಣ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕ್ರಮ’ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಆದರೆ, ಇದು ಡಿಪಿಆರ್‌ಗೆ ಮಾತ್ರ ಸೀಮಿತವಾಗಿದೆ. ಇದಕ್ಕೆ ಯಾವುದೇ ಅನುದಾನ ನಿಗದಿಗೊಳಿಸಿಲ್ಲ. ಇದರಿಂದ ಈ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ ಎಂದು ಜಿಲ್ಲೆಯ ಪ್ರಜ್ಞಾವಂತರ
ದೂರಾಗಿದೆ.

ADVERTISEMENT

10ರಲ್ಲಿ 6 ಕೊಡಬಹುದು:‘ರಾಜ್ಯ ಜಜೆಟ್‌ಗೆ 10ರಲ್ಲಿ 6 ಅಂಕ ಕೊಡಬಹುದು. ಎಲ್ಲರನ್ನು ಸಮಾಧಾನ ಪಡಿಸಿದಂತೆ ಬಜೆಟ್‌ ಸಿದ್ಧಪಡಿಸಲಾಗಿದೆ. ಆದರೆ, ಕಲ್ಯಾಣ ಕರ್ನಾಟವನ್ನು ನಿರ್ಲಕ್ಷ್ಯಿಸಲಾಗಿದೆ’ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಅಶೋಕ ವಾಟ್ಕರ್‌ ಪ್ರತಿಕ್ರಿಯಿಸಿದ್ದಾರೆ.

‘ಈಭಾಗದವರ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಸಂಪನ್ಮೂಲ ಕೊರತೆ ಎದ್ದುಕಾಣುತ್ತದೆ. ದಕ್ಷಿಣ ಕರ್ನಾಟಕಕ್ಕೆ ಹೆಚ್ಚಿನ ಒಲವು ನೀಡಿದಂತೆ ಆಗಿದೆ. ಮಹಾದಾಯಿ ನೀರಾವರಿ ಯೋಜನೆಗಳಿಗೆ ಯೋಜನೆ ರೂಪಿಸಿದ್ದರೂ ಕೃಷ್ಣಾ ಮೆಲ್ಡಂಡೆ ಯೋಜನೆಗೆ ಆದ್ಯತೆ ನೀಡಿಲ್ಲ. ಇದರಿಂದ ಈ ಭಾಗದ ಬಹುಬೇಡಿಕೆ ನನೆಗುದಿಗೆ ಬಿದ್ದಿವೆ.ಶಿಕ್ಷಣಕ್ಕೆ ಪ್ರಮುಖ್ಯತೆ ನೀಡಲಾಗಿದೆ. ಆದರೆ, ಈ ಭಾಗದಲ್ಲಿ ಮತ್ತಷ್ಟು ಯೋಜನೆ ರೂಪಿಸಬಹುದಿತ್ತು. ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದಾರೆ. ಇದು ಸಮತೋಲನದ ಬಜೆಟ್‌ ಅಲ್ಲ. ಹೀಗಾಗಿ ಇದರಲ್ಲಿ 60ರಷ್ಟು ಲಾಭ ಮಾತ್ರ ಇದೆ’ ಎನ್ನುತ್ತಾರೆ ಅವರು.

ಕಾಸಿಲ್ಲದೆ ಕೈಲಾಸ ತೋರಿಸಿದ್ದಾರೆ:‘ಕಾರ್ಮಿಕರ ಸಮಸ್ಯೆ ಬಗ್ಗೆ ಬಜೆಟ್‌ನಲ್ಲಿ ಚಕಾರವೆತ್ತಿಲ್ಲ. ರಾಜ್ಯ ಸೇರಿದಂತೆ ಹಲವೆಡೆ ಗುತ್ತಿಗೆ ಕಾರ್ಮಿಕರು ಹೆಚ್ಚಿದ್ದಾರೆ. ಇವರನ್ನು ಕಾಯಂಗೊಳಿಸುವ ಕೆಲಸ ಆಗಿಲ್ಲ. ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚು ಮಾಡುತ್ತೇವೆ ಎಂದು ಲಿಖಿತವಾಗಿ ಭರವಸೆ ನೀಡಿದ್ದರು. ಆದರೆ, ಯಾವುದೇ ಯೋಜನೆ ಘೋಷಿಸಿಲ್ಲ’ ಎಂದು ಎಸ್‌ಯುಸಿಐ (ಸಿ)ಜಿಲ್ಲಾ ಕಾರ್ಯದರ್ಶಿಕೆ. ಸೋಮಶೇಖರ್‌
ಪ್ರತಿಕ್ರಿಯಿಸಿದ್ದಾರೆ.

‘ರೈತರ ಬಗ್ಗೆ ನಿರ್ದಿಷ್ಟ ಯೋಜನೆ ರೂಪಿಸಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಉದ್ದಿಮೆಗಳು, ಜವಳಿ ಪಾರ್ಕ್, ಬಹು ಗ್ರಾಮಕುಡಿಯುವ ನೀರಿನ ಯೋಜನೆ, ಮೆಡಿಕಲ್ ಕಾಲೇಜು ವಿಷಯಗಳ ಕುರಿತು ದಿವ್ಯ ಮೌನ ವಹಿಸಿದೆ. ತಿಂಥಣಿ ಬಳಿ ಜಲಾಶಯ ನಿರ್ಮಿಸುವುದರಿಂದ ಯಾವುದೇ ಉಪಯೋಗವಿಲ್ಲ.
ಇಲ್ಲಿಂದ ಕಲಬುರ್ಗಿಗೆ ನೀರು ಕೊಡುತ್ತೇವೆ ಎನ್ನುವುದು ಯಾವ ಪುರುಷಾರ್ಥಕ್ಕೆ’ ಎಂದು
ಪ್ರಶ್ನಿಸಿದ್ದಾರೆ.

‘ಜಿಲ್ಲೆಯಲ್ಲಿನ 300ಕ್ಕೂ ಅಧಿಕ ಸಂಖ್ಯೆಯ ಕೆರೆಗಳು, ಭೀಮಾ ನದಿಯ 4 ಮತ್ತು ಕೃಷ್ಣಾ ನದಿಯ 2 ಇರುವ ಬ್ಯಾರೇಜ್‌ಗಳಿಗೆ ಸರಿಯಾದ ಗೇಟ್‌ಗಳನ್ನು ಅಳವಡಿಸಿ ಸುಸ್ಥಿತಿಯಲ್ಲಿಟ್ಟು, ನಿರ್ವಹಿಸುವ ಕನಿಷ್ಠ ಕಾಳಜಿಯಿಲ್ಲದ ಸರ್ಕಾರ, ನಿರ್ದಿಷ್ಟಹಣವನ್ನು ಒದಗಿಸದೆ ಜಿಲ್ಲೆಯ ತಿಂಥಣಿ ಹತ್ತಿರ ಮತ್ತೊಂದು ಬ್ರಿಡ್ಜ್ ಕಟ್ಟುವುದಾಗಿ ಪ್ರಕಟಿಸಿದೆ. ಜಿಲ್ಲೆಯ ಜನರಿಗೆ ಕಾಸಿಲ್ಲದೆ ಕೈಲಾಸತೋರಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.