ADVERTISEMENT

ಬೂದಿಹಾಳ- ಪೀರಾಪುರ ಏತ ನೀರಾವರಿ: ಅನ್ನದಾತರ ದಶಕಗಳ ಕನಸು ನನಸು

ಟೆಂಡರ್ ಪ್ರಕ್ರಿಯೆ ಆರಂಭಿಸಿದ ಸರ್ಕಾರ

ಪವನ ಕುಲಕರ್ಣಿ
Published 28 ಫೆಬ್ರುವರಿ 2021, 1:49 IST
Last Updated 28 ಫೆಬ್ರುವರಿ 2021, 1:49 IST
ಶರಣಬಸಪ್ಪ ದರ್ಶನಾಪುರ
ಶರಣಬಸಪ್ಪ ದರ್ಶನಾಪುರ   

ಕೆಂಭಾವಿ: ಮಳೆಯಾಶ್ರಿತ ಪ್ರದೇಶಕ್ಕೆ ಏತ ನೀರಾವರಿ ಮೂಲಕ ನೀರುಣಿಸಬೇಕು ಎಂಬ ರೈತರ ಕೂಗಿಗೆ ಸರ್ಕಾರ ಸ್ಪಂದಿಸಿದ್ದು, ಈ ಭಾಗದ ಜನಪ್ರತಿನಿಧಿಗಳು, ರೈತ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳ ಹಲವು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಬೂದಿಹಾಳ- ಪೀರಾಪುರ ಏತ ನೀರಾವರಿಯ ಯೋಜನೆಯ ಮೂಲಕ ನೀರುಣಿಸಲು ಜಲ ಸಂಪನ್ಮೂಲಗಳ ಇಲಾಖೆ ಅನುಮೋದನೆ ನೀಡಿ ಒಟ್ಟು ₹620.33 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಈಚೆಗೆ ಟೆಂಡರ್ ಕರೆದಿದ್ದು, ಈ ಭಾಗದ ರೈತರಲ್ಲಿ ಹರ್ಷ ಮೂಡಿಸಿದೆ. ಕಾಮಗಾರಿ ಪೂರ್ಣಗೊಂಡರೆ ಸುರಪುರ ತಾಲ್ಲೂಕಿನ 18 ಹಾಗೂ ಶಹಾಪುರ ತಾಲೂಕಿನ 13 ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಸುಮಾರು 50 ಸಾವಿರ ಎಕರೆ ಕೃಷಿ ಜಮೀನು ಈ ನೀರಾವರಿ ವ್ಯಾಪ್ತಿಗೆ ಒಳಪಡಲಿದೆ.

ಆಲಮಟ್ಟಿ ಜಲಾಶಯದಿಂದ ಶಹಾಪುರ ಹಾಗೂ ಸುರಪುರ ತಾಲ್ಲೂಕಿನ ವ್ಯಾಪ್ತಿಯ ಹಳ್ಳಿಗಳು ನೀರಾವರಿಗೆ ಒಳಪಟ್ಟ ಬೆನ್ನಲ್ಲೇ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯಿಂದ ಮತ್ತಷ್ಟು ಹಳ್ಳಿಗಳು ನೀರಾವರಿ ಆಗುತ್ತವೆ ಎಂದುಕೊಂಡು ದಶಕಗಳ ಹಿಂದೇಯೇ ಹೋರಾಟಗಾರರು ಬೂದಿಹಾಳ- ಪೀರಾಪುರ ಏತ ನೀರಾವರಿ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ನಡೆಸಿದ್ದರು. ಅಂದಿನ ಚುನಾಯಿತ ಪ್ರತಿನಿಧಿಗಳು ಇದಕ್ಕೆ ಸಾಥ್ ನೀಡಿ ಯೋಜನೆಗಳ ಪಟ್ಟಿಯಲ್ಲಿ ಈ ಯೋಜನೆಯನ್ನು ಸೇರ್ಪಡೆ ಮಾಡಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರು.

ADVERTISEMENT

ಅದರಂತಯೇ ಅಂದಿನ ಮುಖ್ಯ ಎಂಜನಿಯರ್ ಕಚೇರಿಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಯಿತು. ಹೋರಾಟಗಾರರು ಪ್ರಸ್ತಾವ ಪರಿಶೀಲಿಸಿದ ಬಳಿಕ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ಮುಖ್ಯ ಎಂಜನಿಯರ್‌ಗೆ ಪತ್ರ ಬರೆದು, ಶಹಾಪುರ ಹಾಗೂ ಸುರಪುರ ತಾಲ್ಲೂಕಿನ ಮಳೆಯಾಶ್ರಿತ
ಪ್ರದೇಶಗಳಿಗೆ ನೀರುಣಿಸಬಹುದು ಎಂದು ವಿವರಿಸಿದ್ದರು.

ಆರಂಭದ ದಿನಗಳಲ್ಲಿ ಸರ್ಕಾರ ನಿರಾಸಕ್ತಿ ತೋರಿದ ಕಾರಣ ಹೋರಾಟಗಾರರಲ್ಲಿ ಆಶಾಭಾವನೆ ಕಮರುವಂತೆ ಮಾಡಿತು. ಆದರೆ ಈ ಭಾಗದ ಶಾಸಕರಾದ ಶರಣಬಸಪ್ಪ ದರ್ಶನಾಪುರ ಮತ್ತು ರಾಜೂಗೌಡ ಅವರು ಸರ್ಕಾರದ ಮೇಲೆ ಬೆಂಬಿಡದೇ ಒತ್ತಡ ಹೇರಿದ್ದರು. ಪರಿಣಾಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯೋಜನೆಗೆ ಹಸಿರು ನಿಶಾನೆ ನೀಡಿದರು ಎಂದು ಸ್ಮರಿಸುತ್ತಾರೆ
ಇಲ್ಲಿನ ರೈತರು.

ಆಲಮಟ್ಟಿ ಜಲಾಶಯದಿಂದ ಈ ಭಾಗದ ಕೆರೆ, ಕಟ್ಟೆಗಳನ್ನು ತುಂಬಿಸ ಬೇಕೆಂದು ರೈತರು, ಜನಪ್ರತಿನಿಧಿಗಳು ಸೇರಿದಂತೆ ಹಲವು ರೈತಪರ ಸಂಘಟನೆ ಗಳು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೊನೆಗೂ ಅವರ ಹೋರಾಟಕ್ಕೆ ಈಗ ಫಲ ದೊರೆತಿದೆ.

***

2017ರಿಂದ ಈ ಭಾಗದ ರೈತರು ವಿವಿಧ ಹಂತಗಳಲ್ಲಿ ಈ ಯೋಜನೆ ಜಾರಿಗಾಗಿ ಪ್ರತಿಭಟನೆ ನಡೆಸಿದ್ದು, ಈಗ ನ್ಯಾಯ ಸಿಕ್ಕಿದೆ. ರಾಜ್ಯ ಸರ್ಕಾರ ಈ ಭಾಗದ ರೈತರ ದಶಕಗಳ ಬೇಡಿಕೆಗೆ ಸ್ಪಂದಿಸಿದ್ದು, ಸಂತಸ ತಂದಿದೆ

- ಶರಣಬಸಪ್ಪ ದರ್ಶನಾಪುರ, ಶಾಸಕ

***

ಮಳೆಯಾಶ್ರಿತ ಪ್ರದೇಶವಾಗಿ ರುವುದರಿಂದ ಮಳೆಯಾದರೆ ಬೆಳೆ ಎನ್ನುವಂತೆ ಇತ್ತು. ಆದರೆ ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ

- ಕಾಂತಪ್ಪ ಕುಂಬಾರ, ರೈತ

***

ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಗೆ ಟೆಂಡರ್ ಕರೆದಿದ್ದು ಖುಷಿ ತಂದಿದೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡಿ, ಯೋಜನೆ ಪೂರ್ಣಗೊಳಿಸಬೇಕು

- ಬಸನಗೌಡ ಚಿಂಚೋಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ, ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.