ಯಾದಗಿರಿ: ‘ಜಾತಿ ಸಮೀಕ್ಷೆಯಲ್ಲಿ ಹಿಂದೂ ಧರ್ಮಕ್ಕೆ ಸೇರಿದವರನ್ನು ಕ್ರೈಸ್ತ ಧರ್ಮದ ಪಟ್ಟಿಯಲ್ಲಿ ಗುರುತಿಸಿದಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಸಮಸ್ಯೆಯಾಗಲಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾದಿಗ, ಛಲವಾದಿ, ಲಂಬಾಣಿ ಅಂತಹ ಹಲವು ಸಮುದಾಯವರು ಕ್ರೈಸ್ತ ಧರ್ಮಕ್ಕೆ ಸೇರಿದ್ದರೂ ಎಸ್‌ಸಿ, ಎಸ್‌ಟಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಈಗ ಅವರನ್ನು ಕ್ರೈಸ್ತ ಎಂದು ಗುರುತಿಸಿದರೆ ಎಸ್‌ಸಿ, ಎಸ್‌ಟಿ ಪ್ರಮಾಣಪತ್ರ ಸಿಗುವುದಿಲ್ಲ. ಮೀಸಲಾತಿಗೆ ಅರ್ಥ ಬರುವುದಿಲ್ಲ’ ಎಂದು ಹೇಳಿದರು.
‘ಒಂದು ಧರ್ಮ ಬಿಟ್ಟು, ಇನ್ನೊಂದು ಧರ್ಮಕ್ಕೆ ಹೋದವರು ಮೂಲ ಧರ್ಮವರು ಆಗುವುದಿಲ್ಲ. ಈ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದವರು ಮುಸ್ಲಿಮರಾಗಿದ್ದಾರೆ ಹೊರತು ಹಿಂದೂ ಮುಸ್ಲಿಮರು ಆಗಲಿಲ್ಲ. ಕ್ರೈಸ್ತ ಧರ್ಮಕ್ಕೆ ಸೇರಿದವರೂ ಕ್ರೈಸ್ತರಾಗುತ್ತಾರೆ ಹೊರತು ಹಿಂದೂ ಕ್ರೈಸ್ತರಾಗಲ್ಲ’ ಎಂದು ಅಭಿಪ್ರಾಯಪಟ್ಟರು.
‘ಎಸ್‌ಸಿ ಒಳಮೀಸಲಾತಿ ಸಮೀಕ್ಷೆಯಲ್ಲಿ ಕ್ರೈಸ್ತ ಪದ ಇರಲಿಲ್ಲ. ಈಗ ಸಮೀಕ್ಷೆಗೆ ಕ್ರೈಸ್ತ ಪದ ಸೇರಿಸಿ ಗೊಂದಲ ಸೃಷ್ಟಿಸಲಾಗುತ್ತಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.