ಯಾದಗಿರಿ: ನಿಜಾಮನ ಆಡಳಿತದಲ್ಲಿ ಪ್ರಾರಂಭಗೊಂಡು ಶೈಕ್ಷಣಿಕ ಉತ್ತುಂಗದ ಶಿಖರವನ್ನು ಏರಿ, ಈ ಭಾಗದವರಿಗೆ ಉದ್ಯೋಗ ಅವಕಾಶಗಳನ್ನು ದೊರಕಿಸಿ ಕೊಟ್ಟಿರುವ ಶತಮಾನದ ಶಾಲೆಗಳು ಮೂಲಸೌಕರ್ಯಗಳ ಕೊರತೆ ಅನುಭವಿಸುತ್ತಿವೆ. ಕೆಲವು ಶಾಲೆಗಳಲ್ಲಿ ಮಕ್ಕಳ ದಾಖಲಾತಿಯಲ್ಲಿ ಇಳಿಕೆಯಾಗಿ ಮುಚ್ಚುವ ಭೀತಿಯೂ ಆವರಿಸಿದೆ.
ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿ ಬಹುತೇಕ ಶಾಲೆಗಳು ಉರ್ದು ಮಾಧ್ಯಮದಲ್ಲಿ ಆರಂಭವಾಗಿದ್ದರೂ ಕನ್ನಡ ಸಹ ಬೋಧನೆ ಮಾಡಲಾಗುತ್ತಿತ್ತು. ಕ್ರಮೇಣ ಉರ್ದು ಮತ್ತು ಕನ್ನಡ ಮಾಧ್ಯಮ ಶಾಲೆಗಳಾಗಿ ಬೇರ್ಪಟ್ಟವು. ಅನಕ್ಷರತೆ, ಬಡತನದ ನಡುವೆಯೂ ಅಂಜದೇ ಅಳುಕದೆ ಪ್ರತಿವರ್ಷವೂ ನೂರಾರು ಮಕ್ಕಳನ್ನು ತರಗತಿಗೆ ದಾಖಲಿಸಿಕೊಂಡವು. ಸಾವಿರಾರು ವಿದ್ಯಾರ್ಥಿಗಳಲ್ಲಿ ಅಕ್ಷರ ಜ್ಞಾನ ಬಿತ್ತಿ, ಅಧಿಕಾರಿಗಳು, ಉದ್ಯಮಿಗಳು, ರಾಜಕೀಯ ನಾಯಕರು, ಕಲಾವಿದರನ್ನಾಗಿ ರೂಪಿಸಿವೆ. ಅವುಗಳಲ್ಲಿ ಕೆಲವು ಶಾಲೆಗಳು ತಮ್ಮ ಅಸ್ತಿತ್ವಕ್ಕಾಗಿ ಏದುಸಿರು ಬಿಡುತ್ತಿವೆ.
ಹಲವು ಅಡೆತಡೆಗಳ ನಡುವೆ ನೂರು ವರ್ಷಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ಶಾಲೆಗಳಿಗೆ ಮಕ್ಕಳ ದಾಖಲಾತಿ, ಪೂರ್ಣಕಾಲಿಕ ಶಿಕ್ಷಕರು, ಇಂಗ್ಲಿಷ್ ಮಾಧ್ಯಮ, ಹೊಸ ತರಗತಿ ಕೋಣೆಗಳಂತಹ ಸಮಸ್ಯೆಗಳು ಕಾಡುತ್ತಿವೆ. ಸರ್ಕಾರದಿಂದ ಅನುದಾನ ಬಂದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗಿಲ್ಲ ಎಂಬುದು ಶಾಲೆಗಳ ಹಳೇ ವಿದ್ಯಾರ್ಥಿಗಳ ಬೇಸರ.
ಯಾದಗಿರಿ ನಗರಸಭೆ ಸಮೀಪದ ಎಂಪಿಎಸ್ ಉರ್ದು ಶಾಲೆಗೆ 105 ವರ್ಷಗಳು ತುಂಬಿವೆ. ದಶಕಗಳ ಹಿಂದೆ ಪ್ರತಿಯೊಂದು ತರಗತಿಯಲ್ಲಿ ಎ, ಬಿ, ಸಿ, ಡಿ, ಇ ಸೆಕ್ಷನ್‌ಗಳಿದ್ದು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಪ್ರಸ್ತುತ ಕನ್ನಡ ಮಾಧ್ಯಮದಲ್ಲಿ 45 ಹಾಗೂ ಉರ್ದು ಮಾಧ್ಯಮದಲ್ಲಿ 30 ವಿದ್ಯಾರ್ಥಿಗಳು ಮಾತ್ರವೇ ದಾಖಲಾಗಿದ್ದಾರೆ. ಖಾಸಗಿ ಶಾಲೆಗಳ ಹೊಡೆತ ಹಾಗೂ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿದೆ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕರು ವಿಖಾರ್ ಅಹೆಮದ್ ಕಲ್ಲೂರ ಹಾಗೂ ದೇವಜಿ ರಾಠೋಡ.
2021–22ನೇ ಸಾಲಿನಲ್ಲಿ ಶತಮಾನದ ಪೂರೈಸಿದ ಜಿಲ್ಲೆಯ ಎಂಟು ಶಾಲೆಗಳ ಪೈಕಿ ಮೂರು ಶಾಲೆಗಳಿಗೆ ಮಾತ್ರವೇ ಮೂಲಸೌಕರ್ಯಕ್ಕಾಗಿ ಅನುದಾನ ಬಂದಿದೆ. ರುಕ್ಮಾಪುರ ಶಾಲೆಗೆ ₹ 8 ಲಕ್ಷ, ಬೆಂಡೆಬೆಂಬಳಿ ಶಾಲೆಗೆ ₹ 12 ಲಕ್ಷ ಹಾಗೂ ಚಂಡರಕಿ ಶಾಲೆಗೆ ₹ 6 ಲಕ್ಷ ಸೇರಿ ಒಟ್ಟು ₹ 26 ಲಕ್ಷ ಬಂದಿದೆ. ಉಳಿದ ಶಾಲೆಗಳಿಗೆ ಅನುದಾನದ ಭಾಗ್ಯವಿಲ್ಲ.
ಎಲ್ಲಾ ಶಾಲೆಗಳಲ್ಲಿ ಇರುವಂತೆ ಶಿಕ್ಷಕರ ಕೊರತೆಯೂ ಕಾಡುತ್ತಿದೆ. ಈ ಎಂಟು ಶಾಲೆಗಳಿಗೆ 73 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 34 ಮಂದಿ ಮಾತ್ರವೇ ಕಾಯಂ ಶಿಕ್ಷರಿದ್ದಾರೆ. ಉಳಿ ಹುದ್ದೆಗಳು ಭರ್ತಿಯಾಗದೆ ಉಳಿದಿವೆ.
ನೂರು ವರ್ಷಗಳಷ್ಟು ಹಳೆಯದಾಗಿದ್ದು ಕಾಯಂ ಶಿಕ್ಷಕರ ಕೊರತೆ ಇದೆ. ಅದನ್ನು ಸರಿದೂಗಿಸಲು ಅತಿಥಿ ಶಿಕ್ಷರನ್ನು ನೇಮಿಸಿಕೊಳ್ಳಲಾಗಿದೆಬಂದೇನವಾಜ್ ನಾಲತವಾಡ ಸಿಆರ್‌ಪಿ ಕೆಂಭಾವಿ
ಶಾಲೆಯ ಪರಿಸರ ನಿತ್ಯವೂ ಗಲೀಜಿನಿಂದ ಕೂಡಿರುವುದರಿಂದ ಬೋಧನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆಅಶ್ವಿನಿ ಪಾಟೀಲ ಮುಖ್ಯಶಿಕ್ಷಕಿ ರುಕ್ಮಾಪುರ
ಸಮುದಾಯ ಮತ್ತು ಇಲಾಖೆಯೊಡನೆ ಸಮನ್ವಯ ಸಾಧಿಸಿ ಶೀಘ್ರದಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಿಸುವ ವ್ಯವಸ್ಥೆ ಮಾಡಲಾಗುವುದುಚಂದ್ರಕಾಂತ ಭಂಡಾರೆ ನಿವೃತ್ತ ಎಸ್‌ಪಿ ರುಕ್ಮಾಪುರ ಶಾಲೆಯ ಹಳೇ ವಿದ್ಯಾರ್ಥಿ
ಶಾಲೆಯ ಅಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವ ಪೂರಕವಾಗಿದೆ. ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಯೋಚನೆ ಇದೆಸುನಿತಾ ಕುಲಕರ್ಣಿ ಮುಖ್ಯಶಿಕ್ಷಕಿ ಪೇಠ ಅಮ್ಮಾಪುರ ಶಾಲೆ
ಶತಮಾನದ ಶಾಲೆ ರಾಜಕಾರಣಿಗಳನ್ನು ಅಧಿಕಾರಿಗಳನ್ನು ಶಿಕ್ಷಕರನ್ನು ರೂಪಿಸಿದೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಸಹಕಾರ ಇದೆಚಂದಪ್ಪ ಯಾದವ ಹಳೇ ವಿದ್ಯಾರ್ಥಿ ಪೇಠ ಅಮ್ಮಾಪುರ ಶಾಲೆ
ಶಿಕ್ಷಕರ ಕೊರತೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗೆ ಮೂಲಸೌಕರ್ಯ ಕಲ್ಪಿಸಿ ಕಾಯಂ ಶಿಕ್ಷಕರನ್ನು ನೇಮಿಸಬೇಕುಶಿವಯೋಗಿ ಕುಂಬಾರ ಹಳೆ ವಿದ್ಯಾರ್ಥಿ ಕೆಂಭಾವಿ ಶಾಲೆ
ಶಿಕ್ಷಕರು ನಮಗೆ ಛಡಿಯಿಂದ ಹೊಡೆದು ಬೈದರೂ ಮನೆಗೆ ಬಂದು ತಂದೆ– ತಾಯಿಗೆ ಹೇಳುತ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದ್ದು ಶಿಕ್ಷಕರು ಮಕ್ಕಳನ್ನು ಗದರಿಸುವಂತಿಲ್ಲಪರ್ವತರೆಡ್ಡಿ ಹಳೇ ವಿದ್ಯಾರ್ಥಿ ಬೆಂಡೆಬೆಂಬಳಿ ಶಾಲೆ
ಸಂಸದರು, ಐಎಎಸ್ ಅಧಿಕಾರಿ ಕೊಟ್ಟ ಶಾಲೆ
ಗುರುಮಠಕಲ್: ತೆಲಂಗಾಣ ಗಡಿಗೆ ಹೊಂದಿಕೊಂಡ ಚಂಡರಕಿ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಗೆ ಈಗ 121 ವರ್ಷಗಳು. ಇಲ್ಲಿ ವಿದ್ಯಾಭ್ಯಾಸ ಮಾಡಿದ್ದ ದಿ.ಜಗನ್ನಾಥರಾವ ಕುಲಕರ್ಣಿ ಅವರು ರಾಯಚೂರ ಕ್ಷೇತ್ರದಿಂದ ಸಂಸದರಾಗಿ ಅಂದಿನ ಆಂಧ್ರಪ್ರದೇಶ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ದಿ.ಸಿದ್ರಾಮರೆಡ್ಡಿ ಅವರು ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಶಾಲೆಯ ವಿದ್ಯಾರ್ಥಿ ಗೋವಿಂದರೆಡ್ಡಿ ಕೇಶ್ವಾರ ಅವರು ಪ್ರಸ್ತುತ ಐಎಎಸ್ ಕೇಡರ್ ಅಧಿಕಾರಿಯಾಗಿದ್ದಾರೆ. ಶತಮಾನದ ಶಾಲೆ ಶಿಥಿಲಾವಸ್ಥೆಗೆ ತಲುಪಿದ್ದು ಎರಡು ಮಹಡಿಯ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಳೇ ಕಟ್ಟಡ ಮರು ನಿರ್ಮಾಣಕ್ಕೆ ಜಿ.ಪಂ ಸಂಸದರು ಹಾಗೂ ಶಾಸಕರು ಮಾಹಿತಿ ಪಡೆದಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು. ಹೊಸ ಕಟ್ಟಡದಲ್ಲಿ 12 ಕೋಣೆಗಳಿದ್ದು ಬಾಲಕ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಶುದ್ಧ ಕುಡಿಯುವ ನೀರಿನ ಘಟಕ ಕೊಳವೆ ಬಾವಿ ಗ್ರಂಥಾಲಯ ಸಿಸಿಟಿವಿ ಕ್ಯಾಮೆರಾ ಕೈತೋಟದ ವ್ಯವಸ್ಥೆಯಿದೆ.
ಹಳೇ ಕಟ್ಟಡದಲ್ಲಿ ಸೊರಗುತ್ತಿದೆ
ಕೆಂಭಾವಿ: ಶತಮಾನ ಕಂಡ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಕೋಣೆ ಹಾಗೂ ಶಿಕ್ಷಕರ ಕೊರತೆಯಿಂದ ಸೊರಗುತ್ತದೆ. 210 ವಿದ್ಯಾರ್ಥಿಗಳಿಗೆ ನಾಲ್ವರು ಶಿಕ್ಷಕರು ಮತ್ತು ಒಬ್ಬ ಮುಖ್ಯಶಿಕ್ಷಕ ಬೋಧಿಸುತ್ತಿದ್ದಾರೆ. ಹಳೆ ಕಟ್ಟಡವು ಬಹುತೇಕ ಶಿಥಿಲವಾಗಿ ಮೂರು ಕೊಠಡಿಗಳ ಅಗತ್ಯವಿದೆ. ಪುಸ್ತಕಗಳ ರಾಶಿ ಇದ್ದರೂ ಗ್ರಂಥಾಲಯ ಕಟ್ಟಡವಿಲ್ಲ. ಸುತ್ತಲಿನ ಹಲವು ಶಾಲೆಗಳ ವಿದ್ಯಾರ್ಥಿಗಳು ಭೇಟಿ ನೀಡುತ್ತಿದ್ದು ವಿಜ್ಞಾನ ಪ್ರಯೋಗಾಲಯ ಬೇಕಿದೆ. ಮುಖ್ಯವಾಗಿ ಬಿಸಿಯೂಟದ ಕೋಣೆ ದುರಸ್ತಿ ಆಗಬೇಕಿದೆ. ನಿರ್ವಹಣೆ ಕಾಣದೆ ಶೌಚಾಲಯ ಹಾಳುಬಿದ್ದಿದೆ. ಶಾಲೆಯ ದುಸ್ಥಿತಿ ನೋಡಿ ಮಕ್ಕಳನ್ನು ಕಳಿಸಲು ಕೆಲವು ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
ಕಾಯಂ ಶಿಕ್ಷಕರ ಕೊರತೆ
ವಡಗೇರಾ: ಬೆಂಡೆಬೆಂಬಳಿ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ 1912ರಲ್ಲಿ ಈಗಿನ ಮಾರುಕಟ್ಟೆ ಸಮೀಪದಲ್ಲಿ ಆರಂಭವಾಗಿತ್ತು. 1969–70ರಲ್ಲಿ ಅಲ್ಲಿನ ಕಟ್ಟಡವನ್ನು ಬೇರೆಡೆ ಸ್ಥಳಾಂತರಿಸಲಾಯಿತು. ಈ ಶಾಲೆಯಲ್ಲಿ ಕಲಿತ ಸಿದ್ರಾಮಪ್ಪ ಐರಡ್ಡಿ ಕಲಬುಗಿಯ ಮೇಯರ್ ಆಗಿದ್ದರು. ಶರಣಬಸಪ್ಪ ಐರಡ್ಡಿ ಬಿಸಿಎಂ ಅಧಿಕಾರಿಯಾದರೆ ಹಲವರು ವೈದ್ಯರು ಎಂಜಿಯರ್‌ಗಳಾಗಿದ್ದಾರೆ. ಶಾಲೆಯ ಹೆಗ್ಗುರತು ದಾಖಲಿಸುವ ಶೈಕ್ಷಣಿಕವಾಗಿ ಇನ್ನಷ್ಟು ಮುನ್ನಡೆಯುವಂತಹ ಕಾರ್ಯಕ್ರಮಗಳು ನಡೆಸಬೇಕಿದೆ ಎನ್ನುತ್ತಾರೆ ಹಳೇ ವಿದ್ಯಾರ್ಥಿಗಳು. ಪ್ರಸ್ತುತ ಎಲ್‌ಕೆಜಿಯಿಂದ 7ನೇ ತರಗತಿಯವರೆಗೆ 453 ವಿದ್ಯಾರ್ಥಿಗಳಿದ್ದಾರೆ. ಹೊಸದಾಗಿ 11 ಕೋಣೆಗಳು ನಿರ್ಮಿಸಲಾಗಿದ್ದು ಅಲ್ಲಿ ಮಕ್ಕಳ ಕಲಿಕೆ ನಡೆಯುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು ಎಂಬುದು ಪೋಷಕರ ಮನವಿ.
ಕಟ್ಟಡದ ಭಾಗ್ಯ ಕಾಣದ ಶತಮಾನದ ಶಾಲೆ
ಸುರಪುರ: ತಾಲ್ಲೂಕಿನ ಮೂರು ಸರ್ಕಾರಿ ಮಾದರಿಯ ಶಾಲೆಗಳು ಆರಂಭವಾಗಿ ಒಂದು ಶತಮಾನ ಕಳೆದಿದೆ. ರುಕ್ಮಾಪುರ ಶಾಲೆ 2022ರಲ್ಲೇ ಶತಮಾನ ಪೂರೈಸಿದೆ. ಪೇಠ ಅಮ್ಮಾಪುರ ಶಾಲೆಯು ಈ ವರ್ಷದ ಡಿಸೆಂಬರ್‌ನಲ್ಲಿ ಶತಮಾನೋತ್ಸವ ಆಚರಿಸಲಿದೆ. ರುಕ್ಮಾಪುರ ಮತ್ತು ಪೇಠ ಅಮ್ಮಾಪುರ ಶಾಲೆಗಳಲ್ಲಿ ಉರ್ದು ಭಾಷೆ ಬೋಧಿಸಲಾಗುತ್ತಿತ್ತು. 1956ರಿಂದ ಕನ್ನಡ ಮಾಧ್ಯಮಗಳಾಗಿ ಬದಲಾದವು. ಪೊಲೀಸ್ ವರಿಷ್ಠಾಧಿಕಾರಿ ವಿಶ್ವವಿದ್ಯಾಲಯದ ಕುಲಪತಿ ವಿಜ್ಞಾನಿಗಳು ಎಂಜಿನಿಯರ್‌ಗಳು ವೈದ್ಯರು ಉನ್ನತ ಅಧಿಕಾರಿಗಳನ್ನು ನಾಡಿಗೆ ನೀಡಿದೆ. ಶಾಲೆಗೆ ಕಾಯಕಲ್ಪ ನೀಡುವ ಅವಶ್ಯಕತೆ ಇದೆ. ರುಕ್ಮಾಪುರ ಶಾಲಾ ಕಟ್ಟಡವು 50 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕೆಲವು ಕೋಣೆಗಳು ಸೋರುತ್ತಿವೆ. ಹಲವು ಬಾರಿ ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆಯಾದರೂ ಸ್ಥಳ ವಿವಾದದಿಂದ ನನೆಗುದಿಗೆ ಬಿದ್ದಿದೆ. ತಡೆ ಗೋಡೆ ಇಲ್ಲದ್ದಕ್ಕೆ ರಾತ್ರಿ ವೇಳೆ ಕಿಡಿಗೇಡಿಗಳು ಗಲಿಜು ಮಾಡಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಎಸೆಯುತ್ತಾರೆ. ಪೇಠ ಅಮ್ಮಾಪುರ ಶಾಲಾ ಕಟ್ಟಡವೂ ಶಿಥಿಲವಾಗಿದೆ. ಅನತಿ ದೂರದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಎರಡು ವರ್ಷದೊಳಗೆ ಶಾಲೆ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ ಎನ್ನುತ್ತಾರೆ ಸ್ಥಳೀಯರು.
ಏದುರುಸಿರು ಬಿಡುತ್ತಿರುವ ಶತಮಾನದ ಶಾಲೆ
ಶಹಾಪುರ: ನಗರದ ಹೃದಯಭಾಗದಲ್ಲಿರುವ ಸಿಪಿಎಸ್ ಶಾಲೆಯು ಶತಮಾನದ ಸಂಭ್ರಮ ಆಚರಿಸಿದೆ. ವಾಸ್ತವವಾಗಿ ಶಾಲೆಯಲ್ಲಿ ಕನಿಷ್ಠ ಸೌಲಭ್ಯಗಳಿಲ್ಲದೆ ಪರದಾಡುವಂತೆ ಆಗಿದೆ. 1900ರಲ್ಲಿ ಸ್ಥಾಪನೆಗೊಂಡಿರುವ ಈ ಶಾಲೆಯಲ್ಲಿ ಅದೆಷ್ಟೊ ವಿದ್ಯಾರ್ಥಿಗಳಿಗೆ ಜ್ಞಾನದ ಆಸರೆಗಾಗಿ ಆಗಮಿಸಿದ ಬಡ ಮಕ್ಕಳಿಗೆ ನೆರಳಿನ ಆಸರೆಯಾಗಿ ನಿಂತು ಬದುಕು ರೂಪಿಸಿತ್ತು. ಆದರೆ ಶಾಲೆಯ ದುಸ್ಥಿತಿ ಮಾತ್ರ ನಿಜಕ್ಕೂ ಬೇಸರವನ್ನು ಉಂಟು ಮಾಡುತ್ತಲಿದೆ ಎನ್ನುತ್ತಾರೆ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿ ಒಬ್ಬರು. 1ರಿಂದ 7ನೇ ತರಗತಿಯವರೆಗೆ ಶಾಲೆಯಿದ್ದು 131 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಮುಖ್ಯಶಿಕ್ಷಕರ ಹುದ್ದೆ ಸೇರಿ ಮೂರು ಹುದ್ದೆ ಖಾಲಿ ಇವೆ. ಒಟ್ಟು 15 ಕೋಣೆಗಳು ಇದ್ದು. ಅದರಲ್ಲಿ ಮೂರು ಮಾತ್ರ ಉಪಯೋಗಿಸುತ್ತಿದ್ದೇವೆ. ಇನ್ನುಳಿದವು ದುರಸ್ತಿಗಾಗಿ ಕಾಯುತ್ತಲಿವೆ. ಪುಸ್ತಕ ಇವೆ. ಕೋಣೆಗಳ ಬರ ಎದುರಾಗಿದೆ. ವಿಶಾಲವಾದ ಮೈದಾನವಿದೆ. ಆದರೆ ಸಂಜೆ ಆಗುತ್ತಿದ್ದಂತೆ ಕುಡುಕರ ಹಾವಳಿ ಹೆಚ್ಚಾಗುತ್ತದೆ. ಅನಧಿಕೃತವಾಗಿ ಮೈದಾನದಲ್ಲಿ ಖಾಸಗಿ ವಾಹನ ನಿಲುಗಡೆ ಮಾಡುತ್ತಾರೆ. ಅಲ್ಲದೆ ಕೋಣೆಯ ಪಕ್ಕದಲ್ಲಿ ಮಲ ವಿಸರ್ಜನೆ ಮಾಡಿ ಕಿಟಕಿ ಬಾಗಲಿಗೆ ಸವರಿ ಹೋಗುತ್ತಾರೆ. ಏನು ಮಾಡಬೇಕು ತಿಳಿಯುತ್ತಿಲ್ಲ. ಶಾಲೆಗೆ ಅಗತ್ಯವಾದ ಸೌಕರ್ಯ ಬೇಕಾಗಿದೆ ಎನ್ನುತ್ತಾರೆ ಶಾಲೆಯ ಪ್ರಭಾರ ಶಾಲಾ ಮುಖ್ಯಶಿಕ್ಷಕ ರಮೇಶ ಓಜಿ. ‘ಸಿಪಿಎಸ್ ಶಾಲೆಯಲ್ಲಿ ಅಭ್ಯಾಸ ಮಾಡಿರುವ ಖುಷಿ ಇದೆ. ಉನ್ನತ ಸ್ಥಾನಮಾನ ಸಿಗಲು ಇದೇ ಶಾಲೆಯೇ ನನಗೆ ಮೆಟ್ಟಿಲು ಆಗಿದೆ ಎನ್ನುತ್ತಾರೆ ಹಳೆಯ ವಿದ್ಯಾರ್ಥಿ (ಕೃಷಿ ವಿಜ್ಞಾನಿಯಾಗಿ ಉತ್ತರಾಖಂಡದಲ್ಲಿ ಸೇವೆ) ಡಾ.ಅರುಣಕುಮಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.