
ಸೈದಾಪುರ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದೊಂದಿಗೆ ಹತ್ತಿ ಬಿಡಿಸುವ ಕೆಲಸದಲ್ಲಿ ಭಾಗಿಯಾದ ಮಕ್ಕಳ ಪೋಷಕರಿಗೆ ಶಿಕ್ಷಣ ಕುರಿತಾಗಿ ತಿಳುವಳಿಕೆ ಮೂಡಿಸಲಾಯಿತು
ಸೈದಾಪುರ: ಓದುವ ವಯಸ್ಸಿನ ಮಕ್ಕಳಿಗೆ ಕೂಲಿ ಕೆಲಸ ಬೇಡ, ಅವರನ್ನು ಶಾಲೆಗೆ ಕಳುಹಿಸಿ ಉತ್ತಮ ಶಿಕ್ಷಣ ನೀಡಿ ಎಂದು ಮಕ್ಕಳ ಪಾಲಕ ಪೋಷಕರಿಗೆ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ತಿಳುವಳಿಕೆ ನೀಡಿದರು.
ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಬಾಲ ಕಾರ್ಮಿಕ ಇಲಾಖೆ, ಕಾರ್ಮಿಕ, ಸಾರಿಗೆ, ಶಿಕ್ಷಣ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹತ್ತಿ ಬಿಡಿಸುವ ಕೆಲಸಕ್ಕೆ ಹೋಗಿ ಬರುವ ವಾಹನಗಳನ್ನು ತಡೆದು ನಿಲ್ಲಿಸಿ ಬಾಲ ಕಾರ್ಮಿಕರಿದ್ದರೆ ಅಂತಹವರ ಮಾಹಿತಿ ಸಂಗ್ರಹಿಸಿಕೊಂಡು ಅವರ ಪಾಲಕ ಪೋಷಕರಿಗೆ ಶಿಕ್ಷಣದ ಕುರಿತಾಗಿ ಜಾಗೃತಿಯನ್ನು ಮೂಡಿಸಿದರು.
ಇತ್ತೀಚೆಗೆ ಹತ್ತಿ ಬಿಡಿಸಲು ಕೂಲಿ ಕಾರ್ಮಿಕರ ಕೊರತೆಯಿಂದಾಗಿ ರೈತರು ತಮ್ಮ ಮಕ್ಕಳೊಂದಿಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಚಿಕ್ಕ ಮಕ್ಕಳನ್ನು ಶಾಲೆ ಬಿಡಿಸಿ ಹತ್ತಿ ಬಿಡಿಸುವ ಕೂಲಿ ಕೆಲಸಕ್ಕೆ ಆಟೊ, ಬೊಲೇರೊ, ಟೆಂಪೊಗಳಲ್ಲಿ ಕರೆದುಕೊಂಡು ಹೋಗಿ ಬರುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಬಾಲ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳು ಸೇರಿಕೊಂಡು ಶುಕ್ರವಾರ ಸಂಜೆ ದಿಢೀರ್ ದಾಳಿ ನಡೆಸಿ ಸುಮಾರು 69 ಮಕ್ಕಳನ್ನು ಗುರುತಿಸಿ ಅವರ ಪಾಲಕ ಮತ್ತು ಪೋಷಕರಿಗೆ ಮಕ್ಕಳನ್ನು ಮತ್ತೊಮ್ಮೆ ಕೂಲಿ ಕೆಲಸಕ್ಕೆ ಕರೆದೊಯ್ಯೂವುದು ಬೇಡ ಎಂಬ ತಿಳುವಳಿಕೆ ನೀಡಲಾಯಿತು.
‘ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಎನ್ನುವುದು ಹರಿತವಾದ ಅಸ್ತ್ರವಿದ್ದಂತೆ. ತಂದೆ-ತಾಯಿಗಳಾದ ನಾವೇ ಅದನ್ನು ಕೂಲಿ ಕೆಲಸದಲ್ಲಿ ಮೊಂಡು ಮಾಡಿದರೆ ಅವರ ಜೀವನ ಹೇಗೆ ಉತ್ತಮವಾಗಲು ಸಾದ್ಯ’ ಎಂಬ ಜಾಗೃತಿ ಮೂಡಿಸಲಾಯಿತು.
ಆಂಧ್ರದ 20 ಮಕ್ಕಳು: 69 ಬಾಲ ಕಾರ್ಮಿಕರಲ್ಲಿ, 20 ಆಂಧ್ರಪ್ರದೇಶದ ಮಂತ್ರಾಲಯ, ಕೋಸಗಿಯಿಂದ ಬಂದವರಾಗಿದ್ದರು. ಅವರ ಪಾಲಕರಿಗೆ ಹಾಗೂ ಸಂಬಂಧಿಸಿದವರಿಗೆ ಎಚ್ಚರಿಕೆ ಕೊಟ್ಟು ನಿತ್ಯ ಶಾಲೆಗೆ ಹೋಗಲು ಮಕ್ಕಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕಿ ಸಂಗೀತಾ ಹೊನ್ನೂರು, ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕ ಅಯ್ಯಳಪ್ಪ, ಶಿಕ್ಷಣ ಇಲಾಖೆಯ ಸೈದಾಪುರ ವಲಯದ ಇಸಿಓ ಚಾಂದ್ ಸಾಬ್, ಸಿಆರ್‍ಪಿಗಳಾದ ಮಲ್ಲಪ್ಪ, ಯಲ್ಲಪ್ಪ, ಲಿಂಗಾರೆಡ್ಡಿ ಗಬ್ಬೂರ್, ಮಕ್ಕಳ ಸಹಾಯವಾಣಿ ಸಂಯೋಜಕ ಶರಭಯ್ಯ, ಮಾರ್ಗದರ್ಶಿ ಚನ್ನಮ್ಮ, ಪೊಲೀಸ್ ಪೇದೆ ನೂರಂದ್ ನೈಕೋಡಿ, ಮಾಳಪ್ಪ ಪೂಜಾರಿ ಸೇರಿದಂತೆ ಇತರರಿದ್ದರು.