
ಯಾದಗಿರಿ: ಹುಣಸಗಿ ತಾಲ್ಲೂಕಿನ ಗ್ರಾಮವೊಂದರ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಹಡಪದ ಸಮಾಜ ಸೇವಾ ಸಂಘದ ಜಿಲ್ಲಾ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದರು. ಬಾಲಕಿಯ ಭಾವಚಿತ್ರವನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಕಚೇರಿಯ ಆವರಣವನ್ನು ಪ್ರವೇಶಿಸಿದರು. ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಮನವಿಪತ್ರ ಸಲ್ಲಿಸಿದರು.
‘ಬಾಲಕಿಗೆ ಚಿತ್ರ ಹಿಂಸೆ ಕೊಟ್ಟು, ಅತ್ಯಾಚಾರ ಎಸಗಿದ ಬಳಿಕ ಆಕೆಯನ್ನು ಕೊಲೆ ಮಾಡಲಾಗಿದೆ. ನಂತರ ಆಕೆಯ ಶವವನ್ನು ಗೋಗಿ ಸಮೀಪ ತಂದು ಕಾಲುವೆಯಲ್ಲಿ ಎಸೆಯಲಾಗಿದೆ. ಇಂತಹ ದುಷ್ಕೃತ್ಯ ಎಸಗಿದ ಆರೋಪಿಗಳನ್ನು ಆದಷ್ಟು ಬೇಗ ಪತ್ತೆಹಚ್ಚಿ ಬಂಧಿಸಬೇಕು. ತ್ವರಿತವಾಗಿ ವಿಚಾರಣೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಲ್ಲವೇ ಆಂಧ್ರಪ್ರದೇಶದ ಮಾದರಿಯಲ್ಲಿ ಎನ್‌ಕೌಂಟರ್ ಮಾಡಬೇಕು’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
‘ಬಾಲಕಿಯು ಮನೆಗೆ ಹಿರಿಯ ಮಗಳಾಗಿದ್ದ, ಆಕೆಯ ತಂದೆ ಕ್ಷೌರಿಕ ವೃತ್ತಿ ಮಾಡಿಕೊಂಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮಗಳು ಓದಿ ವಿದ್ಯಾವಂತಳಾಗಿ ಸರ್ಕಾರಿ ನೌಕರಿ ಪಡೆದು ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳುವಳು ಎಂಬ ಕನಸು ಕಟ್ಟಿಕೊಂಡಿದ್ದರು. ಆದರೆ, ಮಗಳ ಸಾವಿನಿಂದಾಗಿ ಪೋಷಕರು ಆಘಾತಕ್ಕೆ ಒಳಗಾಗಿ ಮಾನಸಿಕವಾಗಿ ಕುಗ್ಗಿದ್ದಾರೆ. ಸರ್ಕಾರವು ಆಕೆಯ ಸಾವಿಗೆ ನ್ಯಾಯ ಒದಗಿಸಿ, ಆಕೆಯ ಕುಟುಂಬ ಸದಸ್ಯರಿಗೆ ಆರ್ಥಿಕ ಸಹಾಯಧನ ಮಾಡಬೇಕು. ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು’ ಎಂದು ಮನವಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಸಮಾಜದ ಮುಖಂಡ ಈರಣ್ಣ ಹಡಪದ, ‘ಮಹಿಳೆಯರನ್ನು ಪೂಜನೀಯ ಭಾವನೆಯಿಂದ ಕಾಣುವ ದೇಶದಲ್ಲಿ ಇಂತಹ ಕೃತ್ಯ ನಡೆದಿರುವುದು ಅಮಾನವೀಯ. ಅತ್ಯಾಚಾರ ಎಸಗಿ ಕೊಲೆ ಮಾಡಿದವರನ್ನು ಸಮ್ಮನೆ ಬಿಟ್ಟರೆ ಇವತ್ತು ನಮ್ಮ ಸಮಾಜದ ಬಾಲಕಿಗೆ ಆದಂತಹ ಗತಿ ನಾಳೆ ಮತ್ತೊಬ್ಬ ಬಾಲಕಿಗೂ ಆಗಬಹುದು. ಹೀಗಾಗಿ, ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
‘ಮಗಳು ಕಾಣಿಸುತ್ತಿಲ್ಲ ಎಂದು ಪೋಷಕರು ಠಾಣೆಗೆ ಹೋಗಿ ದೂರುಕೊಟ್ಟರು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ತಡವಾಗಿದೆ. ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಬಾಲಕಿಯನ್ನು ಪತ್ತೆ ಮಾಡಿದ್ದರೆ ಸಾವಿನಿಂದ ಬಾಲಕಿಯನ್ನು ಉಳಿಸಬಹುದಿತ್ತು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದರು.
‘ಪ್ರಕರಣ ನಡೆದು ಹಲವು ದಿನಗಳು ಕಳೆದರೂ ಆರೋಪಿಗಳ ಪತ್ತೆಯಾಗಿಲ್ಲ. ಅದೇ ಪ್ರಭಾವಿಗಳ ಮಕ್ಕಳಾಗಿದ್ದರೆ ತ್ವರಿತವಾಗಿ ಶವ ಪರೀಕ್ಷೆಯ ವರದಿ ತರಿಸಿಕೊಂಡು ಆರೋಪಿಗಳನ್ನು ಪತ್ತೆ ಮಾಡಿ ಜೈಲಿಗೆ ಕಳುಹಿಸುತ್ತಿದ್ದರು. ಬಾಲಕಿಯ ಕೊಲೆಯಾಗಿ ದಿನಗಳು ಕಳೆದರೂ ಇದುವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ತಪ್ಪಿತಸ್ಥರನ್ನು ಆದಷ್ಟು ಬೇಗ ಪತ್ತೆ ಮಾಡಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಆರೋಪಿಗಳ ಪತ್ತೆಯಲ್ಲಿ ತಡವಾದರೆ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಡಿ. ಹಡಪದ, ಅಯ್ಯಪ್ಪ ಹಡಪದ, ಹಣಮಂತರಾಯ ಹುಣಸಗಿ, ಬಸವರಾಜ ಸೂಗುರು, ಬಸವರಾಜ ಸಿ. ಹಳ್ಳಿ, ಮಲ್ಲಿಕಾರ್ಜುನ ಸಾವಳಗಿ, ಮಲ್ಲಿಕಾರ್ಜುನ ಸೂಗುರು, ಅಮರೇಶ ವಡಗೇರಾ ಸೇರಿ ಹಲವರು ಪಾಲ್ಗೊಂಡಿದ್ದರು.
ಹುಣಸಗಿ: ತಾಲ್ಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಕಾಣೆಯಾಗಿ ಶವವಾಗಿ ಪತ್ತೆಯಾದ ವಿಷಯ ತಿಳಿದು ಮಾಜಿ ಸಚಿವ ರಾಜುಗೌಡ ಅವರು ಆಕೆಯ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ‘ಪ್ರತಿಭಾವಂತೆಯಾಗಿ ಓದುತ್ತಿದ್ದ ಬಾಲಕಿ ಕಾಣೆಯಾಗಿ ಶವವಾಗಿ ಪತ್ತೆಯಾಗಿರುವದು ಅತ್ಯಂತ ನೋವಿನ ಸಂಗತಿಯಾಗಿದೆ. ಇಂತಹ ಘಟನೆ ನಡೆಯಬಾರದು. ಈ ಘಟನೆಯ ಕುರಿತು ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು’ ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಕುಶಾಲನಾಯಕ ಕನಕು ಜೀರಾಳ ಮಲ್ಲು ನವಲಗುಡ್ಡ ದೇವು ಗೋಪಾಳೆ ಆದಪ್ಪ ತೋಟಿಗೇರ ಸಂಗಣ್ಣ ಬಿಳೆಬಾವಿ ಸಂಗಣ್ಣ ಮೇದಲಾಪುರ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.