ADVERTISEMENT

ಮಕ್ಕಳ ಚಲನಚಿತ್ರೋತ್ಸವ ಜ.17 ರಿಂದ

ಪುಟಾಣಿ ಸಫಾರಿ, ನಾವು ಗೆಳೆಯರು ಕನ್ನಡ ಚಲನಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 15:57 IST
Last Updated 28 ಡಿಸೆಂಬರ್ 2019, 15:57 IST
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಮಾತನಾಡಿದರು
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಮಾತನಾಡಿದರು   

ಯಾದಗಿರಿ: ‘ಜಿಲ್ಲೆಯ 4 ಚಿತ್ರಮಂದಿರಗಳಲ್ಲಿ ಜನವರಿ 17ರಿಂದ 30ರವರೆಗೆ ಭಾನುವಾರ ಹೊರತುಪಡಿಸಿ ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಎರಡು ವಾರಗಳ ಕಾಲ ಮಕ್ಕಳ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಚಲನಚಿತ್ರೋತ್ಸವದಲ್ಲಿ 1ರಿಂದ 9ನೇ ತರಗತಿ ಮಕ್ಕಳು ಭಾಗವಹಿಸಬಹುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಶಾಲಾ ಮಕ್ಕಳಿಗೆ 2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಾದ್ಯಂತ ಚಿತ್ರಮಂದಿರಗಳಲ್ಲಿ ಮಕ್ಕಳ ಚಲನಚಿತ್ರೋತ್ಸವ ಆಯೋಜನೆ ಸಂಬಂಧ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಗರದ ಭಾಗ್ಯಲಕ್ಷ್ಮಿ, ಶಹಾಪುರ ತಾಲ್ಲೂಕಿನ ಜಯಶ್ರೀ, ಭವಾನಿ ಚಿತ್ರಮಂದಿರಗಳಲ್ಲಿ ಪುಟಾಣಿ ಸಫಾರಿ ಕನ್ನಡ ಚಲನಚಿತ್ರ ಹಾಗೂ ಸುರಪುರ ತಾಲ್ಲೂಕಿನ ಹುಣಸಗಿಯ ತ್ರಿಶೂಲ ಚಿತ್ರಮಂದಿರದಲ್ಲಿ ನಾವು ಗೆಳೆಯರು ಕನ್ನಡ ಚಲನಚಿತ್ರ ಪ್ರದರ್ಶಿಸಲಾಗುವುದು. ಚಿತ್ರ ಪ್ರದರ್ಶನ ಮಾಡಲು ಆಯ್ಕೆಯಾಗಿರುವ ಆಯಾ ತಾಲ್ಲೂಕಿನ ಚಿತ್ರಮಂದಿರಗಳಲ್ಲಿ ಹಾಗೂ ಯಾದಗಿರಿ ನಗರದ ಭಾಗ್ಯಲಕ್ಷ್ಮಿ ಚಿತ್ರಮಂದಿರದಲ್ಲಿ ಜನವರಿ 17ರಂದು ಅಥಿತಿಗಳಿಂದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ’ ಸೂಚಿಸಿದರು.

ADVERTISEMENT

ಚಿಕ್ಕಬಳ್ಳಾಪುರದ ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆ ವ್ಯವಸ್ಥಾಪಕ ಎಸ್.ರಮೇಶ ಮಾತನಾಡಿ, ‘ಸರ್ಕಾರದ ನಿರ್ದೇಶನದಂತೆ ಪ್ರತಿ ವಿದ್ಯಾರ್ಥಿಯಿಂದ ಚಲನಚಿತ್ರ ಪ್ರದರ್ಶನ ಟಿಕೆಟ್ ದರ ₹ 15 ಇದ್ದು, ಸಂಗ್ರಹವಾಗುವ ಒಟ್ಟು ಹಣದಲ್ಲಿ ಮಕ್ಕಳ ಚಿತ್ರ ಸಂಸ್ಥೆಗೆ ಶೇಕಡ 45ರಷ್ಟು, ಚಿತ್ರಮಂದಿರದ ಬಾಡಿಗೆಗೆ ಶೇಕಡ 25ರಷ್ಟು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಶೇಕಡ 10ರಷ್ಟು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶೇಕಡ 10 ಹಾಗೂ ಯುಎಫ್‍ಓ ಮತ್ತು ಕ್ಯೂಬ್ ಸ್ಯಾಟ್‍ಲೈಟ್ ಶುಲ್ಕ ಭರಿಸಲು ಶೇಕಡ 10ರಷ್ಟು ಖರ್ಚು ಮಾಡಬಹುದು’ ಎಂದು ತಿಳಿಸಿದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ.ವಿಶ್ವನಾಥ, ಯಾದಗಿರಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಮನೋಹರ ವಡಿಗೇರಿ, ಶಹಾಪುರ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ವೈದ್ಯ, ಸುರಪುರ ಶಿಕ್ಷಣ ಸಂಯೋಜಕ ಸುಭಾಷ್‌ ಕೊಂಡಗೂಳ, ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆಯ ವ್ಯವಸ್ಥಾಪಕ ಅವಿನಾಶ್, ಭಾಗ್ಯಲಕ್ಷ್ಮಿ ಚಿತ್ರಮಂದಿರದ ಗೋಪಾಲ್, ಶಹಾಪುರ ಭವಾನಿ ಚಿತ್ರಮಂದಿರದ ವ್ಯವಸ್ಥಾಪಕ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.