
ಕಕ್ಕೇರಾ: ಪಟ್ಟಣದ ಬನದೊಡ್ಡಿ ರಸ್ತೆ ಮಾರ್ಗದ ಎರಡು ಬದಿಯಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ ಅಂಗಡಿ, ಮನೆ ಹಾಗೂ ಗೂಡಂಗಡಿಗಳನ್ನು ಪುರಸಭೆ ಆಡಳಿತ ಶುಕ್ರವಾರ ಪೊಲೀಸರ ನೆರವಿನಿಂದ ತೆರವುಗೊಳಿಸಿತು.
ನಗರೋತ್ಥಾನ ಅಡಿ ರಸ್ತೆ ಕಾಮಗಾರಿ ಹಾಗೂ ಚರಂಡಿ ನಿರ್ಮಾಣಕ್ಕಾಗಿ ಸ್ಥಳೀಯ ಪುರಸಭೆ ಆಡಳಿತ ಈ ಮಾರ್ಗದ ಎಲ್ಲ ಮನೆಗಳ, ಅಂಗಡಿಗಳ ಮಾಲೀಕರಿಗೆ ಹಾಗೂ ಗೂಡಂಗಡಿಗಳ ವ್ಯಾಪಾರಿಗಳಿಗೆ ಮೂರು ಬಾರಿ ಸೂಚನೆ ನೀಡಿತ್ತು. ಆದರೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೆ ಜೆಸಿಬಿ ಬಳಸಿ ಕ್ರಮಿಸಿದ್ದ ಜಾಗಗಳನ್ನು ತೆರವುಗೊಳಿಸಲಾಯಿತು.
ಜೆಸಿಬಿ ಸದ್ದು ಮಾಡುತ್ತಿದ್ದಂತೆ ಎಲ್ಲರೂ ತಮ್ಮ ವಸ್ತುಗಳನ್ನು ತೆಗೆಯುವ ಹಾಗೂ ಸರಿಪಡಿಸುವ ಕೆಲಸಕ್ಕೆ ಮುಂದಾದರು. ಈ ವೇಳೆ ಭಜಂತ್ರಿ ಕಾಲೊನಿಯಲ್ಲಿ ವಿದ್ಯುತ್ ಕಂಬದ ತಂತಿ ಬೇರ್ಪಡಿಸುವ ಸಂದರ್ಭದಲ್ಲಿ ಕಂಬವೊಂದು ಮುರಿದು ಬಿತ್ತು. ಅದೃಷ್ಟವಶಾತ್ ಸ್ಥಳದಲ್ಲಿದ್ದ ಮಗುವೊಂದು ಪ್ರಾಣಾಪಾಯದಿಂದ ಬಚಾವ್ ಆಯಿತು.
ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ, ಜೆಇ ರೇಣುಕಮ್ಮ, ಪಿಎಸ್ಐ ಸುರೇಶ ಭಾವಿಮನಿ, ಪೊಲೀಸರಾದ ಸುಭಾಸಶ್ವಂದ್ರ, ವಿನಾಯಕ, ಬಸವರಾಜ, ಸೋಮನಾಥ, ಇಮಾಮಸಾಬ, ಪವಿತ್ರಾ, ರಾಘವೇಂದ್ರ, ಪುರಸಭೆ ಸಿಬ್ಬಂದಿಗಳಾದ ಜೆಟ್ಟೆಪ್ಪ ಬಾಚಾಳ, ಕೃಷ್ಣಾ ರಾಠೋಡ್, ನಿಂಗಪ್ಪ, ಮರೆಪ್ಪ ಸುರಪುರ್, ರಾಮಕೃಷ್ಣ, ಅಮರೇಶ ಬೋಯಿ, ಮೌನೇಶ ಗುರಿಕಾರ, ಭೀಮಣ್ಣ ದೊರೆ, ಕಮಲಾಕ್ಷಿ ಕಾತರಕಿ, ಸೋಮುನಾಯ್ಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.