ಯಾದಗಿರಿ: ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯದ ಜನರ ನಿರೀಕ್ಷೆಯಂತೆ ಯೋಜನೆಗಳನ್ನು ಹಾಗೂ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದ ನೇತಾಜಿ ಶುಭಾಶ್ಚಂದ್ರಬೋಸ್ ವೃತ್ತದಲ್ಲಿ ಶನಿವಾರ ಖಾಲಿ ಚೊಂಬು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಯಚೂರು ಸಂಸದ ಜಿ.ಕುಮಾರನಾಯಕ, ಕೇಂದ್ರ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎನ್‌ಡಿಎ ಮೈತ್ರಿಕೂಟದ ಮಿತ್ರ ಪಕ್ಷದ ರಾಜ್ಯಗಳಾದ ಆಂಧ್ರಪ್ರದೇಶ, ಬಿಹಾರ ಸೇರಿದಂತೆ ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅನ್ಯಾಯವಾಗಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಸೇರಿ ಎನ್‌ಡಿಎ ಮೈತ್ರಿಕೂಟದ 19 ಸಂಸದರಿದ್ದಾರೆ. ಅವರು ಕೂಡ ಕೇಂದ್ರದ ಮೇಲೆ ಒತ್ತಡ ಹಾಕಿ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಹಣ ಹೋಗುತ್ತದೆ. ಅದರಲ್ಲಿ ಅರ್ಧ ಭಾಗವನ್ನಾದರೂ ನೀಡಿಲ್ಲ. ಇನ್ನೂ ಕಲ್ಯಾಣ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ನಾವೂ ಈಗಾಗಲೇ ಲೋಕಸಭೆ ಅಧಿವೇಶನದಲ್ಲಿ ಹಾಗೂ ಹೊರಗೆ ಸರ್ಕಾರದ ಏಕಪಕ್ಷೀಯ ನಿರ್ಧಾರ ವಿರೋಧಿಸಿದ್ದೇವೆ ಎಂದರು.
ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಯನ್ನು ದೇಶದ ಇತರ ರಾಜ್ಯಗಳು ಟೀಕಿಸಿವೆ. ಇದು ಬರುವ ದಿನಗಳಲ್ಲಿ ಕೆಟ್ಟ ಪರಿಣಾಮವನ್ನು ಆ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ಮಾತನಾಡಿ, ನರೇಂದ್ರ ಮೋದಿಯವರು ದೇಶದ ಸರ್ವಾಂಗೀಣ ಪ್ರಗತಿಗೆ ಆದ್ಯತೆ ನೀಡಬೇಕು. ಇದರಲ್ಲಿ ರಾಜಕಾರಣ ಮಾಡಬಾರದು. ಆದರೆ, ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಮೊದಲಿನಿಂದಲೂ ಹಣಕಾಸು ನೆರವು ಸಕಾಲಕ್ಕೆ ನೀಡದೆ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ ಅನಪುರ ಮಾತನಾಡಿ, ಪ್ರದಾನಮಂತ್ರಿಯವರು ಪ್ರತಿಯೊಂದು ಸಾರ್ವಜನಿಕ ಸಮಾರಂಭಗಳಲ್ಲಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಮಾತುಗಳನ್ನಾಡುತ್ತಾರೆ. ಆದರೆ, ಅದು ಕೃತಿಯಲ್ಲಿ ಇಲ್ಲ, ಪರಿಣಾಮ ಬರುವ ದಿನಗಳಲ್ಲಿ ದೇಶದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ, ಕೆಪಿಸಿಸಿ ವೀಕ್ಷಕ ರಾಘವೇಂದ್ರ ಮಾನಸಗಲ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮರೆಡ್ಡಿ, ಮುಖಂಡರಾದ ಬಸ್ಸುಗೌಡ ಬಿಳ್ಹಾರ, ಚನ್ನಕೇಶಗೌಡ ಬಾಣತಿಹಾಳ, ಸುದರ್ಶನ ನಾಯಕ, ಕೃಷ್ಣಾ ಚಪಟ್ಲಾ, ಬಸಣ್ಣಗೌಡ ಪಾಟೀಲ ಚಿಂಚೋಳಿ, ಹಣಮಂತ ಲಿಂಗೇರಿ, ನಿಜಗುಣ ದೋರನಹಳ್ಳಿ, ಸಂಜುಕುಮಾರ ಕಾವಲಿ, ಕೃಷ್ಣ ದಾಸನಕೇರಿ, ಅಭಿಷೇಕ ದಾಸನಕೇರಿ, ಹೊನ್ನೇಶ ದೊಡ್ಡಮನಿ, ಬಾಷುಮಿಯಾ ವಡಗೇರಾ, ಭೀಮರಾಯ ಠಾಣಾಗುಂದಿ, ಪದ್ಮಾವತಿ, ಬಸವರಾಜ ಬಾಚವಾರ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.