ADVERTISEMENT

ತರಗತಿ ಮಂಜೂರು ಮೊದಲೇ ಕಟ್ಟಡ ನಿರ್ಮಾಣ!

ಜಿಲ್ಲೆಯ 6 ಗ್ರಾಮಗಳಲ್ಲಿ ಪಾಳು ಬಿದ್ದ ಶಾಲಾ ಕಟ್ಟಡ, ವಿದ್ಯುತ್‌ ಕಳುವು ಮಾಡಿಕೊಂಡ ಕಿಡಗೇಡಿಗಳು

ಬಿ.ಜಿ.ಪ್ರವೀಣಕುಮಾರ
Published 14 ಜೂನ್ 2022, 3:14 IST
Last Updated 14 ಜೂನ್ 2022, 3:14 IST
ಯಾದಗಿರಿ ತಾಲ್ಲೂಕಿನ ಮುಂಡರಗಿ ಗ್ರಾಮದ ಹೊರವಲದಲ್ಲಿ ನಿರ್ಮಿಸಿರುವ ಭವ್ಯ ಪ್ರೌಢಶಾಲೆ ಕಟ್ಟಡ
ಯಾದಗಿರಿ ತಾಲ್ಲೂಕಿನ ಮುಂಡರಗಿ ಗ್ರಾಮದ ಹೊರವಲದಲ್ಲಿ ನಿರ್ಮಿಸಿರುವ ಭವ್ಯ ಪ್ರೌಢಶಾಲೆ ಕಟ್ಟಡ   

ಯಾದಗಿರಿ: ಜಿಲ್ಲೆಯ ಆರು ಗ್ರಾಮಗಳಲ್ಲಿ ಪ್ರೌಢಶಾಲೆ ತರಗತಿಯೇ ಮಂಜೂರು ಆಗಿಲ್ಲ. ಆದರೆ, ಪ್ರೌಢಶಾಲೆಗಾಗಿ ಎಂದು ಭವ್ಯ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಈಗ ಅವು ಪಾಳುಬಿದ್ದು, ಸರ್ಕಾರದ ಕೋಟ್ಯಂತರ ರೂಪಾಯಿ ವ್ಯರ್ಥವಾಗಿದೆ.

ಯಾದಗಿರಿ ತಾಲ್ಲೂಕಿನ ಮುಂಡರಗಿ, ಬಾಡಿಯಾಳ, ಸುರಪುರ ತಾಲ್ಲೂಕಿನ ಗೌಡಗೇರಾ, ಶಹಾಪುರ ತಾಲ್ಲೂಕಿನ ಗಂಗನಾಳ, ವಡಗೇರಾ ತಾಲ್ಲೂಕಿನ ಟಿ.ವಡಗೇರಾ, ಹುಣಸಗಿ ತಾಲ್ಲೂಕಿನ ಯಡಹಳ್ಳಿ ಗ್ರಾಮಗಳಲ್ಲಿ 9, 10ನೇ ತರಗತಿ ಮಂಜೂರು ಆಗುವ ಮೊದಲೇ ಕಟ್ಟಡ ನಿರ್ಮಾಣ ಮಾಡಲಾಗಿದೆ.

2016–17 ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಕಟ್ಟಡ ನಿರ್ಮಾಣವಾಗಿದೆ. ಆದರೆ, ತರಗತಿಗಳು ಮಂಜೂರಾಗಿಲ್ಲ. ಆ ಗ್ರಾಮಕ್ಕೆ ಪ್ರೌಢಶಾಲೆ ಎಂದು ಮೇಲ್ದರ್ಜೆಗೆ ಏರಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ದೂರದ ಊರುಗಳಿಗೆ ತೆರಳುವುದು ತಪ್ಪಿಲ್ಲ.

ADVERTISEMENT

ಕೋಟ್ಯಂತರ ರೂಪಾಯಿ ವೆಚ್ಚ: ಜಿಲ್ಲೆಯ 6 ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಈಗಿರುವ ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇವೆ. 9 10ನೇ ತರಗತಿಗೆ ಪಕ್ಕದ ಊರಿಗೆ ಹೋಗಬೇಕಾಗಿದೆ. ಆದರೆ, ನಿರ್ಮಿಸಿರುವ ಕಟ್ಟಡ ಮಾತ್ರ ಪಾಳು ಬಿದ್ದಿದೆ.

ಗ್ರಾಮಸ್ಥರಿಂದ ಹಣ ಸಂಗ್ರಹ: ಸುರಪುರ ತಾಲ್ಲೂಕಿನ ಗೌಡಗೇರಾ ಗ್ರಾಮದಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಜಾಗವನ್ನು ಖರೀದಿ ಮಾಡಿದ್ದಾರೆ. ಜತೆಗೆ ₹1 ಕೋಟಿ ವೆಚ್ಚದಲ್ಲಿ ಕಟ್ಟಡವೂ ನಿರ್ಮಾಣವಾಗಿದೆ.

ಗ್ರಾಮದ ಹಿಂದುಳಿದ ಹೆಣ್ಣುಮಕ್ಕಳಿಗೆ ಗ್ರಾಮದಲ್ಲೇ ಪ್ರೌಢಶಾಲೆಯಲ್ಲಿ ಕಲಿಯಬಹುದು ಎಂದು ಸಂತಸಪಟ್ಟಿದ್ದರು. ಆದರೆ, ಅದು ಆಗಲಿಲ್ಲ.

‘ಗ್ರಾಮದಲ್ಲಿ 9ನೇ ತಗರತಿಯಲ್ಲಿ ಸುಮಾರು 60ರಿಂದ 70 ವಿದ್ಯಾರ್ಥಿಗಳಿದ್ದಾರೆ. ಪಕ್ಕದ ಹಳ್ಳಿಗಳಾದ ಕಿರದಳ್ಳಿ, ಬೂದನೂರ, ಆಲ್ದಾಳ ಗ್ರಾಮಗಳ ಮಕ್ಕಳಿಗೆ ಪ್ರೌಢಶಾಲೆಯಿಂದ ಅನುಕೂಲವಾಯಿತೆಂದು ಖುಷಿಪಡುವಷ್ಟರಲ್ಲೇ ಈ ಗ್ರಾಮದ ಹೆಸರು ಯಾವ ಇಲಾಖೆಯಲ್ಲೂ ಇಲ್ಲ ಎಂದು ಅಧಿಕಾರಿಗಳು ಹೇಳಿದಾಗ ಗ್ರಾಮಸ್ಥರಿಗೂ, ವಿದ್ಯಾರ್ಥಿಗಳಿಗೂ ನಿರಾಶೆಯಾಯಿತು’ ಎನ್ನುತ್ತಾರೆ ಗ್ರಾಮಸ್ಥರಾದ ಎನ್‌.ಎಚ್‌.ಬಿರಾದಾರ, ಜಿ.ಬಿ.ಪಾಟೀಲ.

‘ಯಾದಗಿರಿ ತಾಲ್ಲೂಕಿನ ಮುಂಡರಗಿ ಊರು ಹೊರಗಡೆ ಪ್ರೌಢಶಾಲೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪ್ರೌಢಶಾಲೆ ಎಂದು ಮೇಲ್ದರ್ಜೆಗೆ ಏರಿಕೆಯಾಗಿಲ್ಲ. ಆದರೂ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈಗ ಇಲ್ಲಿ ರಾತ್ರಿ ಪೂರ್ತಿ ಇಸ್ಪೀಟ್‌ ಆಡುತ್ತಿದ್ದಾರೆ. ರಾತ್ರಿ ಪಾರ್ಟಿ ಮಾಡಲು ಕಟ್ಟಡ ಬಳಕೆಯಾಗುತ್ತಿದೆ. ಕುಡಿದು ಬಿಸಾಡಿರುವ ಬಾಟಲಿಗಳು ಶಾಲೆಯಲ್ಲಿ ಬಿದ್ದಿವೆ’ ಎನ್ನುತ್ತಾರೆ ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜಯಕುಮಾರ ಕವಲಿ ಮುಂಡರಗಿ.

‘ಗ್ರಾಮದಲ್ಲಿರುವ ಶಾಲೆಗಳು ಮಳೆಗಾಲದಲ್ಲಿ ಸೋರುತ್ತಿವೆ. ಈ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಪಾಠ ಮಾಡಬಹುದು. ಈ ಬಗ್ಗೆ ಡಿಡಿಪಿಐ, ಬಿಇಒ ಅವರಿಗೆ ಗಮನಕ್ಕೆ ತರಲಾಗಿದೆ. 1–5 ತರಗತಿ ಒಂದು ಕಡೆ, 7ರಿಂದ 8ನೇ ತರಗತಿ ಮಳೆ ಬಂದಾಗ ಸಮುದಾಯ ಭವನದಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ಅಲ್ಲಿಗೆ ಸ್ಥಳಾಂತರ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ. ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಅವರು.

***

2 ಕಾಲೇಜು ಕಾಲೇಜು ಸ್ಥಳಾಂತರ

ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ, ಸುರಪುರ ತಾಲ್ಲೂಕಿನ ಮಾಲಗತ್ತಿ ಗ್ರಾಮಗಳಲ್ಲಿ ಪಿಯು ಕಾಲೇಜು ಮಂಜೂರು ಆಗಿತ್ತು. ಆದರೆ, ವಿದ್ಯಾರ್ಥಿಗಳ ಕೊರತೆಯಿಂದ ಕಾಲೇಜು ಆರಂಭವಾಗಿಲ್ಲ.

ಸುರಪುರ ತಾಲ್ಲೂಕಿನ ಮಾಲಗತ್ತಿ ಗ್ರಾಮಕ್ಕೆ ಮಂಜೂರಾಗಿದ್ದ ಪಿಯು ಕಾಲೇಜು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಟ್ಟಲಗಿಗೆ, ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಕಾಲೇಜು ಕೊಪ್ಪಳ ಜಿಲ್ಲೆಯ ಹಿಟ್ನಾಳಗೆ ಸ್ಥಳಾಂತರವಾಗಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ಗ್ರಾಮದಲ್ಲಿ ಕಾಲೇಜು ಕನಸು ಕನಸಾಗಿಯೇ ಇದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಕಟ್ಟಡ ಮಂಜೂರು ಆಗಿತ್ತು. ಮೂರು ವರ್ಷಗಳ ಕಾಲ ಉಪನ್ಯಾಸಕರಿಗೆ ವೇತನ ನೀಡುವುದು ಸೇರಿದಂತೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿತ್ತು. ಕಾಲೇಜು ಆರಂಭವಾಗದ ಕಾರಣ ಮೂರು ವರ್ಷಗಳ ಗಡುವು ಮುಗಿದಿದೆ. ಈಗ ಕಟ್ಟಡ ಮಾತ್ರ ಪೂರ್ಣಗೊಂಡಿದೆ. ಆದರೆ, ನೋಂದಣಿಯೂ ಇಲ್ಲ. ಹೀಗಾಗಿ ಸರ್ಕಾರದ ಹಣ ಪೋಲಾಗಿದೆ.

ವಡಗೇರಾ ತಾಲ್ಲೂಕು ಕೇಂದ್ರವಾದರೂ ಸರ್ಕಾರಿ ಪಿಯು ಕಾಲೇಜು ಇಲ್ಲ. ಈ ಹಿಂದೆ ಮಂಜೂರಾದರೂ ನೋಂದಣಿ ಕೊರತೆಯಿಂದ ಬೇರೆಡೆ ಸ್ಥಳಾಂತರವಾಗಿದೆ.

ಇಲ್ಲಿಯೂ ಪ್ರತಿ ಕಟ್ಟಡಕ್ಕೆ ₹1 ಕೋಟಿ ಮಂಜೂರು ಆಗಿದೆ. ಕಟ್ಟಡವೂ ನಿರ್ಮಾಣವಾಗಿದೆ. ಆದರೆ, ಕಾಲೇಜು ಮಾತ್ರ ಆರಂಭವಾಗಿಲ್ಲ. ಇತ್ತ ಕಾಲೇಜು ನಿರ್ಮಾಣವಾಗಿದ್ದರೂ ತರಗತಿಗಳು ಇಲ್ಲದಿದ್ದರಿಂದ ಕುಗ್ರಾಮದವರು ಕಾಲೇಜು ಮೆಟ್ಟಲು ಹತ್ತಲೂ ಸಾಧ್ಯವಾಗಿಲ್ಲ. ಹೆಣ್ಣುಮಕ್ಕಳು ತಾಲ್ಲೂಕು ಕೇಂದ್ರಕ್ಕೆ ತೆರಳು ಆಗದೇ ಇರುವುದರಿಂದ ಅನೇಕರ ವಿದ್ಯಾಭ್ಯಾಸವೂ ಮೊಟಕಾಗಿದೆ.

***

ಈ ಬಗ್ಗೆ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, 15 ದಿನಗಳಲ್ಲಿ ಸ್ಪಷ್ಟವಾದ ನಿರ್ಧಾರ ತಿಳಿದು ಬರಲಿದೆ. ಸರ್ಕಾರದ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇವೆ
ಶಾಂತಗೌಡ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ

***

ಮುಂಡರಗಿ ಗ್ರಾಮದಲ್ಲಿ ಪ್ರೌಢಶಾಲೆ ಕಟ್ಟಡ ನಿರ್ಮಿಸಿದ್ದರೂ ನಮ್ಮಲ್ಲಿ ತರಗತಿಯೇ ಮಂಜೂರು ಆಗಿಲ್ಲ. ಈಗ ಆ ಕಟ್ಟಡ ಅನೈತಕ ಚಟುವಟಿಕೆ ನಡೆಯುತ್ತಿದೆ. ಕಿಡಿಗೇಡಿಗಳು ಬಾಗಿಲು, ಕಿಟಿಕಿ, ವೈರ್‌ ಕಿತ್ತಿಕೊಂಡು ಹೋಗಿದ್ದಾರೆ
ಸಂಜಯಕುಮಾರ ಕವಲಿ ಮುಂಡರಗಿ, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.