ADVERTISEMENT

ಶಹಾಪುರದಲ್ಲಿ ಮುಂದುವರಿದ ಜಿಟಿ ಜಿಟಿ ಮಳೆ

ಶಹಾಪುರದಲ್ಲಿ ಮುಂದುವರಿದ ಜಿಟಿ ಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 17:28 IST
Last Updated 14 ಅಕ್ಟೋಬರ್ 2020, 17:28 IST
ಶಹಾಪುರ ನಗರದಲ್ಲಿ ಬುಧವಾರ ಬೆಳಗಿನ ಜಾವ ಸುರಿದ ಮಳೆಯಿಂದ ತಗ್ಗು ಪ್ರದೇಶದ ರಸ್ತೆ ಮೇಲೆ ನೀರು ಸಂಗ್ರಹವಾಗಿರುವುದು
ಶಹಾಪುರ ನಗರದಲ್ಲಿ ಬುಧವಾರ ಬೆಳಗಿನ ಜಾವ ಸುರಿದ ಮಳೆಯಿಂದ ತಗ್ಗು ಪ್ರದೇಶದ ರಸ್ತೆ ಮೇಲೆ ನೀರು ಸಂಗ್ರಹವಾಗಿರುವುದು   

ಶಹಾಪುರ: ತಾಲ್ಲೂಕಿನ ಭೀಮೆ ಹಾಗೂ ಕೃಷ್ಣಾ ನದಿ ದಂಡೆಯ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ನದಿ ನೀರನ್ನು ಉಪಯೋಗಿಸಿಕೊಂಡು ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದರು. ಇನ್ನೂ 15 ದಿನದಲ್ಲಿ ಭತ್ತ ಕಟಾವಿಗೆ ಬರುತ್ತಿತ್ತು. ವಾಯುಭಾರ ಕುಸಿತದಿಂದ ಉಂಟಾದ ಮಳೆ ಹಾಗೂ ಗಾಳಿಯಿಂದ ಭತ್ತನೆಲಕಚ್ಚಿದೆ.

ಹತ್ತಿ ಬಿತ್ತನೆ ಮಾಡಿದ್ದ ಜಮೀನುಗಳ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಅಲ್ಲದೆ ಹತ್ತಿ ಕೀಳಲು ಸಿದ್ಧತೆಯನ್ನು ರೈತರು ಮಾಡಿಕೊಳ್ಳುತ್ತಿದ್ದರು. ಇನ್ನೂ ಕೆಲವು ಕಡೆ ಕಾಯಿ ಹಾಗೂ ಹೂ ಕಟ್ಟಿದ ಹತ್ತಿ ಬೆಳೆಗೆ ತೇವಾಂಶ ಅಧಿಕವಾಗಿ ಕೊಳೆಯುವ ಭೀತಿ ಎದುರಾಗಿದೆ. ಹಿಂಗಾರು ಬಿತ್ತನೆಗಾಗಿ ಸಿದ್ಧಪಡಿಸಿದ ಜಮೀನುಗಳಲ್ಲಿ ನೀರು ನಿಂತಿರುವುದರಿಂದ ಜೋಳ, ಶೇಂಗಾ, ಕಡಲೆ ಬೆಳೆ ಬಿತ್ತನೆ ವಿಳಂಬವಾಗುವ ಆತಂಕ ಶುರುವಾಗಿದೆ.

ಭೀಮಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಬಳಿ ನಿರ್ಮಿಸಿರುವ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನ 31 ಗೇಟ್ ಎತ್ತರಿಸಿ ನದಿಗೆ ಹರಿಬಿಡಲಾಗುತ್ತಿದೆ. ಹುರಸಗುಂಡಗಿ ಗ್ರಾಮದ ಒಳಗೆ ಹಿನ್ನೀರು ಆವರಿಸಿಕೊಳ್ಳುತ್ತಲಿದೆ. ಅದರಂತೆ ಕೃಷ್ಣಾ ನದಿಗೆ ನಾರಾಯಣಪುರ ಬಸವಸಾಗರದಿಂದ 1.63ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ. ದಂಡೆಯ ಗ್ರಾಮಗಳಿಗೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ನದಿ ದಂಡೆಯ ಜನರಿಗೆ ಜಾಗೃತಿ ವಹಿಸುವಂತೆ ಮನವಿ ಮಾಡಲಾಗಿದೆ. ಬೇರೆ ಕಡೆ ಸುರಿದಷ್ಟು ಮಳೆ ಪ್ರಮಾಣ ನಗರದಲ್ಲಿ ಇಲ್ಲ. ತಗ್ಗು ಪ್ರದೇಶದ ರಸ್ತೆಯ ಮೇಲೆ ನೀರು ನಿಂತಿವೆ. ತಾಲ್ಲೂಕಿನಲ್ಲಿ ಬುಧವಾರ ಮಳೆಯಿಂದ ಜೀವ ಹಾನಿಯಾಗಿಲ್ಲ ಎಂದು ತಹಶೀಲ್ದಾರ್ ಜಗನ್ನಾಥರಡ್ಡಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.