ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ಸುತ್ತಮುತ್ತ ಬೆಳೆದಿರುವ ಹತ್ತಿ ಬೆಳೆಗೆ ಕಂಬಳಿ ಹುಳುವಿನ ಕಾಟ ಹೆಚ್ಚಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಹತ್ತಿ ಬೆಳೆಯ ಹೂವು, ಹಣ್ಣು, ಬೀಜಕೋಶ, ಎಲೆಯನ್ನು ಕೀಟ ತಿನ್ನುವುದರಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ. ಇದರಿಂದ ಹುಳು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಳುವರಿ ಕಡಿಮೆ ಆಗಲಿದೆ ಎನ್ನುತ್ತಾರೆ ರೈತರು.
ಕಂಬಳಿ ಹುಳುವಿಗೆ ಔಷಧ ಸಿಂಪಡಣೆ ಮಾಡಿದರೂ ಹತೋಟಿಗೆ ಬರುತ್ತಿಲ್ಲ. ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಿದರೆ ಸಮರ್ಪಕವಾದ ಮಾಹಿತಿ ಒದಗಿಸುತ್ತಿಲ್ಲ. ರೈತರ ಸಮಸ್ಯೆಯನ್ನು ಕೆಳುವವರೇ ಇಲ್ಲದಂತಾಗಿದೆ ಎನ್ನುತ್ತಾರೆ ರೈತರು.
ಗುರುಗುಂಟಾ ಹೋಬಳಿ ವ್ಯಾಪ್ತಿಯ ಹಟ್ಟಿ, ಗುರುಗುಂಟಾ, ಮೇದಿನಾಪುರ, ಕೋಠಾ, ಮಾಚನೂರು, ಯಲಗಟ್ಟಾ, ಪೈದೊಡ್ಡಿ, ಯರಜಂತಿ, ನಿಲೋಗಲ್, ರೋಡಲಬಂಡ, ಗೌಡೂರು, ವೀರಾಪುರ, ಆನ್ವರಿ, ಚಿಕ್ಕನಗನೂರು, ಚುಕನಟ್ಟಿ, ಹಿರೇನಗನೂರು, ಹಿರೇ ಹೆಸರೂರು ಗ್ರಾಮಗಳ ರೈತರು ಈ ಬಾರಿ ಹತ್ತಿ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದಾರೆ. ಆದರೆ, ಬೆಳೆಗೆ ಕಂಬಳಿಹುಳು ಕಾಟ ಹೆಚ್ಚಾಗಿದೆ.
ಕಂಬಳಿ ಹುಳು ಚಿಕ್ಕ ಕಾಯಿಗಳನ್ನು ತಿಂದು ಹಾಕಿದೆ. ಇದೇ ರೀತಿ ಮುಂದುವರಿದರೆ ಫಲ ಬರುವುದಿಲ್ಲ. ಇದರಿಂದ ರೈತರಿಗೆ ನಷ್ಟವಾಗಲಿದೆ ಎನ್ನುತ್ತಾರೆ ಈ ಭಾಗದ ರೈತರು.
ದೂಳು ರೂಪದ ಕೀಟನಾಶಕವಾದ 0.4 ಫೆನ್ವಾಲೆರೇಟ್ ಅಥವಾ ಶೇ 5ರಷ್ಟು ಮೆಲಾಥಿಯನ್ ಪುಡಿಯನ್ನು ಎಕರೆಗೆ 25 ಕೆ.ಜಿಯಷ್ಟು ದೂಳಿಸಿದರೆ ಹುಳುಗಳನ್ನು ನಾಶ ಮಾಡಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.