ADVERTISEMENT

ಹತ್ತಿ ಸಂಶೋಧನಾ ಕೇಂದ್ರ ಸ್ಥಾಪಿಸಿ: ವಿಜು ಕೃಷ್ಣನ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2023, 14:47 IST
Last Updated 12 ಜೂನ್ 2023, 14:47 IST
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಹತ್ತಿ ಬೆಳೆಗಾರರ ಸಮಾವೇಶದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ವಿಜು ಕೃಷ್ಣನ್ ಮಾತನಾಡಿದರು
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಹತ್ತಿ ಬೆಳೆಗಾರರ ಸಮಾವೇಶದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ವಿಜು ಕೃಷ್ಣನ್ ಮಾತನಾಡಿದರು   

ಶಹಾಪುರ: ರೈತರ ಅನುಕೂಲಕ್ಕಾಗಿ ಭೀಮರಾಯನಗುಡಿಯಲ್ಲಿ ಹತ್ತಿ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿ ಎಂದು ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ವಿಜು ಕೃಷ್ಣನ್ ಮನವಿ ಮಾಡಿದರು.

ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹತ್ತಿ ಬೆಳೆಗಾರರ ಸಮಾವೇಶದಲ್ಲಿ ಅವರು ಮಾತನಾಡಿದರು.

’ಹತ್ತಿ ಬೆಂಬಲ ಬೆಲೆ ಹೆಚ್ಚಿಸಬೇಕು. ನಕಲಿ ಬೀಜ ಗೊಬ್ಬರ, ಕ್ರಿಮಿನಾಶಕಗಳನ್ನು ತಡೆಗಟ್ಟಬೇಕು. ಕೈಗಾರಿಕೆಯ ಬಲವರ್ಧನೆಗೆ ಹೆಚ್ಚು ಹಣ ಬಿಡುಗಡೆ ಹಾಗೂ ವೈಜ್ಞಾನಿಕ ಕೃಷಿ ಜಾರಿಗಾಗಿ ಹತ್ತಿಬೆಳಗಾರರ ಸಂಘವು ಹೆಚ್ಚಿನ ಪ್ರಮಾಣದಲ್ಲಿ ಸಂಘಟನೆಯಾಗಿ ಹಕ್ಕುಗಳನ್ನು ಪಡೆಯಬೇಕು‘ ಎಂದು ಸಲಹೆ ನೀಡಿದರು.

ADVERTISEMENT

ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ರೈತರ ಆದಾಯ ದ್ವಿಗುಣ ಮಾಡುತ್ತೇವೆ. ರೈತರ ಬೆಳೆಗೆ ಬೆಂಬಲ ಬೆಲೆ ಘೋಷಿಸುತ್ತೇವೆ ಎಂದು ಹೇಳಿ 9ವರ್ಷ ಕಳೆದರೂ ಅನುಷ್ಠಾನ ಮಾತ್ರ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಆನೆಗುಂದಿ ಮಾತನಾಡಿ, ಜಿಲ್ಲೆಯಾದ್ಯಂತ ಕೀಟನಾಶಕ ಮತ್ತು ರಸಗೊಬ್ಬರ ಅಂಗಡಿಗಳಲ್ಲಿ ನಕಲಿ ಬೀಜ ಮಾರಾಟ ನಡೆಯುತ್ತಿದೆ. ಕಳೆದ ವರ್ಷ ಖಾಸಗಿ ಕಂಪನಿಯೊಂದು ನಕಲಿ ಬೀಜಗಳ ಮಾರಾಟದಿಂದ ಜಿಲ್ಲೆಯಾದ್ಯಂತ ಶೇ.90ರಷ್ಟು ರೈತರಿಗೆ ನಷ್ಟವಾಗಿದೆ ಎಂದು ಅವರು ಆರೋಪಿಸಿದರು.

ಟಿ.ಯಶವಂತ, ಶರಣಬಸಪ್ಪ ಮಮಶೆಟ್ಟಿ, ವೀರಣ್ಣಗೌಡ, ನರಸಣ್ಣ ನಾಯಕ, ಧರ್ಮಣ್ಣ ದೊರೆ, ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ಎಂ.ಸಾಗರ, ಭೀಮಣ್ಣ ಟಪೆದಾರ್, ರಾಮಯ್ಯ ಭೋಯಿ, ಶರಣಪ್ಪ ಜಾಕ್ನಳ್ಳಿ, ಭೀಮರಾಯ ಪೂಜಾರಿ, ಮಲ್ಲನಗೌಡ ಮಾಲಿಪಾಟೀಲ, ಸಯ್ಯದ್ ಪಟೇಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.