ADVERTISEMENT

ಕೋವಿಡ್-19; ಲ್ಯಾಬ್ ಸ್ಥಾಪನೆಗೆ ಕ್ರಮ

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 10 ಮೇ 2020, 16:01 IST
Last Updated 10 ಮೇ 2020, 16:01 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಸುದ್ದಿಗಾರರರೊಂದಿಗೆ ಮಾತನಾಡಿದರು. ಸಿಇಒ ಶಿಲ್ಪಾ ಶರ್ಮಾ, ಎಸ್‌ಪಿ ಋಷಿಕೇಶ ಭಗವಾನ್ ಸೋನವಣೆ ಇದ್ದರು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಸುದ್ದಿಗಾರರರೊಂದಿಗೆ ಮಾತನಾಡಿದರು. ಸಿಇಒ ಶಿಲ್ಪಾ ಶರ್ಮಾ, ಎಸ್‌ಪಿ ಋಷಿಕೇಶ ಭಗವಾನ್ ಸೋನವಣೆ ಇದ್ದರು   

ಯಾದಗಿರಿ: ‘ಕೊರೊನಾ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಜಿಲ್ಲೆಗೆ ಒಂದೊಂದು ಕೋವಿಡ್-19 ಟೆಸ್ಟ್ ಲ್ಯಾಬ್ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ಈ ಮೂಲಕ ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲು ಸೂಚಿಸಿದ ಪ್ರಯುಕ್ತ, ಮುದ್ನಾಳ ಸಮೀಪದ ನೂತನ ಜಿಲ್ಲಾಸ್ಪತ್ರೆಯಲ್ಲಿ ಟೆಸ್ಟ್ ಲ್ಯಾಬ್ ಸ್ಥಾಪನೆಗೆ ಸಿದ್ಧತೆ ನಡೆದಿದೆ’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಕೋವಿಡ್-19 ಟೆಸ್ಟ್ ಪೂರ್ವಭಾವಿಯಾಗಿ ನಡೆಸುವ ಟ್ರೂನ್ಯಾಟ್ (trunaat) ಲ್ಯಾಬ್ ಸ್ಥಾಪನೆಗೆ ಕೂಡ ಸಿದ್ಧತೆ ನಡೆದಿದೆ. ಈ ಲ್ಯಾಬ್‍ಗಳಿಗೆ ಬೇಕಿರುವ ಅಗತ್ಯ ವೈದ್ಯಕೀಯ ಸಲಕರಣೆಗಳು ಸರ್ಕಾರದಿಂದ ಬರಬೇಕಿದೆ’ ಎಂದು ಮಾಹಿತಿ ನೀಡಿದರು.

‘ಕೋವಿಡ್-19 ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆ, ಭೀಮರಾಯನಗುಡಿ ಮತ್ತು ಸುರಪುರದಲ್ಲಿ ವ್ಯಕ್ತಿಗಳ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಶಂಕಿತ ರೋಗಿಗಳಿಗಾಗಿ ನೂತನ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ 32 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಇದ್ದು, ಇನ್ನೂ 100 ಬೆಡ್‍ಗಳ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

ADVERTISEMENT

‘ಬೇರೆ ಜಿಲ್ಲೆಗಳಿಂದ ಯಾದಗಿರಿ ಜಿಲ್ಲೆಗೆ ಮರಳುತ್ತಿರುವ ಕಾರ್ಮಿಕರಿಗೆ ಸೂಕ್ತ ತಪಾಸಣೆ ನಡೆಸಲಾಗುತ್ತಿದೆ. ಮೇ 9ರವರೆಗೆ 363 ಬಸ್‍ಗಳ ಮೂಲಕ ಬಂದವರನ್ನು ಆರೋಗ್ಯ ತಪಾಸಣೆಗೊಳಪಡಿಸಿ, ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಇವರಿಗೆ ಸ್ಟ್ಯಾಂಪ್ ಕೂಡ ಹಾಕಲಾಗುತ್ತಿದೆ. ಇನ್ನು ಹೊರ ರಾಜ್ಯಗಳಿಂದ ಜಿಲ್ಲೆಗೆ ಮರಳಿ ಬಂದವರನ್ನು ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್‍ನಲ್ಲಿ ಇರಿಸಲಾಗುತ್ತಿದೆ. ಸರ್ಕಾರದ ಶಿಷ್ಟಾಚಾರ ಮಾರ್ಗಸೂಚಿ ಅನ್ವಯ ಇವರ ಮಾದರಿಗಳನ್ನು ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಗೆ ಮರಳುವ ಕಾರ್ಮಿಕರು ಅರ್ಜಿ ಸಲ್ಲಿಸಿ:ಲಾಕ್‍ಡೌನ್ ಪರಿಣಾಮದಿಂದ ದೇಶದ ಇತರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕೂಲಿಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಕರ್ನಾಟಕ ರಾಜ್ಯಕ್ಕೆ ಆಗಮಿಸಲು/ ನಿರ್ಗಮಿಸಲು ಸೇವಾಸಿಂಧು ಆನ್‍ಲೈನ್ ವೆಬ್‍ಸೈಟ್: https://sevasindhu.karnataka.gov.in/ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸಿಲುಕಿಕೊಂಡಿರುವ ಕೂಲಿಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ತಮ್ಮ ಸ್ವಂತ ಜಿಲ್ಲೆಗಳಿಗೆ ಹೋಗಲು kspclearpass.idp.mygate.com ವೆಬ್ ಪೋರ್ಟಲ್ ಮುಖಾಂತರ ಇ-ಪಾಸ್‍ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ ಕಂಟ್ರೋಲ್ ರೂಮ್ ಸಂಖ್ಯೆ 08473-253950, ವಾಟ್ಸ್‌ ಆ್ಯಪ್ ಸಂಖ್ಯೆ:94499 33946 ಅಥವಾ 104 ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.