ADVERTISEMENT

3ನೇ ಅಲೆಯಿಂದ ಮಕ್ಕಳನ್ನು ಸಂರಕ್ಷಿಸಲು ಸಮೀಕ್ಷೆ

ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾಶರ್ಮಾ ಅವರಿಂದ ವಿನೂತನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 2:59 IST
Last Updated 4 ಜೂನ್ 2021, 2:59 IST
ಗುರುಮಠಕಲ್‌ ತಾಲ್ಲೂಕಿನ ಕಾಕಲವಾರ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಮಕ್ಕಳ ಸಮೀಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಗುರುಮಠಕಲ್‌ ತಾಲ್ಲೂಕಿನ ಕಾಕಲವಾರ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಮಕ್ಕಳ ಸಮೀಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು   

ಯಾದಗಿರಿ: ‘ಕೋವಿಡ್‌ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿರುವುದರಿಂದ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಕ್ಕಳ ಸಮೀಕ್ಷೆ ಮಾಡಲಾಗುತ್ತದೆ. ಅವುಗಳ ಮೂಲಕ ಮಕ್ಕಳ ಸಮಗ್ರ ಮಾಹಿತಿ ಪಡೆಯಬಹುದಾಗಿದೆ’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾಶರ್ಮಾ ಹೇಳಿದರು.

ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಕಾಕಲವಾರ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಮೀಕ್ಷಾ ಚಾಲನಾ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಲ್ಲಾ ಪಂಚಾಯಿತಿ ಸಿದ್ಧಪಡಿಸಿದ ಸಮೀಕ್ಷಾ ನಮೂನೆಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಸಮೀಕ್ಷಾ ಸಂದರ್ಭದಲ್ಲಿ ವಿಕಲಚೇತನರು, ಕೋವಿಡ್‌ನಿಂದ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾದ ಮಕ್ಕಳಿದ್ದರೆ ಅವರ ಮಾಹಿತಿಯನ್ನು ಸಂಗ್ರಹಿಸಬೇಕು. ಈ ಮಹತ್ವದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ, ಗ್ರಾಮ ಸಮುದಾಯ ಸೇರಿದಂತೆ ಎಲ್ಲರ ಪಾಲ್ಗೊಳ್ಳುವಿಕೆ ಮತ್ತು ಸಹಕಾರ ಅಗತ್ಯವಿದೆ' ಎಂದರು.

ADVERTISEMENT

‘ಮಾಹಿತಿ ಸಂಗ್ರಹದಿಂದ ಹಿಡಿದು ಮಕ್ಕಳನ್ನು ರಕ್ಷಿಸುವ ಮುನ್ನೆಚ್ಚರಿಕೆಯ ಕ್ರಮಗಳು ಮತ್ತು ಪರಿಹಾರೋಪಾಯ ಕ್ರಮಗಳನ್ನು ಚಿಂತಿಸಬೇಕಿದೆ. ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಸಮೀಕ್ಷೆ ಕೈಗೊಳ್ಳಲಿದ್ದು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ನೆರವು ನೀಡಲಿದ್ದಾರೆ’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತನಗೌಡ ಮಾತನಾಡಿ, ಜಿಲ್ಲೆಯ ಮಕ್ಕಳ ಭವಿಷ್ಯದಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತೆಗೆದುಕೊಂಡ ಈ ಸ್ವಾಗತಾರ್ಹ. ಅವರ ನಿಲುವಿಗೆ ಶಿಕ್ಷಣ ಇಲಾಖೆಯ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಮಾತನಾಡಿ, ಕೋವಿಡ್ ಮೂರನೇ ಅಲೆಯ ಬಗ್ಗೆ ತಾತ್ಸಾರಭಾವನೆ ತಾಳದೆ ಈಗಿನಿಂದಲೇ ಎಚ್ಚರ ವಹಿಸಬೇಕಿದೆ. 0-14 ವಯೋಮಾನದ ಮಕ್ಕಳು ಸೂಕ್ಷ್ಮ ಸ್ಥಿತಿಯವರು, ಆದ್ದರಿಂದ ಕೋವಿಡ್‌ ಬಾಧೆಗೆ ಒಳಗಾಗುವ ಮುನ್ನವೇ ಅವರನ್ನು ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಕೋವಿಡ್ ಎರಡನೇ ಅವಧಿಯಲ್ಲಿ ಶೇ 8ರಷ್ಟು ಮಕ್ಕಳು ಸೋಂಕಿಗೊಳಗಾಗಿದ್ದರೂ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಲಿಲ್ಲ. ಸೋಂಕಿತ ಮಕ್ಕಳನ್ನು ಮನಗಳಲ್ಲಿಯೇ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ಮಾಡಿಸಲಾಯಿತು ಎಂದು ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯಾದಗಿರಿ ಹಾಗೂ ಗುರುಮಠಕಲ್ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ, ಸಮೀಕ್ಷಾ ಕಾರ್ಯಕ್ರಮದ ರೂಪು-ರೇಷೆ, ಗ್ರಾಮ ಪಂಚಾಯಿತಿಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ನಂತರ ನಡೆದ ಸಮೀಕ್ಷಾ ಕಾರ್ಯಕ್ರಮದಲ್ಲಿ ಸಿಇಒ ಶಿಲ್ಪಾಶರ್ಮಾ ಸ್ವತಃ ಪಾಲ್ಗೊಂಡರಲ್ಲದೆ ಗರ್ಭಿಣಿ ಪವಿತ್ರಾ ಅವರ ಮನೆಗೆ ತೆರಳಿ ಮಾತೃವಂದನಾ ಯೋಜನೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಸ್ಥಳದಲ್ಲಿದ್ದ ಸಿಡಿಪಿಒ ಅವರಿಗೆ ಮಾತೃವಂದನಾ ಯೋಜನೆಯಡಿ ಅವರಿಗೆ ಸಿಗಬೇಕಾದ ಪ್ರಸವಪೂರ್ವ ಮತ್ತು ಪ್ರಸವೋತ್ತರ ಸಹಾಯಧನ ಮಂಜೂರು ಮಾಡಲು ಸೂಚಿಸಿದರು.

ಕಾಕಲವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಸತೀಶ, ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಗುರುನಾಥ ಗೌಡಪ್ಪನವರ್ ವೇದಿಕೆಯಲ್ಲಿದ್ದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹನುಮಂತರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಭೀಮರಾಯ, ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಇದ್ದರು.

‌ಶಿಕ್ಷಕಿ ಗಾಯತ್ರಿ ಪ್ರಾರ್ಥಿಸಿದರೆ, ಶಂಕರ ನಿರೂಪಿಸಿದರು. ಕಾಕಲವಾರ ಗ್ರಾಮ ಪಂಚಾಯಿತಿಯ ಪಿಡಿಒ ಮಲ್ಲಾರೆಡ್ಡಿ ಕಾರ್ಯಕ್ರಮ ಆಯೋಜಿಸಿದ್ದರು.

‘ಶೇ 27ರಷ್ಟಿರುವ ಮಕ್ಕಳ ಸಂಖ್ಯೆ’

ಜಿ.ಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಮಾತನಾಡಿ, ಜಿಲ್ಲೆಯಲ್ಲಿ 0-14 ವರ್ಷ ವಯೋಮಾನದ ಮಕ್ಕಳ ಸಂಖ್ಯೆ ಶೇ 27 ರಷ್ಟಿದ್ದು ಆ ಸಂಖ್ಯೆಯ ನಿಖರತೆ ಕಂಡು ಹಿಡಿದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಈ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಆರೊಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಜೊತೆಗೂಡಿ ಈ ಸಮೀಕ್ಷಾ ಕಾರ್ಯದಲ್ಲಿ ಕೆಲಸ ಮಾಡುತ್ತಿವೆ ಎಂದು ತಿಳಿಸಿ ಸಮೀಕ್ಷಾ ನಮೂನೆಗಳನ್ನು ಭರ್ತಿ ಮಾಡುವ ಬಗ್ಗೆ ವಿವರಿಸಿದರು.

ಜೂನ್ 5ರಿಂದ ಜೂನ್ 25 ರ ವರೆಗೆ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲಿಯೂ 14 ವರ್ಷ ದೊಳಗಿನ ಮಕ್ಕಳ ಸಮೀಕ್ಷೆ ನಡೆಸಲಾಗುತ್ತದೆ.

ಶಿಲ್ಪಾಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.