ADVERTISEMENT

ಸುರಪುರ: ವೃದ್ಧೆಯ ಮನವೊಲಿಸಿ ಕೋವಿಡ್ ಲಸಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 4:41 IST
Last Updated 1 ಡಿಸೆಂಬರ್ 2021, 4:41 IST
ಸುರಪುರ ತಾಲ್ಲೂಕಿನ ಕರ್ನಾಳ ಗ್ರಾಮದಲ್ಲಿ ಮಂಗಳವಾರ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ವಾಗ್ವಾದಕ್ಕೆ ಇಳಿದಿದ್ದ ಮಹಿಳೆಗೆ ಲಸಿಕೆ ಹಾಕಿಸಲು ಅಧಿಕಾರಿಗಳು ಯಶಸ್ವಿಯಾದರು
ಸುರಪುರ ತಾಲ್ಲೂಕಿನ ಕರ್ನಾಳ ಗ್ರಾಮದಲ್ಲಿ ಮಂಗಳವಾರ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ವಾಗ್ವಾದಕ್ಕೆ ಇಳಿದಿದ್ದ ಮಹಿಳೆಗೆ ಲಸಿಕೆ ಹಾಕಿಸಲು ಅಧಿಕಾರಿಗಳು ಯಶಸ್ವಿಯಾದರು   

ಸುರಪುರ (ಯಾದಗಿರಿ ಜಿಲ್ಲೆ): ‘ಸೂಜಿ ಹಾಕ್ಸಕೋರಿ ಅಂತ ಯಾಕ ಜಬರದಸ್ತಿ ಮಾಡ್ತೀರಿ. ನಮಗೇನಾದ್ರು ಆದ್ರ ನೀವು ಜವಾಬ್ದಾರಿ ತಗತಿರೇನ?. ನೀವೂ ಏನ್‌ ಬೇಕಾದ್ದ ಮಾಡಕ್ಕೊಳ್ರಿ. ಸೂಜಿ ಹಾಕ್ಸೊಳ್ಳಂಗಿಲ್ಲ.........’ ಈ ಜಟಾಪಟಿ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕರ್ನಾಳ ಗ್ರಾಮದಲ್ಲಿ ಮಂಗಳವಾರ ನಡೆಯಿತು.

ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡಾಗ ನಡೆದ ಘಟನೆಯಿದು.

ಲಸಿಕೆ ನಿರಾಕರಿಸಿದ ಮಹಿಳೆ ಮಂಗಳವಾರ ನನಗೆ ದೇವರು ಬರುತ್ತದೆ ಎಂದು ಕಿರುಚಾಡಿದರು. ಕೊನೆಗೂ ಮನವೊಲಿಸಿ ಅಧಿಕಾರಿಗಳು ಆಕೆಗೆ ಲಸಿಕೆ ಹಾಕಿದರು. ಲಸಿಕೆ ಪಡೆದುಕೊಂಡು ನಂತರ ಬಿಕ್ಕಳಿಕೆ ನಾಟಕವಾಡಿದ ದೇವರು ಬಂದಂತೆ ನಟಿಸಿದರು.

ADVERTISEMENT

ತಾಲ್ಲೂಕಿನ ಚೌಡೇಶ್ವರಿಹಾಳ, ಕರ್ನಾಳ, ಹಾಲಗೇರಿ, ಶಖಾಪುರ ಗ್ರಾಮಕ್ಕೆ ತಂಡ ಭೇಟಿ ನೀಡಿ ಲಸಿಕೆ ನಿರಾಕರಿಸುತ್ತಿರುವ 200 ಜನರ ಪೈಕಿ 20 ಜನರಿಗೆ ಲಸಿಕೆ ಹಾಕಲು ಯಶಸ್ವಿಯಾಯಿತು. ಉಳಿದವರು ಬೇರೆ ಊರಿಗೆ ಮತ್ತು ಹೊಲಕ್ಕೆ ಹೋಗಿದ್ದರು. ಶೀಘ್ರದಲ್ಲಿ ಉಳಿದವರಿಗೆ ಲಸಿಕೆ ಹಾಕಿಸಿ ಮತ್ತು ಗುಳೆ ಹೋದ ಕಾರ್ಮಿಕರು ಲಸಿಕೆ ಹಾಕಿಸಿಕೊಂಡ ಬಗ್ಗೆ ಆಯಾ ನಗರದ ವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ ತರಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಡಿಎಚ್‌ಒ ಡಾ. ಇಂದುಮತಿ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಟಿಎಚ್‌ಒಡಾ. ರಾಜಾ ವೆಂಕಪ್ಪನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.