ADVERTISEMENT

ಪತ್ನಿ ಹೆಸರಿನಲ್ಲಿದ್ದ ಮನೆ ಹಸ್ತಾಂತರಕ್ಕಾಗಿ ಕೊಲೆ ಸಂಚು

ನಾರಾಯಣಪುರ; ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣ, ನಾಲ್ವರ ಸಾವಿಗೆ ಕಾರಣವಾದ ಆಸ್ತಿ ವಿವಾದ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:08 IST
Last Updated 1 ಜುಲೈ 2022, 2:08 IST
ಶರಣಪ್ಪ
ಶರಣಪ್ಪ   

ಯಾದಗಿರಿ: ಪತ್ನಿ ಹೆಸರಿನಲ್ಲಿದ್ದ ಮನೆ ಹಸ್ತಾಂತರ ಮಾಡದಿದ್ದಕ್ಕೆ ಆರೋಪಿ ಶರಣಪ್ಪ ಈರಣ್ಣ ಕೊಲೆ ಸಂಚು ರೂಪಿಸಿ ನಾಲ್ವರನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ನಾರಾಯಣಪುರ ಛಾಯಾ ಕಾಲೊನಿಯಲ್ಲಿ ಬುಧವಾರ ಮಾತುಕತೆಗೆ ಕರೆಸಿ ನಾಲ್ವರನ್ನು ಕೂಡಿಹಾಕಿ ಪೆಟ್ರೋಲ್‌ ಸುರಿದ ಘಟನೆಯಿಂದಈ ವಿಷಯಹೊರಬಂದಿದೆ.

16 ವರ್ಷಗಳ ಹಿಂದೆ ಮದುವೆ: ಮುದ್ದೇಬಿಹಾಳ ತಾಲ್ಲೂಕಿನ ಗಾಳಪೂಜಿ ಗ್ರಾಮದ ಶರಣಪ್ಪ ಈರಣ್ಣ ಜತೆ ಹುಲಿಗೆಮ್ಮ ಅವರಿಗೆ 16 ವರ್ಷಗಳಿಂದ ವಿವಾಹವಾಗಿದೆ. ಇಬ್ಬರು ಮಕ್ಕಳಿದ್ದಾರೆ. ಶರಣಪ್ಪ ತಂದೆ ಈರಣ್ಣ ನಾರಾಯಣಪುರದಲ್ಲಿ ನೌಕರಿ ಇದ್ದರಿಂದ ದಂಪತಿ ಇಲ್ಲಿಯೇ ಬಂದು ವಾಸವಾಗಿದ್ದರು. 12 ವರ್ಷಗಳ ಹಿಂದೆ ಹುಲಿಗೆಮ್ಮ ಅವರಿಗೆ ಬೆಂಗಳೂರಿನ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್‌ ಆಗಿ ನೌಕರಿ ಸಿಕ್ಕಿದೆ. 2016ರ ನಂತರ ವರ್ಗಾವಣೆಯಾಗಿಲಿಂಗಸೂಗೂರುಗೆ ಬಂದಿದ್ದಾರೆ. ನಾರಾಯಣಪುರದಲ್ಲಿ ಮನೆ ಕಟ್ಟಿಸಿದ್ದು, ಅದನ್ನು ಹುಲಿಗೆಮ್ಮ ಹೆಸರಿನಲ್ಲಿದೆ. 2 ವರ್ಷಗಳಿಂದ ಆ ಮನೆಯನ್ನು ತನ್ನ ಹೆಸರಿಗೆ ಬರೆಯುವಂತೆ ಪೀಡಿಸುತ್ತಿದ್ದ. ಆದರೆ, ಹುಲಿಗೆಮ್ಮ ಇದಕ್ಕೆ ಸೊಪ್ಪು ಹಾಕದ ಕಾರಣ ವಿಚ್ಛೇದನ ನೀಡುವಂತೆ ಆಗಾಗ ಜಗಳವಾಡುತ್ತಿದ್ದ. ಇದನ್ನು ಹುಲಿಗೆಮ್ಮ ತವರು ಮನೆಯವರಿಗೆ ತಿಳಿಸಿ, ಲಿಂಗಸೂಗೂರುನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದಾರೆ.

ADVERTISEMENT

ಮೊದಲೇ ನನ್ನ ಹೆಸರಿಗೆ ಮನೆ ಬರೆದಿಲ್ಲ ಎಂದು ದ್ವೇಷ ಇಟ್ಟುಕೊಂಡಿದ್ದ ಆರೋಪಿ ಶರಣಪ್ಪ ಕೊಲೆ ಮಾಡುವ ಉದ್ದೇಶದಿಂದಲೇ 5 ಲೀಟರ್‌ ಪೆಟ್ರೋಲ್‌ ಬಾಟಲಿಗಳನ್ನು ಸಂಗ್ರಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾಜಿ ಪಂಚಾಯಿತಿಗೆ ಕರೆದು ನಾಲ್ವರನ್ನು ತಮ್ಮ ಮನೆಯ ಮಹಡಿಯಲ್ಲಿ ಕೂಡಿ ಹಾಕಿ ಹಿರಿಯರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೊರಗಡೆಯಿಂದ ಬೀಗ ಹಾಕಿದ್ದಾರೆ. ಮೊದಲಿಗೆ ಎರಡು ಲೀಟರ್‌ ಪೆಟ್ರೋಲ್ ಸುರಿದಿದ್ದಾನೆ. ನಂತರ ಒಂದೊಂದು ಪೆಟ್ರೋಲ್‌ ಲೀಟರ್‌ ಬಾಟಲಿಯನ್ನು ಕಿಟಕಿಯೊಳಗಿಂದ ಎಸೆದು ಬೆಂಕಿ ಹಚ್ಚಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಮಧ್ಯಾಹ್ನ ಇಬ್ಬರು, ತಡರಾತ್ರಿ ಇಬ್ಬರು ಸೇರಿದಂತೆ ಬೆಂಕಿಯ ಕೆನ್ನಾಲಿಗೆ ನಾಲ್ಕು ಜನ ಸಾವನ್ನಪ್ಪಿದ್ದಾರೆ.

ಆಟೊ ಡ್ರೈವರ್‌ ಆಗಿದ್ದ ಆರೋಪಿ ಶರಣಪ್ಪನಿಗೆ ಮಾವ ಸಿದ್ರಾಮಪ್ಪ ಟಾಟಾ ಎಸಿ ವಾಹನ ಕೊಡಿಸಿದ್ದರು. ಮನೆ ಬಾಡಿಗೆ ನೀನೇ ತೆಗೆದುಕೊ, ಮಗಳ ಹೆಸರಿನಲ್ಲಿ ಮನೆ ಇರಲಿ ಎಂದು ಬುದ್ಧಿವಾದ ಹೇಳಿದ್ದರು. ಆದರೆ, ಕೊಲೆ ಮಾಡುವ ಉದ್ದೇಶದಿಂದ ಆರೋಪಿ ಪೆಟ್ರೋಲ್‌ ಬಂಕ್‌ನಲ್ಲಿ 5 ಲೀಟರ್‌ ಬಾಟಲಿಗಳಲ್ಲಿ ಪೆಟ್ರೋಲ್‌ ಖರೀದಿಸಿದ್ದನು.

ಹಲವು ಪ್ರಕರಣಗಳು ದಾಖಲು: ಬೆಂಕಿ ಹಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶರಣಪ್ಪ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದೆ. ಕಲಂ 342, 307, 302, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಸುರಪುರ ನ್ಯಾಯಾಲಯದಲ್ಲಿ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.