ADVERTISEMENT

ಯಾದಗಿರಿ: ಬೆಳೆ ಹಾನಿ; ₹ 124 ಕೋಟಿ ಪರಿಹಾರ ನಿಗದಿ

ಮಲ್ಲಿಕಾರ್ಜುನ ನಾಲವಾರ
Published 21 ನವೆಂಬರ್ 2025, 6:59 IST
Last Updated 21 ನವೆಂಬರ್ 2025, 6:59 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಯಾದಗಿರಿ: ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಸುರಿದ ಅಧಿಕ ಮಳೆ ಹಾಗೂ ಭೀಮಾ ನದಿಯ ಪ್ರವಾಹದಿಂದಾಗಿ ಹಾನಿಗೀಡಾದ ರೈತರ ಬೆಳೆಗಳಿಗೆ ರಾಜ್ಯ ಸರ್ಕಾರವು‌ ₹ 124 ಕೋಟಿ ಪರಿಹಾರ ಧನ ನಿಗದಿ ಮಾಡಿದಾಗಿ ಗೊತ್ತಾಗಿದೆ

ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿದ್ದವು. ಜಿಲ್ಲೆಯಲ್ಲಿ 1.42 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿಯೂ ಸಲ್ಲಿಸಿದ್ದವು. ಸುಮಾರು ₹ 178 ಕೋಟಿ ಪರಿಹಾರಕ್ಕೆ ಕೋರಲಾಗಿತ್ತು.

ಹಾನಿಗೀಡಾದ ಬೆಳೆಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಮಾರ್ಗಸೂಚಿ ಅನ್ವಯ ₹ 124 ಕೋಟಿಯಷ್ಟು ಪರಿಹಾರಧನಕ್ಕೆ ಅನುಮೋದನೆ ಕೊಟ್ಟಿದೆ. ಪರಿಹಾರದ ಮೊತ್ತ ಜಿಲ್ಲಾಡಳಿತದ ಖಜಾನೆಗೆ ವರ್ಗಾವಣೆ ಆಗವುದು ಬಾಕಿ ಇದೆ.

ADVERTISEMENT

‘ಬೆಳೆಹಾನಿ ಪರಿಹಾರದ ಮೊತ್ತ ನಿಗದಿಯಾಗಿದ್ದು, ಆ ಹಣವು ರಾಜ್ಯ ಖಜಾನೆ–2ರಿಂದ ಜಿಲ್ಲಾಡಳಿತದ ಖಾತೆಗೆ ಬರಬೇಕಿದೆ. ಒಮ್ಮೆ ಜಿಲ್ಲಾಡಳಿತದ ಖಾತೆಗೆ ಬಂದ ಮೇಲೆ, ಆ ಹಣಕ್ಕೆ ಬಿಲ್ ಮಾಡಿ ಜಿಲ್ಲಾ ಖಜಾನೆಗೆ ವರ್ಗಾಯಿಸಲಾಗುತ್ತದೆ. ಅಲ್ಲಿಂದ ಬೆಳೆಗಳನ್ನು ಕಳೆದುಕೊಂಡು ಪಟ್ಟಿಯಲ್ಲಿ ಇರುವ ಅರ್ಹ ರೈತರ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಆಗಲಿದೆ. ಹಣ ವರ್ಗಾವಣೆಯು ಕೊನೆಯ ಹಂತದಲ್ಲಿದ್ದು, ಒಂದೆರಡು ದಿನಗಳಲ್ಲಿ ಬರಬಹುದು’ ಎಂದು ಜಿಲ್ಲಾಧಿಕಾರಿ ಕಚೇರಿಯ ನೌಕರರೊಬ್ಬರು ಮಾಹಿತಿ ನೀಡಿದರು.     

‘ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ, ಸಜ್ಜೆ, ತೊಗರಿ, ಹೆಸರು, ಉದ್ದು, ಶೇಂಗಾ, ಸೂರ್ಯಕಾಂತಿ, ಹತ್ತಿ ಸೇರಿ 4.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಅವುಗಳ ಪೈಕಿ 1.61 ಲಕ್ಷ ಹೆಕ್ಟೇರ್‌ನ ಬೆಳೆ ಹಾನಿಯಾಗಿದ್ದು ವರದಿಯಲ್ಲಿ ಉಲ್ಲೇಖವಾಗಿತ್ತು. ಪಹಣಿಗಳ ಡಬಲ್, ಮಳೆಯಾಶ್ರಿತ ಪ್ರದೇಶದಲ್ಲಿ ಭತ್ತ ಹಾನಿಯಾಗಿದ್ದಾಗಿ ನಮೂದನಂತಹ ಇತರೆ ಕಾರಣಗಳಿಂದಾಗಿ ಸುಮಾರು 17 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಕಡಿತವಾಗಿದೆ’ ಎಂದರು.

ಸಮೀಕ್ಷೆ, ಡಾಟಾ ಎಂಟ್ರಿಯಲ್ಲಿ ವಿಳಂಬ: ‘ಆಗಸ್ಟ್‌ ತಿಂಗಳಿಂದಲೇ ಜಂಟಿ ಸಮೀಕ್ಷೆ ಕೈಗೊಂಡು ಅಂತಿಮ ವರದಿ ಸಿದ್ಧಪಡಿಸಿ ಸಲ್ಲಿಸುವ ವೇಳೆಗೆ ಭೀಮಾ ನದಿ ಪ್ರವಾಹ ಆವರಿಸಿತ್ತು. ಹಾನಿಯ ಪ್ರಮಾಣವೂ ಹೆಚ್ಚಾಗಿದ್ದರಿಂದ ಅಧಿಕಾರಿಗಳು ಮತ್ತೊಮ್ಮೆ ಸಮೀಕ್ಷೆಗೆ ಇಳಿದರು. ಲಕ್ಷಾಂತರ ರೈತರ ಹಾಗೂ ಅವರು ಜಮೀನಿನ ಡಾಟಾ ಎಂಟ್ರಿಗೂ ಸಮಯ ತಗುಲಿತ್ತು. ಹಾಗಾಗಿ, ಪರಿಹಾರ ನಿಗದಿಯಲ್ಲಿ ತಡವಾಗಿತ್ತು. ಅಂತಿಮವಾಗಿ ಪರಿಹಾರದ ಮೊತ್ತ ನಿಗದಿಯಾಗಿದೆ. ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಜಮೆಯಾಗಲಿದೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

ಪರಿಹಾರ ಎಷ್ಟು?: ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಮಳೆ ಆಶ್ರಿತ ಬೆಳೆಗಳಿಗೆ ಒಂದು ಹೆಕ್ಟೇರ್‌ಗೆ ₹ 8,500, ನೀರಾವರಿ ಬೆಳೆಗಳಿಗೆ ಒಂದು ಹೆಕ್ಟೇರ್‌ಗೆ ₹ 17 ಸಾವಿರ ಹಾಗೂ ಮಾವು, ಹುಣಸೆಹಣ್ಣು, ಪೇರಲ ಹಣ್ಣಿನಂತಹ ಬಹು ವಾರ್ಷಿಕ ಬೆಳೆಗಳ ಒಂದು ಹೆಕ್ಟೇರ್‌ಗೆ ₹ 22,500ರಂತೆ ಬೆಳೆ ಪರಹಾರ ಧನ ಲಭ್ಯವಾಗಲಿದೆ.

ಎನ್‌ಡಿಆರ್‌ಎಫ್‌ ಅಡಿ ₹ 124 ಕೋಟಿ ಪರಿಹಾರ ಮೊತ್ತ ನಿಗದಿಯಾಗಿದೆ. ರಾಜ್ಯ ಸರ್ಕಾರ ಘೋಷಿಸಿರುವ ಹೆಚ್ಚುವರಿ ಪರಿಹಾರದ ಮೊತ್ತವು ನಂತರದ ಕಂತಿನಲ್ಲಿ ಬರಲಿದೆ.
– ರಮೇಶ ಕೋಲಾರ, ಹೆಚ್ಚುವರಿ ಜಿಲ್ಲಾಧಿಕಾರಿ

320 ರೈತರು ಅನರ್ಹ

ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾದ 174751 ರೈತರಿಗೆ ಪರಿಹಾರ ಧನ ಪಾವತಿಸಲು ಪಟ್ಟಿ ಅಂತಿಮಗೊಳಿಸಲಾಗಿತ್ತು. ಇದನ್ನು ದೃಢೀಕರಿಸುವಂತೆ ಭೂಮಿ ಉಸ್ತುವಾರಿ ಕೋಶದಿಂದ ಪರಿಹಾರ ಇನ್‌ಪುಟ್ ಸಬ್ಸಿಡಿ ಗ್ರೀನ್‌ ಲಿಸ್ಟ್‌ ಅನ್ನು ತಹಶೀಲ್ದಾರ್‌ಗಳ ಕಚೇರಿ ಕಳುಹಿಸಲಾಗಿತ್ತು. ಆರು ತಾಲ್ಲೂಕುಗಳ ತಹಶೀಲ್ದಾರ್‌ಗಳು ಆ ಪಟ್ಟಿಯನ್ನು ಪರಿಶೀಲನೆ ಮಾಡಿದ್ದರು. ಡಬಲ್ ಪಹಣಿ ಮಳೆಯಾಶ್ರಿತ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಿ ಬೆಳೆಹಾನಿಯಾಗಿದ್ದಾಗಿ ತೋರಿಸಿದ್ದ 320 ರೈತರನ್ನು ಅನರ್ಹಗೊಳಿಸಿ ತೆಗೆದುಹಾಕಿದ್ದರು. ಒಟ್ಟು 174751 ರೈತರಲ್ಲಿ 174431 ರೈತರನ್ನು ಅರ್ಹರೆಂದು ದೃಢೀಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.