ಕಲಬುರಗಿ: ‘18 ವರ್ಷ ದಾಟಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾರರು ಪ್ರಜಾಪ್ರಭುತ್ವದ ಹೃದಯವಿದ್ದಂತೆ’ ಎಂದು ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಗ್ರಾಮೀಣ ಪ್ರದೇಶ ಮತ್ತು ಕೊಳೆಗೇರಿಗಳಿಗಿಂತ ವಿದ್ಯಾವಂತರಿರುವ ಪ್ರದೇಶಗಳಲ್ಲಿ ಮತದಾನದ ಶೇಕಡಾವಾರು ಕಡಿಮೆ ಇರುವುದು ದುರದೃಷ್ಟಕರ. ಮತದಾನ ಕೇವಲ ಹಕ್ಕಲ್ಲ, ಜವಾಬ್ದಾರಿ. ಮತದಾನದ ದಿನದಂದು ಪಿಕ್‌ನಿಕ್ ಹೋಗಬೇಡಿ, ಬದಲಿಗೆ ಸರತಿ ಸಾಲಿನಲ್ಲಿ ನಿಂತು ಸರಿಯಾದ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಈಗ ಚುನಾವಣೆಗಳು ಮೊದಲಿಗಿಂತ ಹೆಚ್ಚು ಮುಕ್ತ ಮತ್ತು ನ್ಯಾಯಯುತ ಆಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು. ಮತದಾರರು ಹೆಚ್ಚು ಜಾಗೃತರು ಮತ್ತು ಬುದ್ಧಿವಂತರಾಗುತ್ತಿರುವುದು ಭಾರತೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಸಂಕೇತವಾಗಿದೆ’ ಎಂದು ಹೇಳಿದರು.
ಸಿಯುಕೆ ಕಾನೂನು ವಿಭಾಗದ ವೃತ್ತಿ ಅನುಭವದ ಪ್ರಾಧ್ಯಾಪಕ ಸುಭಾಷ್‌ಚಂದ್ರ ರಾಥೋಡ ಮಾತನಾಡಿ, ‘ಚುನಾವಣೆಯಲ್ಲಿ ಮತದಾರರ ಪಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಏಕೆಂದರೆ ಅನೇಕ ಸ್ವಾರ್ಥಯುತ ವಿಷಯಗಳು ಚುನಾವಣೆಯಲ್ಲಿ ಪಾತ್ರ ವಹಿಸುತ್ತಿವೆ. ಚುನಾವಣೆಗಳನ್ನು ಹೆಚ್ಚು ಮುಕ್ತ ಮತ್ತು ನ್ಯಾಯಯುತವಾಗಿಸಲು ಪ್ರತಿ 5 ವರ್ಷಗಳಿಗೊಮ್ಮೆ ಹೊಸ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಬೇಕು. ಪಕ್ಷಮುಕ್ತ ಚುನಾವಣೆಗಳನ್ನು ಮಾಡಬೇಕು. ವಿದ್ಯಾವಂತ ಯುವಕರು ಪ್ರಜಾಪ್ರಭುತ್ವದ ಶಕ್ತಿ. ಎಲ್ಲ ವಿದ್ಯಾರ್ಥಿಗಳು ಮತದಾರರಾಗಿ ನೋಂದಾಯಿಸಿಕೊಳ್ಳಬೇಕು. ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಲು ತಪ್ಪದೆ ಮತ ಚಲಾಯಿಸಬೇಕು’ ಎಂದು ಹೇಳಿದರು.
ವಿದ್ಯಾರ್ಥಿ ಕಲ್ಯಾಣ ಡೀನ್ ಪ್ರೊ. ಬಸವರಾಜ ಕುಬಕಡ್ಡಿ ಹಾಗೂ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಮತ್ತು ಸ್ವೀಪ್ ನೋಡಲ್ ಅಧಿಕಾರಿ ಗಣಪತಿ ಬಿ. ಸಿನ್ನೋರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶೈಲಜಾ ಕೊನೆಕ ನಿರೂಪಿಸಿದರು. ಪ್ರೊ.ಚನ್ನವೀರ ಆರ್.ಎಂ., ಪ್ರೊ. ಜಿ.ಆರ್. ಅಂಗಡಿ, ಪ್ರೊ.ದೇವರಾಜಪ್ಪ, ಪ್ರೊ.ವಿಜಯೇಂದ್ರ ಪಾಂಡೆ, ಪ್ರೊ. ವೀರೇಶ ಕಸಬೇಗೌಡರ, ಪಿ.ಎಸ್. ಕಟ್ಟಿಮನಿ, ಜೋಹೈರ್, ಡೀನ್‌ಗಳು, ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.