ADVERTISEMENT

ವಿಮೋಚನಾ ಹೋರಾಟದ ನೆನಪು: ವೃತ್ತಿಯಲ್ಲಿ ಕೃಷಿಕರು, ಪ್ರವೃತ್ತಿಯಲ್ಲಿ ಹೋರಾಟಗಾರರು

ನಿಜಾಮರ ಕಪಿಮುಷ್ಠಿಯ ವಿರುದ್ಧ ಸಮರ ಸಾರಿದ ಯಾದಗಿರಿ ತಾಲ್ಲೂಕು ವೀರರು

ಬಿ.ಜಿ.ಪ್ರವೀಣಕುಮಾರ
Published 12 ಸೆಪ್ಟೆಂಬರ್ 2022, 22:30 IST
Last Updated 12 ಸೆಪ್ಟೆಂಬರ್ 2022, 22:30 IST
ವಿಶ್ವನಾಥರೆಡ್ಡಿ ಮುದ್ನಾಳ
ವಿಶ್ವನಾಥರೆಡ್ಡಿ ಮುದ್ನಾಳ   

ಯಾದಗಿರಿ: ದೇಶದ ಸ್ವಾತಂತ್ರ್ಯವಾದ ನಂತರವೂ ಹೈದರಾಬಾದ್ ಕರ್ನಾಟಕ ಪ್ರಾಂತ್ಯ ನಿಜಾಮನ ಕಪಿಮುಷ್ಠಿಯಿಂದ ಹೊರ ಬರಲು 13 ತಿಂಗಳು ಬೇಕಾಯಿತು. ಇದಕ್ಕಾಗಿ ಯಾದಗಿರಿ ತಾಲ್ಲೂಕಿನ ಹೋರಾಟಗಾರರು ವೃತ್ತಿಯಲ್ಲಿ ಕೃಷಿಕರಾಗಿದ್ದರೂ ಪ್ರವೃತ್ತಿಯಲ್ಲಿ ವಿಮೋಚನಾ ಹೋರಾಟಗಾರರಾಗಿ ರೂಪುಗೊಳ್ಳಬೇಕಾಯಿತು.

ಸುಮಾರು 200 ವರ್ಷ ಬ್ರಿಟಿಷರ ಕಪಿಮುಷ್ಠಿಯಲ್ಲಿ ಬದುಕಿದ ಜನರಿಗೆ ಸ್ವಾತಂತ್ರ್ಯ ನಂತರ ನಿಜಾಮನ ಗುಲಾಮಗಿರಿಯಿಂದ ಬದುಕುವಂತಾಗಿತ್ತು. ನಿಜಾಮ ಸರ್ಕಾರದ ರಜಾಕಾರರ ಬಲವಂತದ ಹೇರಿಕೆ ಸಹಿಸದ ಜನ ದಂಗೆ ಎದ್ದರು.

ನಿಜಾಮ ಸರ್ಕಾರದ ವಿರುದ್ಧ ಹೋರಾಟಗಾರರ ಜೊತೆ ಜನರು ತಿರುಗಿ ಬಿದ್ದರು. ಹೈದರಾಬಾದ್ ಸಂಸ್ಥಾನದಲ್ಲಿ ಈ ಚಳವಳಿ ಕ್ರಾಂತಿ ಸ್ವರೂಪ ಪಡೆಯಿತು. ನಿಜಾಮನ ಸೈನ್ಯ, ಪೊಲೀಸ್ ಮತ್ತು ರಜಾಕಾರರ ವಿರುದ್ಧ ಹೋರಾಟ ನಡೆಸಿದರು‌.

ADVERTISEMENT

ಹೈದರಾಬಾದ್ ಕರ್ನಾಟಕ ಪ್ರದೇಶ ಒಳಗೊಂಡ ಅಂದಿನ ಕಲಬುರಗಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ವಿಮೋಚನಾ ಸೇನಾನಿಗಳು ಕಾರ್ಯ ನಿರ್ವಹಿಸುತ್ತಿದ್ದರು. ದಿ. ವಿಶ್ವನಾಥರೆಡ್ಡಿ ಮುದ್ನಾಳ, ಕೋಲೂರು ಮಲ್ಲಪ್ಪ, ವಿರೂಪಾಕ್ಷಪ್ಪ, ಮಲ್ಲಣ್ಣ ಅಂಬಿಗೇರ, ವಿದ್ಯಾಧರ ಗುರೂಜಿ, ಚಂಡ್ರಿಕಿ ಜಗನ್ನಾಥರಾವ, ಚಟ್ನಳ್ಳಿ ವೀರಣ್ಣ, ಈಶ್ವರಲಾಲ ಮುಂತಾದ ಹೋರಾಟಗಾರರು ಈ ಭಾಗದಿಂದ ಮುಂಚೂಣಿಯಲ್ಲಿದ್ದರು.

ಅಂದಿನ ಬಹುತೇಕ ಹೋರಾಟಗಾರರು ಕೃಷಿ ಕುಟುಂಬದಲ್ಲಿ ಇದ್ದುಕೊಂಡೇ ಸಮಯ ಸಿಕ್ಕಾಗ ಹೋರಾಟದ ರೂಪುರೇಷೆ ರೂಪಿಸುತ್ತಿದ್ದರು. ಬೆಳಿಗ್ಗೆ ಅಥವಾ ಸಂಜೆ ವೇಳೆ ಯೋಜನೆ ರೂಪಿಸಿಕೊಂಡು, ಹೋರಾಟಕ್ಕೆ ಇಳಿಯುತ್ತಿದ್ದರು.

ವಿಶ್ವನಾಥರೆಡ್ಡಿ ಮುದ್ನಾಳ: ಕೃಷಿಕ ಕುಟುಂಬದಲ್ಲಿ 1926 ಡಿಸೆಂಬರ್ 3ರಂದು ದಿ. ರಾಚನಗೌಡರ ಮೊದಲನೇ ಪುತ್ರನಾಗಿ ವಿಶ್ವನಾಥರೆಡ್ಡಿ ಮುದ್ನಾಳ ಜನಿಸಿದರು. ವೃತ್ತಿಯಲ್ಲಿ ವ್ಯಾಪಾರಸ್ಥರಾದರೂ ಪ್ರವೃತ್ತಿಯಲ್ಲಿ ದೇಶಪ್ರೇಮ, ಹೋರಾಟಗಾರರು ಆಗಿದ್ದರು. ಕಾಲೇಜಿನಲ್ಲಿ ಓದುವ ದಿನಗಳಲ್ಲಿಯೇ ಅವರು ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ತೊಡಗಿದರು. 1947 ಆಗಸ್ಟ್ 7ರಂದು ರಜಾಕಾರರ ವಿರುದ್ಧ ತಿರುಗಿ ಬಿದ್ದು, ರಾಷ್ಟ್ರಧ್ವಜದೊಂದಿಗೆ ಮೆರವಣಿಗೆ ನಡೆಸಿದರು. ನಂತರ ಶಾಸಕರಾಗಿ ಚುನಾಯಿತರಾದರು. ಸಚಿವರಾಗಿಯು ಕಾರ್ಯನಿರ್ವಹಿಸಿದ್ದರು.

ಮಲ್ಲಣ್ಣ ಅಂಬಿಗೇರ: ಮಲ್ಲಣ್ಣ ಅಂಬಿಗರು ಯಾದಗಿರಿ ನಗರದವರು. ವೃತ್ತಿಯಲ್ಲಿ ಕೃಷಿಕರಾಗಿದ್ದ ಅವರು ಪ್ರವೃತ್ತಿಯಲ್ಲಿ ಹೋರಾಟಗಾರರು ಆಗಿದ್ದರು. ರಜಾಕಾರರ ವಿರುದ್ಧ ನಿಂತು ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು. ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದರು.

ಕೋಲೂರು ಮಲ್ಲಪ್ಪ: ಹೈದರಾಬಾದ್‌ ಕರ್ನಾಟಕದ ಗಾಂಧಿ ಎಂದೇಕೋಲೂರು ಮಲ್ಲಪ್ಪ ಅವರು ಹೆಸರು ಪಡೆದಿದ್ದರು. 1905ರಲ್ಲಿ ಜನಸಿದ್ದ ಅವರು ಮಹಾತ್ಮಾ ಗಾಂಧೀಜಿಗೆ ಜತೆಗೆ ನಿಕಟ ಸಂಪರ್ಕ ಹೊಂದಿದ್ದರು. ಸ್ವಾತಂತ್ರ್ಯ ಹೋರಾಟದ ನಂತರ ನಿಜಾಮ ಸರ್ಕಾರದ ವಿರುದ್ಧ ಚಳವಳಿಗಳಲ್ಲಿ ಪಾಲ್ಗೊಂಡಿದ್ದರು.

ವೀರಣ್ಣ ಶರಣಪ್ಪ ಚಟ್ನಳ್ಳಿ: ವೀರಣ್ಣ ಅವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. 1947ರಲ್ಲಿ ಹೈದರಾಬಾದ್ ವಿಮೋಚನಾ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ವಿಧಾನ ಪರಿಷತ್ ಸದಸ್ಯರಾಗಿ ಅವರು ಕಾರ್ಯನಿರ್ವಹಿಸಿದ್ದರು.

ಬಸಣ್ಣಗೌಡ ಚಂದಪ್ಪ, ಬಸವರಾಜ ಸಿದ್ದರಾಮಯ್ಯ, ಭೀಮರಾವ ಕಿಶನರಾವ, ಸಿದ್ದರಾಮಪ್ಪ ಶಂಕ್ರಪ್ಪ, ಚಂಡ್ರಿಕಿ ಜಗನ್ನಾಥರಾವ, ಹರಿದಾಸ ನಾರಾಯಣ, ಈಶ್ವರ ಲಾಲ ರಾಮಚಂದ್ರಪ್ಪ, ಕೃಷ್ಣರಾವ ರಾಘವೇಂದ್ರರಾವ, ಲಕ್ಷ್ಮಿಕಾಂತ ರಾಘವೇಂದ್ರರಾವ, ಬಡ್ಡೆಪ್ಪ ಮೋಟುಸಾಬ..ಹೀಗೆ ಅನೇಕ ಮಹನೀಯರು ನಿಜಾಮ ಸರ್ಕಾರದ ವಿರುದ್ಧ ಹೋರಾಟ ಮಾಡಿ, ಭಾರತದ ಒಕ್ಕೂಟಕ್ಕೆ ಸೇರಿಸುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ.

ಯಾದಗಿರಿ ತಾಲ್ಲೂಕಿನ ಹಲವು ಹೋರಾಟಗಾರರ ಶ್ರಮದಿಂದ ವಿಮೋಚನೆ ಪಡೆಯಲು ಸಾಧ್ಯವಾಗಿದೆ. ಅವರು ದೇಶ ಪ್ರೇಮ ತುಂಬಿಕೊಂಡು ಕೃಷಿ ಚಟುವಟಿಕೆ ಜತೆಗೆ ವಿಮೋಚನೆಗೆ ಹೋರಾಡಿದ್ದಾರೆ
ಡಾ.ಭೀಮರಾಯ ಲಿಂಗೇರಿ, ಇತಿಹಾಸ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.